ದೋಹಾ: ಕತಾರ್ನ ದೋಹಾದಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ 2026ರ ಟೂರ್ನಿಯಲ್ಲಿ ಕೇವಲ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ( Vaibhav Suryavanshi ) ಸಿಡಿಸಿದ ಐತಿಹಾಸಿಕ ದ್ವಿಶತಕಕ್ಕೆ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗಿದೆ. ಯುಎಇ ವಿರುದ್ಧದ ಪಂದ್ಯದಲ್ಲಿ ಕೇವಲ 53 ಎಸೆತಗಳಲ್ಲಿ 28 ಸಿಕ್ಸರ್ ಹಾಗೂ 7 ಬೌಂಡರಿ ಸೇರಿದಂತೆ 204 ರನ್ ಚಚ್ಚುವ ಮೂಲಕ ವಿಶ್ವದಾಖಲೆ ನಿರ್ಮಿಸಿರುವ ಈ ಯುವ ಪ್ರತಿಭೆಯ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದು, ವೈಭವ್ ಅವರ ಗುರಿ ಕೇವಲ ಬೌಂಡರಿ, ಸಿಕ್ಸರ್ ಬಾರಿಸುವುದಲ್ಲ, ಬದಲಾಗಿ ಭಾರತೀಯ ಹಿರಿಯರ ತಂಡದ ಉನ್ನತ ಮಟ್ಟದಲ್ಲಿ ಇದೇ ರೀತಿಯ ಪ್ರದರ್ಶನ ನೀಡುವುದಾಗಿದೆ ಎಂದು ಹೇಳಿದ್ದಾರೆ.
ಮಂಗಳವಾರ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಒಂದೇ ಇನ್ನಿಂಗ್ಸ್ನಲ್ಲಿ ಲಿಸ್ಟ್-ಎ ಕ್ರಿಕೆಟ್ನ ಅತಿ ವೇಗದ ಶತಕ ಮತ್ತು ದ್ವಿಶತಕದ ವಿಶ್ವದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು. 2023ರಲ್ಲಿ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್ಗುರ್ಕ್ ಬಾರಿಸಿದ್ದ 29 ಎಸೆತಗಳ ವೇಗದ ಶತಕದ ದಾಖಲೆಯನ್ನು ಕೇವಲ 28 ಎಸೆತಗಳಲ್ಲಿ ಮುರಿದ ವೈಭವ್, ಬಳಿಕ 2024ರಲ್ಲಿ ಚಾಡ್ ಬೋವ್ಸ್ ನಿರ್ಮಿಸಿದ್ದ 103 ಎಸೆತಗಳ ವೇಗದ ದ್ವಿಶತಕದ ದಾಖಲೆಯನ್ನು ಕೇವಲ 52 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಧೂಳೀಪಟ ಮಾಡಿದರು. ಯುಎಇ ನೀಡಿದ್ದ 250 ರನ್ಗಳ ಗುರಿಯನ್ನು ಭಾರತ-ಎ ತಂಡ ಕೇವಲ 14.3 ಓವರ್ಗಳಲ್ಲಿ ತಲುಪುವಲ್ಲಿ ವೈಭವ್ ಅವರ 28 ಸಿಕ್ಸರ್ ಮತ್ತು 7 ಬೌಂಡರಿಗಳ ಅಬ್ಬರದ ಇನ್ನಿಂಗ್ಸ್ ಪ್ರಮುಖ ಪಾತ್ರ ವಹಿಸಿತು.
ಯೂಟ್ಯೂಬ್ ಕಾರ್ಯಕ್ರಮ 'ದಿ ಗೇಮ್ಪ್ಲಾನ್'ನಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ಬ್ಯಾಟರ್ ಬಾಸಿತ್ ಅಲಿ, ವೈಭವ್ ಆಟದ ಹಿಂದಿನ ಶಿಸ್ತು ಮತ್ತು ಕಲಿಕಾ ಮನೋಭಾವವನ್ನು ಕೊಂಡಾಡಿದ್ದಾರೆ. "ವೈಭವ್ ಸೂರ್ಯವಂಶಿ ಅವರ ಗುರಿ ಕೇವಲ ಬೌಂಡರಿ ಮತ್ತು ಸಿಕ್ಸರ್ಗಳನ್ನು ಹೊಡೆಯುವುದಲ್ಲ, ಬದಲಾಗಿ ಉನ್ನತ ಮಟ್ಟಕ್ಕೆ ತಲುಪಿ ಭಾರತಕ್ಕಾಗಿ ಇದೇ ರೀತಿ ಪ್ರದರ್ಶನ ನೀಡುವುದು ಅವರ ನಿಜವಾದ ಗುರಿಯಾಗಿದೆ ಎಂದು ಹೇಳಿದರು.
ಈ ಹಿಂದೆ ಪಾಕಿಸ್ತಾನದ ಬೌಲರ್ ಮೊಹಮ್ಮದ್ ಇಮ್ರಾನ್ ರೂಪಿಸಿದ್ದ ತಂತ್ರಕ್ಕೆ ಸಿಲುಕಿ ವೈಭವ್ ಅವರು ವಿಕೆಟ್ ಒಪ್ಪಿಸಿದ್ದರು. ಆದರೆ, ಯುಎಇ ವಿರುದ್ಧ ಆ ತಪ್ಪನ್ನು ಮಾಡಲಿಲ್ಲ. ಕೇವಲ ಸ್ಪಿನ್ನರ್ಗಳ ವಿರುದ್ಧ ಮಾತ್ರವಲ್ಲ, ವೇಗದ ಬೌಲರ್ಗಳ ಎಸೆತಗಳಲ್ಲೂ ಪಾಯಿಂಟ್ ಮತ್ತು ಎಕ್ಸ್ಟ್ರಾ ಕವರ್ ದಿಕ್ಕಿನಲ್ಲಿ ಭರ್ಜರಿ ಸಿಕ್ಸರ್ಗಳನ್ನು ಬಾರಿಸಿದರು. ಪಾಕಿಸ್ತಾನದ ವಿರುದ್ಧ ಬೀಸುವ ಆಟಕ್ಕೆ ಕೈಹಾಕಿ ತಪ್ಪು ಮಾಡಿದ್ದ ಅವರು, ಪ್ರತಿ ಪಂದ್ಯದ ತಪ್ಪುಗಳಿಂದ ಪಾಠ ಕಲಿಯುತ್ತಿದ್ದಾರೆ. ತಂಡದ ಮ್ಯಾನೇಜ್ಮೆಂಟ್ ಹಾಗೂ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಅವರಂತಹ ಸಹ ಆಟಗಾರರು ಅವರಿಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಬಾಸಿತ್ ಅಲಿ ವಿಶ್ಲೇಷಿಸಿದ್ದಾರೆ.
ಇದೇ ವೇಳೆ ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದಾಖಲೆಯನ್ನೂ ವೈಭವ್ ಮುರಿದಿದ್ದಾರೆ. 12ನೇ ಓವರ್ನಲ್ಲಿ ಸ್ಪಿನ್ನರ್ ಉದ್ದಿಶ್ ಸೂರಿ ಬೌಲಿಂಗ್ನಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿದ ಅವರು, 2018ರಲ್ಲಿ ಆಸ್ಟ್ರೇಲಿಯಾದ ಡಿ'ಆರ್ಸಿ ಶಾರ್ಟ್ ನಿರ್ಮಿಸಿದ್ದ 23 ಸಿಕ್ಸರ್ಗಳ ದಾಖಲೆಯನ್ನು ಹಿಂದಿಕ್ಕಿ ಒಟ್ಟು 28 ಸಿಕ್ಸರ್ ಚಚ್ಚಿದರು. ಈ ಬಗ್ಗೆ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ಬಾಸಿತ್ ಅಲಿ, "ವೈಭವ್ ವಯಸ್ಸಿನ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಇನ್ನು ನಿಲ್ಲಬೇಕು. ಚೆಂಡನ್ನು ಬ್ಯಾಟ್ನ ಮಧ್ಯಭಾಗದಲ್ಲಿ ಹೊಡೆಯುವುದಷ್ಟೇ ಅವರ ಅಭ್ಯಾಸವಾಗಿದೆ, ಮಿಸ್ ಆದರೆ ಔಟ್, ತಾಗಿದರೆ ಚೆಂಡು ಮೈದಾನದಿಂದ ಹೊರಗೆ. ಬರೋಬ್ಬರಿ 196 ರನ್ಗಳು ಕೇವಲ ಬೌಂಡರಿ ಮತ್ತು ಸಿಕ್ಸರ್ಗಳಿಂದಲೇ ಬಂದಿವೆ. ಪದೇಪದೆ ಸಿಕ್ಸರ್ ಮತ್ತು ಬೌಂಡರಿ ಸಿಗ್ನಲ್ ನೀಡಿ ಅಂಪೈರ್ಗಳ ಕೈಗಳು ಸೋತುಹೋಗಿದ್ದು, ಅವರು ಕೈಗಳಿಗೆ ಮಸಾಜ್ ಮಾಡಿಸಿಕೊಳ್ಳುವಂತಾಗಿದೆ ಎಂದು ಚಟಾಕಿ ಹಾರಿಸಿದ್ದಾರೆ.
16 ಎಸೆತಗಳಲ್ಲಿ ಅರ್ಧಶತಕ ಹಾಗೂ 28 ಎಸೆತಗಳಲ್ಲಿ ಶತಕ ಪೂರೈಸಿದ್ದ ವೈಭವ್, 13ನೇ ಓವರ್ನಲ್ಲಿ ಔಟಾಗುವ ಮುನ್ನ 28 ಸಿಕ್ಸರ್ ಸಿಡಿಸುವ ಮೂಲಕ ಭಾರತದ ಪರ ಲಿಸ್ಟ್-ಎ ಕ್ರಿಕೆಟ್ನಲ್ಲಿ ರೋಹಿತ್ ಶರ್ಮ ಮತ್ತು ರುತುರಾಜ್ ಗಾಯಕ್ವಾಡ್ (ತಲಾ 16 ಸಿಕ್ಸರ್) ಹೊಂದಿದ್ದ ದಾಖಲೆಯನ್ನೂ ಅಳಿಸಿಹಾಕಿದರು, (ಏಜೆನ್ಸೀಸ್).