- ಜ.12ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯ
- ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ 9 ವಿಕೆಟ್ಗಳ ಭರ್ಜರಿ ಗೆಲುವು
- ತಂಡದ ಪರ ಸ್ಮೃತಿ ಮಂಧಾನ ಮತ್ತು ಗ್ರೇಸ್ ಹ್ಯಾರಿಸ್ ಸ್ಫೋಟಕ ಇನ್ನಿಂಗ್ಸ್
RCB vs UPW: ನಿನ್ನೆ (ಜ.12) ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL 2026) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಆರ್ಸಿಬಿ 9 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಸ್ಮೃತಿ ಮಂದನಾ ಬಳಗ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ
ಈ ಪಂದ್ಯದಲ್ಲಿ ಆರ್ಸಿಬಿ ಮಹಿಳಾ ಆಟಗಾರ್ತಿಯರಿಂದ ಅದ್ಭುತ ಆಲ್ರೌಂಡ್ ಪ್ರದರ್ಶನ ಬಂದಿದ್ದು, ಬ್ಯಾಟಿಂಗ್ನಲ್ಲಿ ತಂಡದ ಪರ ಸ್ಮೃತಿ ಮಂಧಾನ ಮತ್ತು ಗ್ರೇಸ್ ಹ್ಯಾರಿಸ್ ಸ್ಫೋಟಕ ಇನ್ನಿಂಗ್ಸ್ ಬೆಂಗಳೂರು ಪಡೆಗೆ ಭಾರೀ ಅಂತರದ ಗೆಲುವನ್ನೇ ತಂದುಕೊಟ್ಟಿತು. ಸತತ ಎರಡು ಗೆಲುವು ದಾಖಲಿಸಿರುವ ಆರ್ಸಿಬಿ ಮಹಿಳಾ ಪಡೆ, ಆರ್ಸಿಬಿ ಅಭಿಮಾನಿಗಳ ನಿರೀಕ್ಷೆ, ಪ್ರೀತಿಯನ್ನು ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಇನ್ನಷ್ಟು ದುಪ್ಪಟ್ಟಾಗಿಸಿದೆ.
ಪಂದ್ಯದ ವಿವರ
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್ಸಿಬಿಗೆ ಯುಪಿ ತಂಡದಿಂದ 143 ರನ್ಗಳ ಗುರಿ ಸಿಕ್ಕಿತು. ಈ ಸಾಧಾರಣ ಟಾರ್ಗೆಟ್ ಬೆನ್ನತ್ತಿದ ಬೆಂಗಳೂರು ಮಹಿಳಾ ಪಡೆಯ ಆರಂಭಿಕ ಬ್ಯಾಟ್ಸ್ವುಮನ್ಗಳಾದ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂಧಾನ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ಗಿಳಿದರು. ಗ್ರೇಸ್ ಹ್ಯಾರಿಸ್ ಕ್ರೀಸ್‌ಗೆ ಬಂದ ಕ್ಷಣದಿಂದಲೇ ಬೌಂಡರಿ ಮತ್ತು ಸಿಕ್ಸರ್‌ಗಳಿಂದ ದ್ವಿತೀಯ ಇನ್ನಿಂಗ್ಸ್ ಶುರುಮಾಡಿದರು.
ಕೇವಲ 40 ಎಸೆತಗಳಲ್ಲಿ ಗ್ರೇಸ್ 85 ರನ್ ಸಿಡಿಸಿದರು. ಇದರಲ್ಲಿ 10 ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದ್ದು ಮೈದಾನದಲ್ಲಿದ್ದ ಅಭಿಮಾನಿಗಳ ಸಂತಸಕ್ಕೆ ಕಾರಣವಾಯಿತು. ಮತ್ತೊಂದೆಡೆ, ಸ್ಮೃತಿ ಮಂಧಾನ (47 ಅಜೇಯ) ಕೂಡ ಅತ್ಯುತ್ತಮ ಪ್ರದರ್ಶನ ನೀಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.