ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ( Gautam Gambhir )
- ವೇಳಾಪಟ್ಟಿಯ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಫೆ.15ರಂದು ಟಿ20 ವಿಶ್ವಕಪ್ ಗ್ರೂಪ್ ಪಂದ್ಯ ಆಡಬೇಕಿದೆ
- ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ತನ್ನ ತಂಡಕ್ಕೆ ಪಾಕ್ ಸರ್ಕಾರ ಆದೇಶಿಸಿದೆ
- ಹೈವೋಲ್ಟೇಜ್ ಪಂದ್ಯ ನಡೆಯುತ್ತೋ? ಇಲ್ಲವೋ? ಎಂಬ ಅನಿಶ್ಚಿತತೆ ಇದೀಗ ಎದುರಾಗಿದೆ
Gautam Gambhir : ವೇಳಾಪಟ್ಟಿಯ ಪ್ರಕಾರ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೆಬ್ರವರಿ 15 ರಂದು ಶ್ರೀಲಂಕಾದ ಕೊಲಂಬೊದಲ್ಲಿ ಟಿ20 ವಿಶ್ವಕಪ್ 2026ರ ಭಾಗವಾಗಿ ಗ್ರೂಪ್ ಪಂದ್ಯವನ್ನು ಆಡಬೇಕಿದೆ. ಆದರೆ, ಪಾಕಿಸ್ತಾನದ ಸರ್ಕಾರ, ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ತನ್ನ ತಂಡಕ್ಕೆ ಆದೇಶಿಸಿದೆ. ಹೀಗಾಗಿ, ಈ ಪಂದ್ಯ ನಡೆಯುತ್ತೋ? ಇಲ್ಲವೋ? ಎಂಬ ಅನಿಶ್ಚಿತತೆ ಇದೀಗ ಎದುರಾಗಿದೆ. ಈವರೆಗೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ( PCB ) ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುತ್ತಿರುವುದಾಗಿ ಐಸಿಸಿಗೆ ಅಧಿಕೃತವಾಗಿ ತಿಳಿಸಿಲ್ಲ.
ಇದರ ನಡುವೆ ಇಂಡೋ-ಪಾಕ್ ಪಂದ್ಯದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ವರದಿಗಾರರು ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಪ್ರಶ್ನಿಸಿದರು. ಈ ವೇಳೆ ಗಂಭೀರ್ ನಡೆದುಕೊಂಡ ರೀತಿ ವೈರಲ್ ಆಗಿದೆ. ಇಂದು (ಫೆ.04) ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಅಭ್ಯಾಸ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಗಂಭೀರ್ ಅವರು ಮಂಗಳವಾರ ದೆಹಲಿಯಿಂದ ಮುಂಬೈಗೆ ತೆರಳಿದರು. ಇದೇ ವೇಳೆ ದೆಹಲಿ ವಿಮಾನ ನಿಲ್ದಾಣದಲ್ಲಿ ಗಂಭೀರ್ ಅವರನ್ನು ಪಾಕಿಸ್ತಾನ ಪಂದ್ಯದ ಬಗ್ಗೆ ಪ್ರಶ್ನಿಸಲಾಯಿತು.
ಆದರೆ, ಗೌತಮ್ ಗಂಭೀರ್ ಮಾತ್ರ ಯಾವುದೇ ಉತ್ತರವನ್ನು ನೀಡಲಿಲ್ಲ. ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣದ ಒಳಗೆ ಹೋದರು. ವರದಿಗಾರರು ಗಂಭೀರ್ ಅವರನ್ನೇ ಹಿಂಬಾಲಿಸಿದರೂ, ಒಂದು ಮಾತೂ ಆಡದೇ ಗಂಭೀರ್ ವಿಮಾನ ನಿಲ್ದಾಣದ ಒಳಹೊಕ್ಕರು. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅಂದಹಾಗೆ, ಭಾರತ ತಂಡವು ಪಾಕಿಸ್ತಾನ, ಅಮೆರಿಕ, ನೆದರ್‌ಲ್ಯಾಂಡ್ಸ್ ಮತ್ತು ನಮೀಬಿಯಾ ಜೊತೆಗೆ ಟಿ20 ವಿಶ್ವಕಪ್‌ನ ಎ ಗುಂಪಿನಲ್ಲಿದೆ. ಫೆಬ್ರವರಿ 7 ರಂದು ಈ ಮೆಗಾ ಟೂರ್ನಮೆಂಟ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಮೆರಿಕವನ್ನು ಎದುರಿಸಲಿದೆ.
ಟಿ20 ವಿಶ್ವಕಪ್ಗಾಗಿ ಭಾರತ ತಂಡ ಈ ಕೆಳಕಂಡಂತಿದೆ
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ರಿಂಕು ಸಿಂಗ್, (ಏಜೆನ್ಸೀಸ್).