ಕ್ರಿಕೆಟ್

ಕ್ರಿಕೆಟ್‌ನಲ್ಲೂ ದ್ವೇಷದ ರಾಜಕೀಯ ಬೇಡ: ಕಾಂಗ್ರೆಸ್​ ಸಂಸದ ಮಸೂದ್ ಹೇಳಿಕೆಗೆ ಸ್ವಪಕ್ಷೀಯ ನಾಯಕಿಯಿಂದಲೇ ಛೀಮಾರಿ! | Siraj Selection Controversy

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆಡುವ ಹನ್ನೊಂದರ ಬಳಗದಿಂದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವುದಕ್ಕೆ (Siraj Selection Controversy) ಧರ್ಮವೇ ಕಾರಣ ಎಂಬ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಆರೋಪಕ್ಕೆ ದಿನ ಕಳೆದಂತೆ ವಿರೋಧ ಹೆಚ್ಚಾಗುತ್ತಿದ್ದು, ಬೇರೆ ಬೇರೆ ಪಕ್ಷದವರಷ್ಟೆ ಅಲ್ಲದೇ, ಸ್ವತಃ ಕೈ ನಾಯಕರುಗಳೇ ಮಸೂದ್​ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ.

ಈಗ ಸ್ವಪಕ್ಷದ ಸಂಸದನ ಹೇಳಿಕೆಯಿಂದ ಕಾಂಗ್ರೆಸ್ ನಾಯಕಿ ಮುಮ್ತಾಜ್ ಪಟೇಲ್ ಅಂತರ ಕಾಯ್ದುಕೊಂಡಿದ್ದರೆ, ಮಾಜಿ ಕ್ರಿಕೆಟಿಗ ಮದನ್ ಲಾಲ್ ಮತ್ತು ಶಿವಸೇನೆ ನಾಯಕ ಆನಂದ್ ದುಬೆ ಅವರು ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಧರ್ಮವಲ್ಲ, ಫಾರ್ಮ್ ಆಧಾರದ ಮೇಲೆ ಆಯ್ಕೆ: ಮುಮ್ತಾಜ್ ಪಟೇಲ್

ಇಮ್ರಾನ್ ಮಸೂದ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಮುಮ್ತಾಜ್ ಪಟೇಲ್, ಕ್ರಿಕೆಟ್‌ನಲ್ಲಿ ದ್ವೇಷ ಅಥವಾ ಧಾರ್ಮಿಕ ವಿಭಜನೆಗೆ ಯಾವುದೇ ತರನಾದ ಜಾಗವಿಲ್ಲ, ಟೀಮ್ ಇಂಡಿಯಾ ಬಗ್ಗೆ ಮಾತನಾಡುವಾಗ ಅಲ್ಲಿ ಅತ್ಯಂತ ಪ್ರಮುಖವಾದದ್ದು ಭಾರತ ಮಾತ್ರ. ಇಂತಹ ಧಾರ್ಮಿಕ ವಿಭಜನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು, ತಂಡದ ಆಯ್ಕೆಯ ವಿಷಯದಲ್ಲಿ ಸದಾ ಪ್ರತಿಭೆ ಮತ್ತು ಫಾರ್ಮ್‌ಗೆ ಮಾತ್ರ ಆದ್ಯತೆ ನೀಡಲಾಗಿದ್ದು, ನಿರ್ದಿಷ್ಟ ಟೂರ್ನಿಗಳಿಗೆ ತಂಡಕ್ಕೆ ಅತ್ಯುತ್ತಮವಾಗಿ ಸೆಟ್​ ಆಗುವ ಮತ್ತು ಅತ್ಯುತ್ತಮ ಫಾರ್ಮ್‌ನಲ್ಲಿರುವ ಆಟಗಾರರನ್ನೇ ಆಯ್ಕೆ ಮಾಡಲಾಗುತ್ತದೆ. ರಾಜ್ಯ, ಧರ್ಮ, ಸಂಸ್ಕೃತಿ ಅಥವಾ ಜಾತಿಯ ಹೆಸರಿನಲ್ಲಿ ಕ್ರಿಕೆಟ್ ವಿಭಜನೆಯಾಗಿದ್ದನ್ನು ನಾನು ಎಂದಿಗೂ ನೋಡಿಲ್ಲ. ಇದನ್ನು ದೂರವಿಡೋಣ ಎಂದು ಪಟೇಲ್​ ಸಲಹೆ ನೀಡಿದ್ದಾರೆ.

ಇದೇ ವೇಳೆ, ಯಾರ ಹೆಸರನ್ನು ಸಹ ಉಲ್ಲೇಖಿಸದೆ ತಮ್ಮ ವಾಗ್ದಾಳಿ ಮುಂದುವರೆಸಿದ ಪಟೇಲ್, ದೇಶದಲ್ಲಿ ದ್ವೇಷ ಮತ್ತು ವಿಭಜನೆಯ ವಾತಾವರಣ ಸೃಷ್ಟಿಸಬಾರದು. ಬಟ್ಟೆಯಿಂದ ಜನರನ್ನು ಗುರುತಿಸುವ ಬಗ್ಗೆ ಅಥವಾ ಬಟೇಂಗೆ ತೋ ಕಟೇಂಗೆ ಎಂಬಂತಹ ಹೇಳಿಕೆಗಳನ್ನು ವೇದಿಕೆಗಳಲ್ಲಿ ನೀಡಿದಾಗ ಅದು ದೇಶದಲ್ಲಿ ನಕಾರಾತ್ಮಕ ವಾತಾವರಣ ನಿರ್ಮಿಸುತ್ತದೆ. ಕ್ರಿಕೆಟ್ ವಿಷಯದಲ್ಲಿ ನಾವೆಲ್ಲರೂ ಟೀಮ್ ಇಂಡಿಯಾ ಆಗಿ ಒಗ್ಗಟ್ಟಾಗಿರೋಣ ಎಂದು ಹೇಳಿದರು.

ಟೀಮ್​ ಇಂಡಿಯಾದಲ್ಲಿ ತಾರತಮ್ಯ ನಡೆದಿಲ್ಲ: ಮದನ್ ಲಾಲ್

1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿರುವ ಮಾಜಿ ಆಲ್‌ರೌಂಡರ್ ಮದನ್ ಲಾಲ್ ಅವರು ಇಮ್ರಾನ್ ಮಸೂದ್ ಆರೋಪವನ್ನು ತಳ್ಳಿಹಾಕಿದರು. ಈ ಪ್ರಶ್ನೆಯನ್ನು ಯಾರು ಎತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ, ಅದಕ್ಕೆ ನನ್ನ ಬಳಿ ಉತ್ತರವೂ ಇಲ್ಲ. ಆದರೆ ಭಾರತೀಯ ಕ್ರಿಕೆಟ್‌ನಲ್ಲಿ ಇಂತಹ ಘಟನೆ ಎಂದಿಗೂ ನಡೆದಿಲ್ಲ. ನೀವು ಇತಿಹಾಸ ತೆಗೆದು ನೋಡಬಹುದು, ಇಂತಹ ತಾರತಮ್ಯ ಯಾವತ್ತೂ ಆಗಿಲ್ಲ. ವಿವಿಧ ಧರ್ಮಗಳ ಹಲವು ಆಟಗಾರರು ನಮ್ಮ ಪರ ಆಡಿದ್ದಾರೆ. ಇದನ್ನು ವಿವಾದ ಮಾಡುವುದು ನಿಮಗೆ ಬಿಟ್ಟಿದ್ದು, ಆದರೆ ಇದು ಹಿಂದೆಯೂ ನಡೆದಿಲ್ಲ, ಭವಿಷ್ಯದಲ್ಲೂ ಇದು ನಡೆಯುವುದಿಲ್ಲ ಎಂದು ಲಾಲ್​ ಖಡಾಖಂಡಿತವಾಗಿ ಹೇಳಿದರು.

ಕೇವಲ 11 ಮಂದಿಗೆ ಅವಕಾಶ: ಆನಂದ್ ದುಬೆ ಆಕ್ರೋಶ

ಶಿವಸೇನೆಯ ಶಿಂಧೆ ಬಣದ ನಾಯಕ ಆನಂದ್ ದುಬೆ ಅವರು ಕಾಂಗ್ರೆಸ್ ಸಂಸದರ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದು, ಕ್ರೀಡೆಯಲ್ಲಿ ಕೋಮುವಾದ ಬೆರೆಸುತ್ತಿದ್ದಾರೆ ಎಂದು ಆರೋಪಿಸಿದರು. ಇಮ್ರಾನ್ ಮಸೂದ್ ಅವರು ದಿಮಾಗಿ ನಕ್ಸಲ್ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಮುಸ್ಲಿಂ ಎಂಬ ಕಾರಣಕ್ಕೆ ಭಾರತದ ರಾಷ್ಟ್ರಪತಿಯಾಗಲಿಲ್ಲ; ಅವರು ಸಮರ್ಥರಾಗಿದ್ದರು. ಮೊಹಮ್ಮದ್ ಅಜರುದ್ದೀನ್ ಅವರು ಮುಸ್ಲಿಂ ಎಂಬ ಕಾರಣಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕರಾಗಲಿಲ್ಲ, ಬದಲಿಗೆ ಅದ್ಭುತವಾಗಿ ಆಡಿದ್ದರಿಂದ ನಾಯಕರಾದರು. ಇದರಲ್ಲಿ ಹಿಂದೂ-ಮುಸ್ಲಿಂ ಏಕೆ ತರುತ್ತೀರಿ? ಇದು ಕ್ರಿಕೆಟ್. 147 ಕೋಟಿ ಜನಸಂಖ್ಯೆಯಲ್ಲಿ ಕೇವಲ 11 ಮಂದಿ ಮಾತ್ರ ಆಡುತ್ತಾರೆ, ಅದಕ್ಕಾಗಿ ರಕ್ತ ಮತ್ತು ಬೆವರು ಹರಿಸಬೇಕು ಎಂದು ಅವರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇಮ್ರಾನ್ ಮಸೂದ್ ಹೇಳಿದ್ದೇನು..?

ಶುಕ್ರವಾರ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ್ದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ಉತ್ತಮ ಪ್ರದರ್ಶನದ ಹೊರತಾಗಿಯೂ ಸಿರಾಜ್ ಅವರ ಹೆಸರಿನ ಕಾರಣಕ್ಕಾಗಿ ತಂಡದಲ್ಲಿ ಅವಕಾಶ ನೀಡಿಲ್ಲ ಎಂದು ಆರೋಪಿಸಿದ್ದರು. ಅವರ ಹೆಸರು ಸಿರಾಜ್ ಎಂಬ ಕಾರಣಕ್ಕೆ ಸ್ಥಾನ ನೀಡಿಲ್ಲ. ಉತ್ತಮ ಪ್ರದರ್ಶನದ ನಡುವೆಯೂ ಆಯ್ಕೆ ಮಾಡದಿದ್ದರೆ, ಅಲ್ಲಿ ತಾರತಮ್ಯ ನಡೆದಿರುವುದು ಸ್ಪಷ್ಟ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಮಸೂದ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಕ್ರಿಕೆಟ್ ತಂಡದ ಆಯ್ಕೆಯಲ್ಲೂ ಕಾಂಗ್ರೆಸ್ ವೊಟ್​ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು! ಸಿರಾಜ್ ಮುಸ್ಲಿಂ ಎಂಬ ಕಾರಣಕ್ಕೆ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಅವರೊಂದಿಗೆ ರವೀಂದ್ರ ಜಡೇಜಾ ಅವರನ್ನೂ ಕೈಬಿಡಲಾಗಿದೆ, ಪ್ರತಿಯೊಬ್ಬ ಕ್ರಿಕೆಟಿಗನೂ ಭಾರತವನ್ನು ಪ್ರತಿನಿಧಿಸುವ ಜೆರ್ಸಿ ಧರಿಸುತ್ತಾನೆ. ವೋಟ್ ಬ್ಯಾಂಕ್ ಮತ್ತು ಕೋಮು ರಾಜಕೀಯಕ್ಕಾಗಿ ಟೀಮ್​ ಇಂಡಿಯಾ ಒಡೆಯುವುದನ್ನು ಮೊದಲು ನಿಲ್ಲಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ವಿರೋಧದ ನಡುವೆಯೂ ತಮ್ಮ ನಿಲುವಿಗೆ ಅಂಟಿಕೊಂಡಿರುವ ಇಮ್ರಾನ್ ಮಸೂದ್, ಶನಿವಾರ ಮತ್ತೆ ಮೊಹಮ್ಮದ್ ಶಮಿ ಮತ್ತು ಸರ್ಫರಾಜ್ ಖಾನ್ ಅವರ ಹೆಸರುಗಳನ್ನು ಉಲ್ಲೇಖಿಸಿ ತಾರತಮ್ಯದ ಆರೋಪವನ್ನು ಪುನರುಚ್ಚರಿಸಿದ್ದಾರೆ. ಮೊಹಮ್ಮದ್ ಶಮಿ, ಸರ್ಫರಾಜ್ ಸೇರಿದಂತೆ ಇನ್ನೂ ಹಲವರಿದ್ದಾರೆ. ಆಯ್ಕೆಯು ಪ್ರದರ್ಶನದ ಆಧಾರದ ಮೇಲೆ ನಡೆಯಬೇಕು. ಒಬ್ಬ ಆಟಗಾರ ಉತ್ತಮವಾಗಿ ಆಡುತ್ತಿದ್ದರೆ, ಆತ ಎಲ್ಲಿಂದ ಬಂದಿದ್ದಾನೆ ಎಂಬುದು ಮುಖ್ಯವಾಗಬಾರದು ಎಂದಿದ್ದಾರೆ. ಎಐಎಂಐಎಂ ನಾಯಕ ವಾರಿಸ್ ಪಠಾಣ್ ಕೂಡ ಮಸೂದ್ ಹೇಳಿಕೆಗೆ ಧ್ವನಿಗೂಡಿಸಿದ್ದು, ತಂಡದ ಆಯ್ಕೆ ಪ್ರತಿಭೆಯ ಆಧಾರದ ಮೇಲೆ ನಡೆಯುತ್ತಿದೆಯೇ ಅಥವಾ ಹೆಸರಿನ ಆಧಾರದ ಮೇಲೆಯೇ ಎಂದು ಪ್ರಶ್ನಿಸಿದ್ದಾರೆ(ಏಜೆನ್ಸೀಸ್​).