ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 89 ರನ್ಗೆ ಆಲೌಟ್ ಆಗಿರುವುದು ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಬೇಸರ ಹಾಗೂ ಬಿಗ್ ಶಾಕ್ ನೀಡಿದೆ. ಅದರಲ್ಲೂ, ಕಿವೀಸ್ ನೀಡಿದ 334 ರನ್ಗಳ ಗುರಿಯನ್ನು ಬೆನ್ನತ್ತಿದ ಮೊದಲ ಓವರ್ನಲ್ಲೇ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಡಕ್ಔಟ್ ಆಗಿ ತಂಡವನ್ನು ತೀರ ಸಂಕಷ್ಟಕ್ಕೆ ಸಿಲುಕಿಸಿದರು. ಇದೇ ತಂಡದ ಹೀನಾಯ ಸೋಲಿಗೂ ಕಾರಣವಾಗಿದ್ದು ಸದ್ಯ ಕೋಚ್ ಗೌತಮ್ ಗಂಭೀರ್ರನ್ನು ಅಕ್ಷರಶಃ ಕೆರಳಿಸಿದೆ.
ಪಂದ್ಯ ಮುಗಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ಮ್ಯಾಟ್ ಹೆನ್ರಿ ಹಾಕಿದ ಎಸೆತಗಳು ಆಡಲು ಆಗೋದೇ ಇಲ್ಲ ಎನ್ನುವಂತಿರಲಿಲ್ಲ. ಇಲ್ಲಿ ಬ್ಯಾಟರ್ಸ್ಗಳ ವೈಫಲ್ಯವೇ ನೇರ ಹೊಣೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಲಾಗದ ಎಸೆತಗಳು ಎಂದು ಯಾವುದೂ ಇಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಲಾಗದ ಎಸೆತಗಳೇ ಇಲ್ಲ. ಮೊದಲ 10 ಓವರ್ಗಳನ್ನು ಎಚ್ಚರಿಕೆಯಿಂದ ಎದುರಿಸಬೇಕಿತ್ತು. ಹೆನ್ರಿ ಉತ್ತಮ ಏರಿಯಾಗಳಲ್ಲಿ ಬೌಲಿಂಗ್ ಮಾಡಿದರು. ಆದರೆ, ಅದನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ನಮ್ಮ ಬ್ಯಾಟರ್ಗಳಿಗಿರಬೇಕು. ಎರಡನೇ ಏಕದಿನ ಪಂದ್ಯದಲ್ಲೂ ನಮ್ಮ ತಂಡ ಏಳು ವಿಕೆಟ್ ಕಳೆದುಕೊಂಡು 111 ರನ್ ಗಳಿಸಿತ್ತು. ಸತತ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗ ಕುಸಿಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ಇಂತಹ ಪರಿಸ್ಥಿತಿಗಳಲ್ಲಿ ಮಾನಸಿಕವಾಗಿ ಮತ್ತು ಕೌಶಲ್ಯದ ದೃಷ್ಟಿಯಿಂದ ಸಿದ್ಧರಾಗಿರಬೇಕು. ಮೊದಲ 10 ಓವರ್ಗಳಲ್ಲಿ ವಿಕೆಟ್ ಉಳಿಸಿಕೊಳ್ಳುವುದು ತುಂಬಾ ಮುಖ್ಯ. ತಂಡದ ಆಟಗಾರರಿಗೆ ಅನುಭವವಿದೆ. ಮುಂದಿನ ಪಂದ್ಯದಲ್ಲಿ ಪರಿಸ್ಥಿತಿಗೆ ತಕ್ಕಂತೆ ಆಡುತ್ತಾರೆ ಎಂಬ ನಿರೀಕ್ಷೆಯೂ ಇದೆ ಎಂದು ಹೇಳುವ ಮೂಲಕ ರೋಹಿತ್, ಕೊಹ್ಲಿ ಮತ್ತು ಅಯ್ಯರ್ ಹೆಸರೇಳದೆ ಪರೋಕ್ಷವಾಗಿ ಕುಟುಕಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಆಟಗಾರರಾದ ವಿಲ್ ಯಂಗ್ ಮತ್ತು ಟಿಮ್ ಸೀಫರ್ಟ್ ಅಮೋಘ ಆರಂಭ ಒದಗಿಸಿದರು. ಟಿಮ್ ಸೀಫರ್ಟ್ 48 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 58 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಮತ್ತೊಂದೆಡೆ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ವಿಲ್ ಯಂಗ್ 108 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ ಭರ್ಜರಿ 125 ರನ್ ಸಿಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಫಿನ್ ಅಲೆನ್ ಕೇವಲ 30 ಎಸೆತಗಳಲ್ಲಿ 41 ರನ್, ನಾಯಕ ಮಿಚೆಲ್ ಸ್ಯಾಂಟ್ನರ್ 24 ರನ್ ಹಾಗೂ ಕ್ರಿಸ್ಟಿಯನ್ ಕ್ಲಾರ್ಕ್ 22 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಪರಿಣಾಮವಾಗಿ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್ಗಳಲ್ಲಿ 333 ರನ್ಗಳ ಬೃಹತ್ ಮೊತ್ತ ಕಲೆಹಾಕಿ ಆಲೌಟ್ ಆಯಿತು. ಭಾರತದ ಪರ ಅಕ್ಷರ್ ಪಟೇಲ್ 39 ರನ್ಗಳಿಗೆ 2 ವಿಕೆಟ್ ಪಡೆದರೆ, ಗುರ್ನೂರ್ ಬ್ರಾರ್ ಮತ್ತು ಆಕಿಬ್ ನಬಿ ತಲಾ 2 ವಿಕೆಟ್ ಹಾಗೂ ಅರ್ಷದೀಪ್ ಸಿಂಗ್ ಮತ್ತು ನಮನ್ ಧೀರ್ ತಲಾ 1 ವಿಕೆಟ್ ಪಡೆದರು.
334 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಇನ್ನಿಂಗ್ಸ್ನ ಮೊದಲ ಓವರ್ನಿಂದಲೇ ಆಘಾತಗಳ ಸರಮಾಲೆ ಎದುರಾಯಿತು. ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಎದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (4 ಎಸೆತಗಳಲ್ಲಿ 0) ಮತ್ತು ನಾಯಕ ಶ್ರೇಯಸ್ ಅಯ್ಯರ್ (1 ಎಸೆತದಲ್ಲಿ 0) ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ರುತುರಾಜ್ ಗಾಯಕ್ವಾಡ್ 5 ರನ್ ಗಳಿಸಿ ಕೈಲ್ ಜೇಮಿಸನ್ಗೆ ವಿಕೆಟ್ ಒಪ್ಪಿಸುವುದರೊಂದಿಗೆ ಭಾರತದ ಅಗ್ರಕ್ರಮಾಂಕ ಸಂಪೂರ್ಣ ಕುಸಿಯಿತು.
ತಂಡ ಸಂಕಷ್ಟದಲ್ಲಿದ್ದಾಗ ವಿಕೆಟ್ ಕೀಪರ್ ಇಶಾನ್ ಕಿಶನ್ (53 ಎಸೆತಗಳಲ್ಲಿ 27 ರನ್), ಅಕ್ಷರ್ ಪಟೇಲ್ (36 ಎಸೆತಗಳಲ್ಲಿ 21 ರನ್) ಮತ್ತು ನಮನ್ ಧೀರ್ (24 ಎಸೆತಗಳಲ್ಲಿ 21 ರನ್) ಒಂದಷ್ಟು ಪ್ರತಿರೋಧ ತೋರಲು ಪ್ರಯತ್ನಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಕೆಳಕ್ರಮಾಂಕದಲ್ಲಿ ಆಕಿಬ್ ನಬಿ 5, ಕುಲದೀಪ್ ಯಾದವ್ 1 ಹಾಗೂ ಗುರ್ನೂರ್ ಬ್ರಾರ್ 2 ರನ್ ಗಳಿಸಿ ಔಟಾಗುವುದರೊಂದಿಗೆ, ಭಾರತೀಯ ತಂಡ ಕೇವಲ 26.4 ಓವರ್ಗಳಲ್ಲಿ 89 ರನ್ಗಳಿಗೆ ಸರ್ವಪತನ ಕಂಡಿತು.
ನ್ಯೂಜಿಲೆಂಡ್ ಗೆಲುವಿನಲ್ಲಿ ವೇಗದ ಬೌಲರ್ ಮ್ಯಾಟ್ ಹೆನ್ರಿ ನಿರ್ಣಾಯಕ ಪಾತ್ರ ವಹಿಸಿದರು. ಭಾರತೀಯ ಬ್ಯಾಟಿಂಗ್ ಬೆನ್ನೆಲುಬು ಮುರಿದ ಹೆನ್ರಿ, 9.4 ಓವರ್ಗಳಲ್ಲಿ 2 ಮೇಡನ್ ಸಹಿತ ಕೇವಲ 27 ರನ್ ನೀಡಿ ಪ್ರಮುಖ 6 ವಿಕೆಟ್ಗಳನ್ನು ಕಬಳಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಮ್ಯಾಥ್ಯೂ ಫಿಶರ್ 31 ರನ್ಗಳಿಗೆ 3 ವಿಕೆಟ್ ಪಡೆದರೆ, ಕೈಲ್ ಜೇಮಿಸನ್ 1 ವಿಕೆಟ್ ಕಿತ್ತರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಟೀಮ್ ಇಂಡಿಯಾ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತನ್ನ ಅತ್ಯಂತ ಕಳಪೆ ಪ್ರದರ್ಶನಗಳಲ್ಲಿ ಒಂದನ್ನು ದಾಖಲಿಸಿತು,(ಏಜೆನ್ಸೀಸ್).