ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ( Suryakumar Yadav ) 
ಕ್ರಿಕೆಟ್

ಪಾಕ್​​ ವಿರುದ್ಧ ಗೆಲುವು... ಪಂದ್ಯಕ್ಕೂ ಮುನ್ನ ಸೂರ್ಯ ಹೇಳಿದ ಆ ಒಂದು ಮಾತಿಗೆ ತಲೆಬಾಗಿದ ಕ್ರೀಡಾ ಜಗತ್ತು! Suryakumar Yadav

ಪ್ರಮುಖ ಮುಖ್ಯಾಂಶಗಳು

  • ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಭಾರತ
  • ಟಿ20 ವಿಶ್ವಕಪ್​ನಲ್ಲಿ ಮತ್ತೆ ಪಾಕ್​ ತಂಡಕ್ಕೆ ಮಣ್ಣು ಮುಕ್ಕಿಸಿದ ಟೀಮ್​ ಇಂಡಿಯಾ
  • ಹೀನಾಯ ಸೋಲುಂಡ ಪಾಕ್​ಗೆ ಭಾರೀ ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತಿವೆ
  • ಪಂದ್ಯಕ್ಕೂ ಮುನ್ನ ಸೂರ್ಯ ಹೇಳಿದ ಆ ಒಂದು ಮಾತಿಗೆ ಕ್ರೀಡಾ ಜಗತ್ತು ತಲೆಬಾಗಿದೆ
Suryakumar Yadav : ಫೆ.15ರಂದು ಕೊಲೊಂಬೊದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ 61 ರನ್​ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಮತ್ತೆ ಪಾಕ್​ ತಂಡಕ್ಕೆ ಮಣ್ಣು ಮುಕ್ಕಿಸಿತು. ಭಾರತಕ್ಕೆ ಇದು 8ನೇ ಗೆಲುವು ಎಂಬುದು ಮತ್ತೊಂದು ವಿಶೇಷ. ಈ ಮಧ್ಯೆ, ಹೀನಾಯ ಸೋಲುಂಡ ಪಾಕ್​ಗೆ ಭಾರೀ ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್​ ಯಾದವ್​ ತಮ್ಮ ಆಟಗಾರರಿಗೆ ನೀಡಿದ ಸಲಹೆಯೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಭಾರತ ಮತ್ತು ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳಾದ್ದರಿಂದ ಪಂದ್ಯದ ಸಮಯದಲ್ಲಿ ಆಡುವ ಒಂದು ಸಣ್ಣ ಮಾತುಗಳು ಕೂಡ ವಿವಾದ ಸ್ವರೂಪ ಪಡೆದುಕೊಳ್ಳಬಹುದು ಎಂಬ ಅರಿವು ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್​ ಯಾದವ್​ಗೆ ತಿಳಿದಿತ್ತು. ಹೀಗಾಗಿ, ಆಟಗಾರರ ನಡುವಿನ ವಾಗ್ವಾದಗಳನ್ನು ತಪ್ಪಿಸಲು ಸೂರ್ಯಕುಮಾರ್ ಯಾದವ್ ಅವರು ತಮ್ಮ ತಂಡದ ಆಟಗಾರರಿಗೆ ಬಹಳ ಮುಖ್ಯವಾದ ಸಲಹೆಗಳನ್ನು ನೀಡಿದ್ದರು.

ಕೆಣಕಬೇಡಿ

ತಮ್ಮ ತಂಡದ ಆಟಗಾರರಿಗೆ ಸೂರ್ಯಕುಮಾರ್ ಏನು ಹೇಳಿದ್ದರು ಅಂದರೆ, ಪಾಕಿಸ್ತಾನಿ ಆಟಗಾರರನ್ನು ಯಾವುದೇ ಕಾರಣಕ್ಕೂ ಕೆಣಕಬೇಡಿ (ಗೇಲಿ ಮಾಡಬೇಡಿ/ಕೆರಳಿಸಿ), ಬದಲಾಗಿ ಅತ್ಯುತ್ತಮವಾಗಿ ಪ್ರತಿಕ್ರಿಯಿಸಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಇದೀಗ ಬಿಸಿಸಿಐ ಬಿಡುಗಡೆ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಉತ್ತಮ ಕ್ರಿಕೆಟ್ ಆಡಬೇಕು

ಪಂದ್ಯದಲ್ಲಿ ಶಕ್ತಿ ಮತ್ತು ವೇಗವನ್ನು ಕಾಯ್ದುಕೊಳ್ಳಿ. ಯಾರೊಂದಿಗೂ ಮಾತನಾಡಬೇಡಿ. ನಾವು ಉತ್ತಮ ಕ್ರಿಕೆಟ್ ಆಡಬೇಕು. ಪ್ರತಿಭೆಯಿಂದ ನಾವು ಈ ಪಂದ್ಯವನ್ನು ಗೆಲ್ಲಬಹುದು ಎಂದು ಸೂರ್ಯಕುಮಾರ್ ವಿಡಿಯೋದಲ್ಲಿ ಹೇಳಿದ್ದಾರೆ. ವಿಡಿಯೋ ನೋಡಿದ ಕ್ರಿಕೆಟ್​ ಪ್ರೇಮಿಗಳು ಸೂರ್ಯಕುಮಾರ್​ ಅವರ ಮಾತುಗಳನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 175 ರನ್ ಗಳಿಸಿತು. ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಇಶಾನ್ ಕಿಶನ್ (40 ಎಸೆತಗಳಲ್ಲಿ 77 ರನ್) ಅದ್ಭುತ ಅರ್ಧಶತಕ ಗಳಿಸಿದರು. ನಾಯಕ ಸೂರ್ಯಕುಮಾರ್ ಯಾದವ್ (32) ಮತ್ತು ಶಿವಂ ದುಬೆ (27) ಉತ್ತಮ ಪ್ರದರ್ಶನ ನೀಡಿದರು. ಪಾಕಿಸ್ತಾನದ ಬೌಲರ್‌ಗಳಲ್ಲಿ ಸೈಮ್ ಅಯೂಬ್ ಮೂರು ವಿಕೆಟ್ ಪಡೆದರೆ, ನಾಯಕ ಸಲ್ಮಾನ್ ಅಲಿ ಅಘಾ, ಶಾಹೀನ್ ಅಫ್ರಿದಿ ಮತ್ತು ಉಸ್ಮಾನ್ ತಾರಿಕ್ ತಲಾ ಒಂದು ವಿಕೆಟ್ ಪಡೆದರು.
ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಟೀಮ್​ ಇಂಡಿಯಾ ಬೌಲರ್​ಗಳ ಬಿಗಿ ಬೌಲಿಂಗ್​ ದಾಳಿಗೆ ತತ್ತರಿಸಿ, ಕೇವಲ 114 ರನ್​ಗಳಿಗೆ ಆಲೌಟ್​ ಆಯಿತು. ಪಾಕ್​ ಪರ ಉಸ್ಮಾನ್​ ಖಾನ್​ (44) ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರೆ, ಕುಲದೀಪ್ ಯಾದವ್ ಮತ್ತು ತಿಲಕ್ ವರ್ಮಾ ತಲಾ ಒಂದು ವಿಕೆಟ್ ಪಡೆದರು.
ಅಂದಹಾಗೆ, ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಂದ್ಯಾವಳಿಯಿಂದ ಹೊರಗುಳಿಯುವುದಾಗಿ ಬೆದರಿಕೆ ಹಾಕಿತ್ತು, ಆದರೆ ಐಸಿಸಿ ಮಧ್ಯಪ್ರವೇಶಿಸಿದ ನಂತರ ಪಂದ್ಯ ಮುಂದುವರೆಯಿತು. ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ 'ಹ್ಯಾಂಡ್‌ಶೇಕ್ ನೋ' ನೀತಿಯನ್ನು ಮುಂದುವರಿಸಿದರು ಕೂಡ ಈ ಬಾರಿ ಮೈದಾನದಲ್ಲಿ ಆಟಗಾರರ ನಡುವೆ ಬೇರೆ ಯಾವುದೇ ವಿವಾದಗಳು ನಡೆಯಲಿಲ್ಲ ಅನ್ನೋದು ಗಮನಾರ್ಹ, (ಏಜೆನ್ಸೀಸ್​).