ವ್ಯಾಪಾರ ಕಮ್ಮಿಯಾದ್ರೂ ಪರವಾಗಿಲ್ಲ ನಾನಂತೂ ಟೆಸ್ಟ್ ಕ್ರಿಕೆಟ್‌ಗೆ ವಾಪಸ್ ಬರಲ್ಲ! ಕೊಹ್ಲಿಯ ಖಡಕ್ ಉತ್ತರ ವೈರಲ್... Virat Kohli
- ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆತಂಕದ ನಡುವೆ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ ವಿರಾಟ್ ಕೊಹ್ಲಿ
- ಒನ್8 ವೇದಿಕೆಯಲ್ಲಿ ವಿರಾಟ್ ಕೊಹ್ಲಿ ಬಿಚ್ಚಿಟ್ಟ ಆ ಒಂದು ಸತ್ಯದಿಂದ ಅಭಿಮಾನಿಗಳಿಗೆ ನಿರಾಸೆ
- ಟೆಸ್ಟ್ ಕ್ರಿಕೆಟ್ ಕಥೆ ಮುಗಿದ ಅಧ್ಯಾಯ ಮತ್ತು ವಾಪಸ್ ಬರುವ ಮಾತೇ ಇಲ್ಲ ಎಂದು ರನ್ ಮಷಿನ್
Virat Kohli : ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಪಟ್ಟಿಯಲ್ಲಿ ಪ್ರಸ್ತುತ ಆರನೇ ಸ್ಥಾನದಲ್ಲಿರುವ ಭಾರತ ತಂಡವು ನಾಲ್ಕು ಗೆಲುವು, ಒಂದು ಸೋಲು ಹಾಗೂ ಒಂದು ಡ್ರಾ ಸಾಧಿಸಿ 52 ಅಂಕಗಳನ್ನು ಪಡೆದುಕೊಂಡಿದ್ದು, ಟೆಸ್ಟ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಇನ್ನು ಮುಂದೆ ಕಠಿಣ ಪರಿಶ್ರಮ ಪಡಬೇಕಾದ ಅನಿವಾರ್ಯತೆ ಎದುರಾಗಿದೆ. ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಹಿರಿಯ ಆಟಗಾರರ ಅನುಪಸ್ಥಿತಿಯಿಂದಾಗಿ ಭಾರತೀಯ ಟೆಸ್ಟ್ ತಂಡದಲ್ಲಿ ಉಂಟಾಗಿರುವ ಶೂನ್ಯತೆಯನ್ನು ತುಂಬಲು ಮತ್ತು ತಂಡವನ್ನು ಮತ್ತೆ ಯಶಸ್ಸಿನ ಹಾದಿಗೆ ತರಲು ವಿರಾಟ್ ಕೊಹ್ಲಿ ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂಪಡೆದು ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ. ಈ ನಿರಂತರ ಒತ್ತಾಯಗಳಿಗೆ ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ಅಂತಿಮವಾಗಿ ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ತಮ್ಮದೇ ಸಹ-ಮಾಲೀಕತ್ವದ ಕ್ರೀಡಾ ಉಡುಪುಗಳ ಬ್ರ್ಯಾಂಡ್ 'ಒನ್8' (One8) ನೂತನ ಉತ್ಪನ್ನಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ಗೆ ಮರಳುವ ಯಾವುದೇ ಸಾಧ್ಯತೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಕಾರ್ಯಕ್ರಮದ ನಿರೂಪಕ ಡ್ಯಾನಿಶ್ ಸೇಠ್ ಕೊಹ್ಲಿಯವರ ಒಟ್ಟು ಟೆಸ್ಟ್ ರನ್‌ಗಳಿಗೆ (9,230) ಸಮನಾಗಿ ನಿಗದಿಪಡಿಸಲಾದ ಶೂ ಬೆಲೆಯನ್ನು ಉಲ್ಲೇಖಿಸಿ, ಮತ್ತಷ್ಟು ರನ್ ಗಳಿಸಿ ಉತ್ಪನ್ನದ ಮೌಲ್ಯ ಹೆಚ್ಚಿಸಲು ಟೆಸ್ಟ್‌ಗೆ ಮರಳುತ್ತೀರಾ ಎಂದು ತಮಾಷೆಯಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, "ನಾನು ಕಡಿಮೆ ವ್ಯಾಪಾರ ಮಾಡಲೂ ಸಿದ್ಧ, ಆದರೆ ಟೆಸ್ಟ್ ಕ್ರಿಕೆಟ್ ಕಥೆ ಮುಗಿದ ಅಧ್ಯಾಯ" ಎಂದು ಕಡಾಖಂಡಿತವಾಗಿ ಹೇಳುವ ಮೂಲಕ ತಮ್ಮ ಪುನರಾಗಮನದ ಕುರಿತಾದ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ದೆಹಲಿಯಲ್ಲಿ ನಡೆದ 'ಒನ್8' (One8) ಬ್ರ್ಯಾಂಡ್‌ನ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ನಿರೂಪಕ ಹಾಗೂ ಹಾಸ್ಯನಟ ಡ್ಯಾನಿಶ್ ಸೇಠ್ ಅವರು, ಅಲ್ಲಿ ಪ್ರದರ್ಶಿಸಲಾಗಿದ್ದ ಶೂ ಜೋಡಿಯೊಂದರ ಬೆಲೆ 9,230 ರೂಪಾಯಿ ಇರುವುದನ್ನು ಗಮನಿಸಿ ಕೌತುಕ ವ್ಯಕ್ತಪಡಿಸಿದರು. ಆ ಬಳಿಕ ವೇದಿಕೆಯ ಮೇಲೆ ವಿರಾಟ್ ಕೊಹ್ಲಿ ಅವರೊಂದಿಗೆ ಸಂವಾದ ನಡೆಸುವಾಗ ಡ್ಯಾನಿಶ್ ಈ ವಿಷಯವನ್ನು ಪ್ರಸ್ತಾಪಿಸಿ ಪ್ರಶ್ನಿಸಿದಾಗ, ಈ ಬೆಲೆಯ ಹಿಂದಿನ ಅಸಲಿ ರಹಸ್ಯ ಹೊರಬಿದ್ದಿತು. ಈ ಕುರಿತು ಮಾತನಾಡಿದ ಕೊಹ್ಲಿ, ಆ ಶೂನ ಬೆಲೆಯನ್ನು ಸುಮ್ಮನೆ ನಿಗದಿಪಡಿಸಿಲ್ಲ, ಬದಲಿಗೆ ಅದು ತಾವು ಟೆಸ್ಟ್ ಕ್ರಿಕೆಟ್‌ನಲ್ಲಿ ಗಳಿಸಿರುವ ಒಟ್ಟು ರನ್‌ಗಳ (9,230 ರನ್) ಸಂಖ್ಯೆಯನ್ನು ಸಂಕೇತಿಸುತ್ತದೆ ಎಂಬ ಸ್ವಾರಸ್ಯಕರ ಸತ್ಯವನ್ನು ಸ್ವತಃ ಬಿಚ್ಚಿಟ್ಟರು.
ಅಆಂದಹಾಗೆ, ಕಳೆದ ವರ್ಷದ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ, ತಮ್ಮ 14 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಭಾರತ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಮತ್ತು ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ತಾವು ಆಡಿದ 123 ಟೆಸ್ಟ್ ಪಂದ್ಯಗಳ 210 ಇನ್ನಿಂಗ್ಸ್‌ಗಳಲ್ಲಿ 30 ಶತಕ ಹಾಗೂ 31 ಅರ್ಧಶತಕಗಳ ನೆರವಿನಿಂದ ಒಟ್ಟು 9,230 ರನ್ ಗಳಿಸಿರುವ ಕೊಹ್ಲಿ, ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (15,921 ರನ್), ರಾಹುಲ್ ದ್ರಾವಿಡ್ (13,265 ರನ್) ಮತ್ತು ಸುನಿಲ್ ಗವಾಸ್ಕರ್ (10,122 ರನ್) ಅವರ ನಂತರದ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ, (ಏಜೆನ್ಸೀಸ್).