ಅಹಮದಾಬಾದ್: ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸೋತು ನಿರಾಸೆಯಲ್ಲಿದ್ದ ಗುಜರಾತ್ ಟೈಟನ್ಸ್ (Gujarat Titans) ತಂಡಕ್ಕೆ ಭಾನುವಾರ ತಡರಾತ್ರಿ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಆಟಗಾರರನ್ನು ಹೊತ್ತೊಯ್ಯುತ್ತಿದ್ದ ತಂಡದ ಅಧಿಕೃತ ಬಸ್‌ನಲ್ಲಿ ದಿಢೀರ್ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್, ಸಕಾಲದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಬಸ್ಸಿನಲ್ಲಿದ್ದ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿ!
ಭಾನುವಾರ ರಾತ್ರಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಮುಗಿದ ಬಳಿಕ, ಗುಜರಾತ್ ಟೈಟನ್ಸ್ ತಂಡದ ಆಟಗಾರರು ಕ್ರೀಡಾಂಗಣದಿಂದ ಹೋಟೆಲ್‌ಗೆ ಬಸ್ಸಿನಲ್ಲಿ ಮರಳುತ್ತಿದ್ದರು. ಈ ವೇಳೆ ಬಸ್ಸಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಶಾರ್ಟ್ ಸರ್ಕ್ಯೂಟ್ ಆಗಿದೆ. ತಕ್ಷಣವೇ ಬಸ್ಸಿನ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟವಾದ ಹೊಗೆ ಆವರಿಸಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಮತ್ತು ಭದ್ರತಾ ಸಿಬ್ಬಂದಿ ತಕ್ಷಣವೇ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ, ಒಳಗಿದ್ದ ಎಲ್ಲಾ ಆಟಗಾರರನ್ನು ತುರ್ತಾಗಿ ಹೊರಗೆ ಕರೆತಂದಿದ್ದಾರೆ.
ಈ ಭೀಕರ ಅವಘಡದಿಂದಾಗಿ ಶುಭಮನ್ ಗಿಲ್ ಸೇರಿದಂತೆ ಗುಜರಾತ್ ತಂಡದ ಆಟಗಾರರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ಸಿಲುಕಿಕೊಳ್ಳಬೇಕಾಯಿತು. ನಂತರ ಪರ್ಯಾಯ ವಾಹನದ ವ್ಯವಸ್ಥೆ ಮಾಡಿ ಆಟಗಾರರನ್ನು ಸುರಕ್ಷಿತವಾಗಿ ಹೋಟೆಲ್‌ಗೆ ತಲುಪಿಸಲಾಯಿತು. ಸಮಯಪ್ರಜ್ಞೆಯಿಂದಾಗಿ ದೊಡ್ಡ ಮಟ್ಟದ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಸೋಲಿನ ಬೆನ್ನಲ್ಲೇ ಬೆಂಕಿ ಆಘಾತ
ಗುಜರಾತ್ ಟೈಟನ್ಸ್ ತಂಡಕ್ಕೆ ಭಾನುವಾರದ ರಾತ್ರಿ ಸಂಪೂರ್ಣವಾಗಿ ದುರದೃಷ್ಟಕರವಾಗಿತ್ತು. ಮೊದಲು ತವರು ಮೈದಾನದಲ್ಲೇ ಆರ್‌ಸಿಬಿ ವಿರುದ್ಧ 5 ವಿಕೆಟ್‌ಗಳ ಸೋಲು ಕಂಡು ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಡಬೇಕಾಯಿತು. ಈ ಬೇಸರದಲ್ಲಿದ್ದ ಆಟಗಾರರಿಗೆ ಹೋಟೆಲ್‌ಗೆ ಮರಳುವಾಗ ಎದುರಾದ ಈ ಅಗ್ನಿ ಅವಘಡ ಮತ್ತಷ್ಟು ಆತಂಕ ಮೂಡಿಸಿತು.
ಸುಸ್ತು ಮತ್ತು ಸತತ ಪ್ರಯಾಣವೇ ಸೋಲಿಗೆ ಕಾರಣವೇ?
ಫೈನಲ್ ಪಂದ್ಯಕ್ಕೂ ಮುನ್ನ ಗುಜರಾತ್ ಟೈಟನ್ಸ್ ತಂಡ ಅತ್ಯಂತ ಕಠಿಣವಾದ ಪ್ರಯಾಣದ ವೇಳಾಪಟ್ಟಿಯನ್ನು ಎದುರಿಸಿತ್ತು. ಮೇ 27 ರಂದು ಧರ್ಮಶಾಲಾದಿಂದ ಮುಲ್ಲನ್‌ಪುರಕ್ಕೆ ಪ್ರಯಾಣ ಬೆಳೆಸಿದ್ದ ಜಿಟಿ, ಮೇ 29 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್-2 ಪಂದ್ಯವನ್ನು ಆಡಿತ್ತು. ಅದಾದ ಬಳಿಕ ಮೇ 30 ರಂದು ಅಹಮದಾಬಾದ್‌ಗೆ ಬರಬೇಕಾಗಿದ್ದ ವಿಮಾನವು ಮುಲ್ಲನ್‌ಪುರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ತಡವಾಗಿತ್ತು. ಹೀಗಾಗಿ ಶನಿವಾರ ತಡರಾತ್ರಿಷ್ಟೇ ತಂಡ ಅಹಮದಾಬಾದ್ ತಲುಪಿತ್ತು.
ಈ ಸತತ ಪ್ರಯಾಣದ ಆಯಾಸವೇ ಆರ್‌ಸಿಬಿ ಎದುರು ಜಿಟಿ ತಂಡ ಶರಣಾಗಲು ಕಾರಣವೇ? ಎಂಬ ಪ್ರಶ್ನೆಗೆ ಉತ್ತರಿಸಿದ ತಂಡದ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ, "ನಾವು ಸತತ ಪಂದ್ಯಗಳನ್ನು ಆಡಿದ್ದೇವೆ, ಆಟಗಾರರು ಸುಸ್ತಾಗಿದ್ದರು ಎಂದು ಹೇಳಿ ಆರ್‌ಸಿಬಿ ತಂಡದ ಗೆಲುವಿನ ಕ್ರೆಡಿಟ್ ಅನ್ನು ಕಸಿದುಕೊಳ್ಳಲು ನಾನು ಬಯಸುವುದಿಲ್ಲ. ನಾವು ಕೇವಲ 155 ರನ್ ಗಳಿಸಿದ್ದು ನಿಜಕ್ಕೂ ಕಡಿಮೆ ಮೊತ್ತವಾಗಿತ್ತು, ಆದರೂ ನಮ್ಮ ಬೌಲರ್‌ಗಳು ಉತ್ತಮ ಹೋರಾಟ ನೀಡಿದರು. ಎದುರಾಳಿ ಆರ್‌ಸಿಬಿ ತಂಡ ನಮ್ಮಗಿಂತ ಅದ್ಭುತವಾಗಿ ಆಡಿತು ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು" ಎಂದು ಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ,(ಏಜೆನ್ಸೀಸ್).