ಬೆಂಗಳೂರಲ್ಲಿ ಈ ಬಾರಿ RCB ವಿಜಯೋತ್ಸವ ಮೆರವಣಿಗೆ ಇದೆಯೇ? ಫ್ಯಾನ್ಸ್​​ಗೆ ಫ್ರಾಂಚೈಸಿ ನೀಡಿದ ಸಂದೇಶವೇನು?

RCB
RCB
Published on
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರೂ, ಈ ಬಾರಿ ಸಿಲಿಕಾನ್ ಸಿಟಿಯಲ್ಲಿ ಯಾವುದೇ ರೋಡ್ ಶೋ ಅಥವಾ ವಿಜಯೋತ್ಸವ ಮೆರವಣಿಗೆ (Victory Parade) ನಡೆಯುವುದಿಲ್ಲ ಎಂಬ ಸ್ಪಷ್ಟ ಮುನ್ಸೂಚನೆಯನ್ನು ಆರ್‌ಸಿಬಿ ಫ್ರಾಂಚೈಸಿ ನೀಡಿದೆ. ಕಳೆದ ವರ್ಷ ನಡೆದ ಕಹಿ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಈ ಕಠಿಣ ಹಾಗೂ ಜವಾಬ್ದಾರಿಯುತ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಕಳೆದ ವರ್ಷದ ದುರಂತದ ನೆರಳು

2025ರಲ್ಲಿ ಆರ್‌ಸಿಬಿ ತನ್ನ ಮೊದಲ ಐಪಿಎಲ್ ಪ್ರಶಸ್ತಿ ಗೆದ್ದಾಗ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜಯೋತ್ಸವ ಮೆರವಣಿಗೆಯ ವೇಳೆ ಕಾಲ್ತುಳಿತ ಸಂಭವಿಸಿ 11 ಅಭಿಮಾನಿಗಳು ದುರದೃಷ್ಟವಶಾತ್ ಪ್ರಾಣ ಕಳೆದುಕೊಂಡಿದ್ದರು. ಈ ಭೀಕರ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಕಹಿ ನೆನಪಿನ ಹಿನ್ನೆಲೆಯಲ್ಲಿ, ಈ ಬಾರಿ ಆರ್‌ಸಿಬಿ ತಂಡವು ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳಿ ಸಂಭ್ರಮಾಚರಣೆ ನಡೆಸುವ ಸಾಧ್ಯತೆ ತೀರಾ ವಿರಳವಾಗಿದೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಆರ್‌ಸಿಬಿ ಫ್ರಾಂಚೈಸಿ, "ಇದೊಂದು ಅದ್ಭುತ ರಾತ್ರಿ, ಅದ್ಭುತ ಅನುಭೂತಿ. ನಮ್ಮ ಆರ್‌ಸಿಬಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಅಭಿನಂದನೆಗಳು. ಇದು ನಿಮ್ಮ ಗೆಲುವು. ಆದರೆ, ಸಂಭ್ರಮಾಚರಣೆ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸೋಣ. ನಿಮ್ಮ ಪ್ರೀತಿಪಾತ್ರರ ಜೊತೆ ಮನೆಯಲ್ಲೇ ಕುಳಿತು ಸುರಕ್ಷಿತವಾಗಿ ಈ ವಿಶೇಷ ಕ್ಷಣವನ್ನು ಆನಂದಿಸುವುದು ಸಂಭ್ರಮಾಚರಣೆಯ ಅತ್ಯುತ್ತಮ ಮಾರ್ಗವಾಗಿದೆ. ಮುಂದಿನ ವರ್ಷ ಕ್ರೀಡಾಂಗಣದಲ್ಲಿ ನಿಮ್ಮನ್ನು ಭೇಟಿಯಾಗುತ್ತೇವೆ" ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದೆ.

ಐದನೇ ಟ್ರೋಫಿ ಸಂಭ್ರಮದಲ್ಲಿ ಕೃಣಾಲ್ ಪಾಂಡ್ಯ!

ಇದೇ ವೇಳೆ ಆರ್‌ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ತಮ್ಮ ಐದನೇ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. "ಪ್ರತಿಯೊಂದು ಐಪಿಎಲ್ ಟ್ರೋಫಿಯೂ ವಿಶೇಷವಾದದ್ದು. ಇದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಇದು ನಮಗೆ ಮಕ್ಕಳಿದ್ದಂತೆ, ಮಕ್ಕಳಲ್ಲಿ ಒಬ್ಬರನ್ನು ಹೆಚ್ಚು ಮತ್ತೊಬ್ಬರನ್ನು ಕಡಿಮೆ ಎಂದು ಹೇಗೆ ಆರಿಸಲು ಸಾಧ್ಯವಿಲ್ಲವೋ, ಐಪಿಎಲ್ ಟ್ರೋಫಿಗಳೂ ಅಷ್ಟೇ. ಏಕೆಂದರೆ ಪ್ರತಿಯೊಂದು ಗೆಲುವಿನ ಹಿಂದೆ ಅಪಾರ ಪರಿಶ್ರಮವಿರುತ್ತದೆ" ಎಂದಿದ್ದಾರೆ. ತಮ್ಮ 11 ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ 5 ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.

ಮ್ಯಾನೇಜ್‌ಮೆಂಟ್ ಹಾಗೂ ಪೋಷಕ ಸಿಬ್ಬಂದಿಗೆ ಕ್ರೆಡಿಟ್

ತಂಡದ ಸತತ ಯಶಸ್ಸಿನ ಹಿಂದೆ ಮ್ಯಾನೇಜ್‌ಮೆಂಟ್ ಮತ್ತು ಕೋಚಿಂಗ್ ಸಿಬ್ಬಂದಿಯ ಪಾತ್ರ ದೊಡ್ಡದಿದೆ ಎಂದು ಕೃಣಾಲ್ ಶ್ಲಾಘಿಸಿದರು. "ನಮ್ಮ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ಆಂಡಿ ಫ್ಲವರ್, ಮೊ ಬೊಬಾಟ್, ದಿನೇಶ್ ಕಾರ್ತಿಕ್, ಮಾಲೋಲನ್ ಮತ್ತು ಓಂಕಾರ್ ಸಾಳ್ವಿ ಅವರಿಗೆ ಸಲ್ಲಬೇಕು. ಕಳೆದ ವರ್ಷ ಹರಾಜಿಗಿಂತ ಮುನ್ನವೇ ಅವರು ತಂಡದ ಸಮತೋಲನದ ಬಗ್ಗೆ ಅತ್ಯುತ್ತಮವಾಗಿ ಯೋಜನೆ ರೂಪಿಸಿದ್ದರು. ಆ ಯೋಜನೆಯೇ ಇಂದು ನಮ್ಮನ್ನು ಸತತ ಎರಡು ಬಾರಿ ಚಾಂಪಿಯನ್ ಮಾಡಿದೆ" ಎಂದು ಕೃಣಾಲ್ ಪಾಂಡ್ಯ ತಿಳಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net