Hardik Pandya: ಐಪಿಎಲ್ 20ನೇ ಆವೃತ್ತಿಯ ಭಾಗವಾಗಿ ನಡೆಯಲಿರುವ ಮಿನಿ ಹರಾಜಿಗೂ ಮುನ್ನ ಒಂದು ಪ್ರಮುಖ ಬೆಳವಣಿಗೆ ನಡೆದಿದ್ದು, 19ನೇ ಆವೃತ್ತಿಯ ಐಪಿಎಲ್ನಲ್ಲಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಮುಗ್ಗರಿಸಿದ್ದಲ್ಲದೇ, ಸತತ ಎರಡೂ ಸೀಸನ್ನಲ್ಲಿಯೂ ಚಾಂಪಿಯನ್ಸ್ ಟೀಮ್ ಅನ್ನು ಪ್ಲೇಆಫ್ ಸುತ್ತಿಗೂ ಮೊದಲೇ ಎಕ್ಸಿಟ್ ಆಗುವಂತೆ ಮಾಡಿದ ಹಾರ್ದಿಕ್ ಪಾಂಡ್ಯರನ್ನು ಕೊನೆಗೂ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಗಟ್ಟಿದೆ.
ಕ್ಯಾಪ್ಟನ್ ಆಗಿ ತಂಡವನ್ನು ಸೋಲಿನ ಹಾದಿಗೆ ತಳ್ಳಿದ್ದು ಹಾರ್ದಿಕ್ ಎಂಬ ಸಿಟ್ಟು ಮುಂಬೈ ಇಂಡಿಯನ್ಸ್ ಒಳಗೆ ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿತ್ತು. ಐಪಿಎಲ್ ಮುಗಿಯುತ್ತಿದ್ದಂತೆ ಇದು ಕ್ರಿಕೆಟ್ ಅಭಿಮಾನಿಗಳಿಗೂ ಸ್ಪಷ್ಟವಾಗಿ ಗೊತ್ತಾಗಿತ್ತು. ಮುಂದಿನ ವರ್ಷ ಖಂಡಿತ ಪಾಂಡ್ಯರನ್ನು ನಾಯಕನ ಸ್ಥಾನದಿಂದ ಮಾತ್ರವಲ್ಲ, ತಂಡದಿಂದಲೇ ಕಿತ್ತುಬಿಸಾಡಲಿದೆ ಎಂಐ ಎಂಬುದು ಬಹುತೇಕ ಮಂದಿಗೆ ಅದಾಗಲೇ ಗೊತ್ತಾಗಿತ್ತು. ಅಂದುಕೊಂಡಂತೆಯೇ ಇದೀಗ ಆ ಸೇಡನ್ನು ತೀರಿಸಿಕೊಳ್ಳುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿದೆ.
ಐಪಿಎಲ್ 2027ರ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಹಾರ್ದಿಕ್ ಆಡಲಿದ್ದಾರೆ ಎಂದಿರುವ ಎಂಐ, ಅವರ ಸ್ಥಾನಕ್ಕೆ ಪಂಜಾಬ್ ಕಿಂಗ್ಸ್ನ ಅರ್ಷ್ದೀಪ್ ಸಿಂಗ್ರನ್ನು ಟ್ರೇಡಿಂಗ್ ಮೂಲಕ ಕರೆದುಕೊಂಡಿದ್ದೇವೆ ಎಂದು ಅಧಿಕೃತ ಪೋಸ್ಟ್ ಹಾಕಿ, ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದೆ. ಈ ಒಪ್ಪಂದದ ಭಾಗವಾಗಿ ಹಾರ್ದಿಕ್ ಪಾಂಡ್ಯ ಅವರ ಸಂಭಾವನೆಯು 16.35 ಕೋಟಿ ರೂ.ನಿಂದ 18 ಕೋಟಿ ರೂ.ಗೆ ಏರಿಕೆಯಾಗಿದೆ. ಅಲ್ಲಿಗೆ, ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯಿಂದ ಅವರಿಗೆ 18 ಕೋಟಿ ರೂ. ಸಂಭಾವನೆ ಸಿಗಲಿದೆ.
ಇತ್ತ ಅರ್ಷ್ದೀಪ್ ಸಿಂಗ್ 18 ಕೋಟಿ ರೂ.ಗೆ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ. ಒಂದು ದಿನದ ಹಿಂದೆಯೇ, ಅರ್ಷ್ದೀಪ್ ಅವರ ತಂದೆ ದರ್ಶನ್ ಸಿಂಗ್ ಈ ಟ್ರೇಡಿಂಗ್ ಬಗ್ಗೆ ಮಾತನಾಡಿದ್ದರು. ಈ ಎಕ್ಸ್ಚೆಂಚ್ ಕುರಿತು ತಮಗೆ ಈಗಾಗಲೇ ಅಧಿಕೃತ ಮಾಹಿತಿ ಸಿಕ್ಕಿತ್ತು ಎಂದು ಬಹಿರಂಗಪಡಿಸಿದರು. ಇದೇ ವೇಳೆ, ತಮ್ಮ ಪುತ್ರ ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್ ಸೇರಿದಂತೆ ಇನ್ನಿತರ ಉತ್ತಮ ಆಟಗಾರರಿರುವ ತಂಡವನ್ನು ಸೇರಿಕೊಂಡಿದ್ದು ತುಂಬ ಖುಷಿಯಿದೆ ಎಂದರು.
ಮತ್ತೊಂದೆಡೆ, ಕಳೆದ 8 ವರ್ಷಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿರುವ ಅರ್ಷದೀಪ್, 2019ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದರು. ಪಂಜಾಬ್ ಪರ 96 ಪಂದ್ಯಗಳನ್ನು ಆಡಿರುವ ಅವರು, ಇಲ್ಲಿಯವರೆಗೆ 111 ವಿಕೆಟ್ಗಳನ್ನು ಕಬಳಿಸಿದ್ದಾರೆ. ಪಂಜಾಬ್ ತಂಡಕ್ಕಾಗಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದ ಬೌಲರ್ ಎಂಬ ದಾಖಲೆಯೂ ಸಿಂಗ್ರ ಹೆಸರಿನಲ್ಲಿದೆ,(ಏಜೆನ್ಸೀಸ್).