ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಮಗ ಜೊರಾವರ್ ಜೊತೆಗಿರುವ ಹಳೆಯ ಸಂತಸದ ಕ್ಷಣದ ಫೋಟೋ. 
ಕ್ರಿಕೆಟ್

ನಾಲ್ಕು ವರ್ಷದಿಂದ ಅವನೊಂದಿಗೆ ಮಾತನಾಡಿಲ್ಲ: ಮಗ 'ಜೊರಾವರ್' ನೆನೆದು ಭಾವುಕರಾದ ಶಿಖರ್ ಧವನ್! Shikhar Dhawan

ನವದೆಹಲಿ: ಟೀಮ್ ಇಂಡಿಯಾದ 'ಗಬ್ಬರ್' ಎಂದೇ ಖ್ಯಾತರಾಗಿರುವ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್, ಮೈದಾನದಲ್ಲಿ ಯಾವಾಗಲೂ ನಗುನಗುತ್ತಲೇ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸುತ್ತಿದ್ದವರು.

ಆದರೆ, ಅವರ ಆ ನಗುವಿನ ಹಿಂದೆ ಒಬ್ಬ ತಂದೆಯ ಅಸಹಾಯಕತೆ ಮತ್ತು ಮಗನನ್ನು ಕಾಣದ ನೋವು ಅಡಗಿದೆ ಎಂಬುದು ಇದೀಗ ಬಹಿರಂಗವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ತಮ್ಮ ಮುದ್ದಿನ ಮಗ ಜೊರಾವರ್ ಜೊತೆ ಮಾತನಾಡಲು ಸಾಧ್ಯವಾಲಿಲ್ಲ ಎಂಬ ಭಾವುಕ ಸತ್ಯವನ್ನು ಧವನ್ ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗೆ, ಯೂಟ್ಯೂಬ್ ಚಾನೆಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಧವನ್ ತಮ್ಮ ವೈಯಕ್ತಿಕ ಜೀವನದ ನೋವಿನ ಪುಟಗಳನ್ನು ತೆರೆದಿಟ್ಟಿದ್ದಾರೆ. ಮಗನಿಂದ ದೂರವಿರುವುದು ಎಷ್ಟು ಕಷ್ಟಕರವಾಗಿದೆ ಮತ್ತು ತಂದೆಯಾಗಿ ತಾವು ಪ್ರತಿದಿನ ಎದುರಿಸುತ್ತಿರುವ ಮಾನಸಿಕ ತೊಳಲಾಟ ಎಂಥದ್ದು ಎಂಬುದನ್ನು ಅವರು ಮನಬಿಚ್ಚಿ ಮಾತನಾಡಿದ್ದಾರೆ.

ನಂಬರ್ ಬ್ಲಾಕ್ ಆಗಿದ್ದರೂ ಮೆಸೇಜ್ ನಿಲ್ಲಿಸಿಲ್ಲ!

ನಾನು ಕಳೆದ ನಾಲ್ಕು ವರ್ಷಗಳಿಂದ ನನ್ನ ಮಗ ಜೊರಾವರ್ ಜೊತೆ ಮಾತನಾಡಿಲ್ಲ. ಅವನೊಂದಿಗೆ ನನಗೆ ಈಗ ಯಾವುದೇ ನೇರ ಸಂಪರ್ಕವಿಲ್ಲ. ನನ್ನ ನಂಬರ್ ಬ್ಲಾಕ್ ಮಾಡಲಾಗಿದೆ. ಆದರೂ ನಾನು ಪ್ರತಿದಿನ ಆ ಬ್ಲಾಕ್ ಆಗಿರುವ ನಂಬರ್‌ಗೇ ಮೆಸೇಜ್ ಕಳುಹಿಸುತ್ತಲೇ ಇರುತ್ತೇನೆ ಎಂದು ಧವನ್ ಭಾವುಕರಾಗಿ ಹೇಳಿಕೊಂಡಿದ್ದಾರೆ.

ನಾನು ಅವನಿಗೆ ನಿರಂತರವಾಗಿ ಪಾಸಿಟಿವ್ ಎನರ್ಜಿ ಕಳುಹಿಸುತ್ತಲೇ ಇದ್ದೇನೆ. ಒಂದಲ್ಲ ಒಂದು ದಿನ ನಾವು ಖಂಡಿತಾ ಮತ್ತೆ ಒಂದಾಗುತ್ತೇವೆ ಎಂಬ ಆಶಾವಾದ ನನ್ನಲ್ಲಿದೆ. ತಂದೆಯಾದ ಮೇಲೆಯೇ ನನಗೆ ಅನ್​​ಕಂಡೀಶನಲ್​ ಲವ್​ ಎಂದರೇನು ಎಂಬ ನಿಜವಾದ ಅರ್ಥ ತಿಳಿಯಿತು ಎನ್ನುತ್ತಾರೆ ಧವನ್.

ವೈವಾಹಿಕ ಜೀವನದ ಏರಿಳಿತ!

ಶಿಖರ್ ಧವನ್ 2012 ರಲ್ಲಿ ಆಯೇಷಾ ಮುಖರ್ಜಿ ಅವರನ್ನು ವಿವಾಹವಾಗಿದ್ದರು. 2013 ರ ಡಿಸೆಂಬರ್‌ನಲ್ಲಿ ಈ ದಂಪತಿಗೆ ಜೊರಾವರ್ ಜನಿಸಿದ್ದ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಕ್ರಮೇಣ ದಂಪತಿಯ ನಡುವೆ ಭಿನ್ನಾಭಿಪ್ರಾಯಗಳು ಮೂಡಿ 2021 ರಲ್ಲಿ ಇಬ್ಬರೂ ಬೇರ್ಪಟ್ಟರು.

ಬಳಿಕ 2023ರಲ್ಲಿ ನ್ಯಾಯಾಲಯ ಇವರಿಗೆ ಅಧಿಕೃತವಾಗಿ ವಿಚ್ಛೇದನ ನೀಡಿತ್ತು. ವಿಚ್ಛೇದನದ ಕಾನೂನು ಹೋರಾಟ ನಡೆಯುತ್ತಿದ್ದ ಸಮಯದಲ್ಲೂ ಧವನ್, ಮಗನನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದರು.

ಮತ್ತೊಮ್ಮೆ ಮದುವೆ; ಮರೆಯಲಾಗದ ಮಗ!

ಆಯೇಷಾ ಅವರಿಂದ ದೂರವಾದ ನಂತರ, ಧವನ್ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. 2026 ರ ಫೆಬ್ರವರಿಯಲ್ಲಿ ಐರಿಷ್ ಮೂಲದ ಸೋಫಿ ಶೈನ್ ಅವರನ್ನು ವಿವಾಹವಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ವೈವಾಹಿಕ ಜೀವನದಲ್ಲಿ ಮುಂದೆ ಸಾಗಿದ್ದರೂ, ಮಗ ಜೊರಾವರ್ ಮೇಲಿನ ಮಮತೆ ಮಾತ್ರ ಎಳ್ಳಷ್ಟೂ ಕಡಿಮೆಯಾಗಿಲ್ಲ.

ಜೀವನದಲ್ಲಿ ಮುಂದುವರಿಯುವುದು ಎಂದರೆ, ನಾವು ಮತ್ತೆ ಕಟ್ಟಿಕೊಳ್ಳಲು ಬಯಸುವ ಸಂಬಂಧವನ್ನು ಕೈಬಿಡುವುದು ಎಂದರ್ಥವಲ್ಲ ಎಂಬ ಧವನ್ ಅವರ ಮಾತುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಧವನ್ ಅವರ ಈ ನೋವಿನ ಮಾತುಗಳನ್ನು ಕೇಳಿ ಅಭಿಮಾನಿಗಳು ಕೂಡ ಭಾವುಕರಾಗಿದ್ದು, ಆದಷ್ಟು ಬೇಗ ತಂದೆ-ಮಗ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ (ಏಜೆನ್ಸೀಸ್).