ದುಬಾರಿ ಫೆರಾರಿ ಕಾರಿನ ಬಗ್ಗೆ ಮಾತನಾಡುತ್ತಾ ಹನುಮಾನ್ ಚಾಲೀಸಾ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಹಾರ್ದಿಕ್​! Hardik Pandya  
ಕ್ರಿಕೆಟ್

ದುಬಾರಿ ಫೆರಾರಿ ಕಾರಿನ ಬಗ್ಗೆ ಮಾತನಾಡುತ್ತಾ ಹನುಮಾನ್ ಚಾಲೀಸಾ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಹಾರ್ದಿಕ್​! Hardik Pandya

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಸುದ್ದಿಯಲ್ಲಿದ್ದಾರೆ
  • ದುಬಾರಿ ಜೀವನಶೈಲಿ ಮತ್ತು ವಿವಾದಗಳ ನಡುವೆ, ಹಾರ್ದಿಕ್​ ಅವರ ಒಳ್ಳೆಯ ಅಭ್ಯಾಸ ಬಹಿರಂಗವಾಗಿದೆ
  • ಕೋಟ್ಯಂತರ ಬೆಲೆಬಾಳುವ ತನ್ನ ಐಷಾರಾಮಿ ಕಾರಿನಲ್ಲಿ ಹನುಮಾನ್ ಚಾಲೀಸಾವನ್ನು ಕೇಳುತ್ತೇನೆ ಎಂದಿದ್ದಾರೆ
Hardik Pandya : ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ, ಈ ಬಾರಿ ಬೇರೆಯದೇ ಕಾರಣಕ್ಕೆ ಸುದ್ದಿಯಾಗಿದ್ದಾರೆ. ತಮ್ಮ ದುಬಾರಿ ಜೀವನಶೈಲಿ ಮತ್ತು ವಿವಾದಗಳ ನಡುವೆ, ಹಾರ್ದಿಕ್​ ಅವರ ಒಳ್ಳೆಯ ಅಭ್ಯಾಸ ಬಹಿರಂಗವಾಗಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ. ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಾತನಾಡಿರುವ ಪಾಂಡ್ಯ, ಕೋಟ್ಯಂತರ ಬೆಲೆಬಾಳುವ ತನ್ನ ಐಷಾರಾಮಿ ಕಾರಿನಲ್ಲಿ ಹನುಮಾನ್ ಚಾಲೀಸಾವನ್ನು ಕೇಳುತ್ತೇನೆ ಎಂದಿದ್ದಾರೆ.
ಟೀಮ್​ ಇಂಡಿಯಾ ಇತ್ತೀಚೆಗಷ್ಟೇ ಟಿ20 ವಿಶ್ವಕಪ್​ ಗೆದ್ದಿರುವುದು ಗೊತ್ತೇ ಇದೆ. ಈ ಗೆಲುವಿನ ಬೆನ್ನಲ್ಲೇ ಹಾರ್ದಿಕ್ ಅವರು 12 ಕೋಟಿ ರೂ. ಮೌಲ್ಯದ ಫೆರಾರಿ ಸಿಲಿಂಡ್ರಿ ಕಾರನ್ನು ಖರೀದಿಸಿದರು. ತನ್ನ ಗೆಳತಿ ಮಹಿಕಾ ಶರ್ಮಾ ಜೊತೆ ಕಾರು ಚಾಲನೆ ಮಾಡಿಕೊಂಡು ಬಂದ ವಿಡಿಯೋ ಈ ಹಿಂದೆ ಸಿಕ್ಕಾಪಟ್ಟೆ ವೈರಲ್​ ಆಯಿತು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿರುವ ಹಾರ್ದಿಕ್​, ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಕಾರು ಖರೀದಿಯ ಬಗ್ಗೆ ಪ್ರತಿಕ್ರಿಯಿಸಿದರು.
ಹನುಮಾನ್​ ಚಾಲಿಸಾ ಕೇಳುತ್ತೇನೆ
ನನ್ನ ಬಳಿ ಫೆರಾರಿ ಕಾರು ಇದೆ. ಅದರಲ್ಲಿ ನಾನು ಹನುಮಾನ್ ಚಾಲೀಸಾ ಕೇಳುತ್ತೇನೆ. ದೇವರು ನನ್ನನ್ನು ಆಶೀರ್ವದಿಸಿದ್ದಾನೆ. ಹನುಮಾನ್ ಚಾಲೀಸಾದಷ್ಟು ಸಕಾರಾತ್ಮಕ ಶಕ್ತಿಯನ್ನು ಯಾವುದೇ ಹಾಡು ನೀಡುವುದಿಲ್ಲ ಎಂದು ನಾನು ನಂಬುತ್ತೇನೆ ಎಂದರು. ಹಾರ್ದಿಕ್​ ಪಾಂಡ್ಯ ಅವರು ಈ ರೀತಿ ಹೇಳುತ್ತಿದ್ದಂತೆ ಅಲ್ಲಿ ನೆರೆದಿದ್ದ ಜನಸಮೂಹ "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗಿತು.
ಹಾರ್ದಿಕ್ ಪಾಂಡ್ಯ ತಮ್ಮ ಸ್ಟೈಲಿಶ್ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತವೆ. ಈಗಾಗಲೇ ಹಾರ್ದಿಕ್ ಅವರ ಗ್ಯಾರೆಜ್​ನಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಲಂಬೋರ್ಘಿನಿ ಹುರಾಕನ್ EVO, ಲಂಬೋರ್ಘಿನಿ ಉರಸ್, ಮರ್ಸಿಡಿಸ್-AMG G63, ರೇಂಜ್ ರೋವರ್ ಮತ್ತು ಆಡಿ A6 ಕಾರುಗಳಿವೆ. ಇದೀಗ ಹೊಸದಾಗಿ ದುಬಾರಿ ಫೆರಾರಿ ಕಾರು ಸೇರಿಕೊಂಡಿದೆ.
ಅಂದಹಾಗೆ, ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಲ್‌ರೌಂಡ್ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಒಂಬತ್ತು ಪಂದ್ಯಗಳಲ್ಲಿ 160 ಸ್ಟ್ರೈಕ್ ರೇಟ್‌ನಲ್ಲಿ 217 ರನ್ ಗಳಿಸಿದರು. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಬೌಲಿಂಗ್‌ನಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿದ್ದ ಹಾರ್ದಿಕ್, 9 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದರು.
ಇನ್ನೂ ಐಪಿಎಲ್​ ವಿಚಾರಕ್ಕೆ ಬರುವುದಾದರೆ, ಕಳೆದ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಪ್ರದರ್ಶನ ನೀಡಿ ಪ್ಲೇಆಫ್ ತಲುಪಿತು. ಇದೀಗ ಐಪಿಎಲ್ ಟ್ರೋಫಿಯ ಮೇಲೆ ಹಾರ್ದಿಕ್​ ತಮ್ಮ ದೃಷ್ಟಿ ನೆಟ್ಟಿದ್ದಾರೆ. 2024 ರಲ್ಲಿ ಹಾರ್ದಿಕ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಆ ಸಮಯದಲ್ಲಿ, ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಕಸಿದುಕೊಳ್ಳಲಾಯಿತು. ಈಗ, ಹಾರ್ದಿಕ್ ಮುಂಬೈ ತಂಡವನ್ನು ಆರನೇ ಬಾರಿಗೆ ಚಾಂಪಿಯನ್ ಮಾಡುವ ಗುರಿಯನ್ನು ಹೊಂದಿದ್ದಾರೆ, (ಏಜೆನ್ಸೀಸ್​).