ಸನ್‌ರೈಸರ್ಸ್ ತಂಡ ಸೇರಿದ್ದಕ್ಕೆ ವಿವಾದ: ಭಾರತೀಯರ ಟೀಕೆಗೆ ಕೊನೆಗೂ ಮೌನ ಮುರಿದ ಅಬ್ರಾರ್ ಅಹ್ಮದ್! Abrar Ahmed
- ಇತ್ತೀಚೆಗೆ ಇಂಗ್ಲೆಂಡ್ನ ಲಂಡನ್‌ನಲ್ಲಿ ನಡೆದ ದಿ ಹಂಡ್ರೆಡ್ ಲೀಗ್ ಹರಾಜ್
- ಸನ್‌ರೈಸರ್ಸ್ ಲೀಡ್ಸ್ ತಂಡದಿಂದ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿ
- ಎಸ್ಆರ್ಎಚ್ ಒಡತಿ ಕಾವ್ಯಾ ಮಾರನ್ ವಿರುದ್ಧ ಭಾರತೀಯರಿಂದ ಟೀಕೆ
- ಭಾರಿ ವಿವಾದದ ನಡುವೆಯೇ ಅಚ್ಚರಿ ಹೇಳಿಕೆ ನೀಡಿದ ಪಾಕ್ ಆಟಗಾರ ಅಬ್ರಾರ್ ಅಹ್ಮದ್
Abrar Ahmed : ಇಂಗ್ಲೆಂಡ್ನ 'ದಿ ಹಂಡ್ರೆಡ್' ಲೀಗ್ ಹರಾಜಿನಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡ, ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡವು ಅಬ್ರಾರ್ ಅವರನ್ನು 1.90 ಲಕ್ಷ ಪೌಂಡ್‌ಗಳಿಗೆ (ಸುಮಾರು 2.3 ಕೋಟಿ ರೂ.) ಖರೀದಿಸಿತು.
ಅಂದಹಾಗೆ, ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಸನ್‌ರೈಸರ್ಸ್ ಲೀಡ್ಸ್ ತಂಡಕ್ಕೆ ಕಾವ್ಯಾ ಮಾರನ್ ಒಬ್ಬರೇ ಮಾಲೀಕರು. ಹೀಗಾಗಿ, ಓರ್ವ ಭಾರತೀಯಳಾಗಿ ಕಾವ್ಯ ಮಾರನ್ ತೆಗೆದುಕೊಂಡ ಈ ನಿರ್ಧಾರಕ್ಕೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇತ್ತೀಚೆಗೆ, ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಇದೇ ವಿಷಯದ ಬಗ್ಗೆ ಖಾರವಾಗಿ ಮಾತನಾಡಿದ್ದರು.
ನೀವು ಭಾರಿ ಹಣ ಕೊಟ್ಟು ಪಾಕ್ ಆಟಗಾರರನ್ನು ಖರೀದಿಸಿದರೆ, ಆ ಹಣ ಪರೋಕ್ಷವಾಗಿ ಪಾಕಿಸ್ತಾನ ಸೇನೆಗೆ ನರೆವಾಗುತ್ತದೆ. ಕೊನೆಗೆ ನಮ್ಮ ಭಾರತೀಯ ಸೈನಿಕರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದರು. ಗವಾಸ್ಕರ್ ಹೇಳಿಕೆಗೆ ಭಾರಿ ಬೆಂಬಲ ಕೂಡ ವ್ಯಕ್ತವಾಗಿದೆ. ಆದರೆ, ಪಾಕಿಸ್ತಾನದ ಅಂಡರ್-19 ತಂಡದ ನಾಯಕ ಅಜೀಂ ರಫೀಕ್ ಟೀಕಿಸಿದ್ದಾರೆ. ನೀವು ಎಷ್ಟೇ ರನ್ ಗಳಿಸಿದರೂ ಪರವಾಗಿಲ್ಲ ಆದರೆ, ನಿಮ್ಮ ಹೇಳಿಕೆಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ರಫೀಕ್ ಹೇಳಿದ್ದಾರೆ.
ಅಬ್ರಾರ್ ಅಹ್ಮದ್ ಪ್ರತಿಕ್ರಿಯೆ ಏನು?
ಈ ದೊಡ್ಡ ವಿವಾದ ಪಾಕ್ ಆಟಗಾರ ಅಬ್ರಾರ್ ಅಹ್ಮದ್ ಗಮನಕ್ಕೂ ಬಂದಿದೆ. ಈ ಬಗ್ಗೆ ತಮ್ಮ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಗೆ ಪ್ರತಿಕ್ರಿಯೆ ನೀಡಿರುವ ಅಬ್ರಾರ್, ವಿವಾದದ ಬಗ್ಗೆ ನಾನು ಎಳ್ಳಷ್ಟೂ ಗಮನ ಹರಿಸುತ್ತಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಪಿಸಿಬಿ ಕೂಡ ಹೇಳಿಕೆ ನೀಡಿದ್ದು, ಅಬ್ರಾರ್ ಅವರ ಒಪ್ಪಂದದ ಬಗ್ಗೆ ಈ ರೀತಿಯ ಟೀಕೆಗಳನ್ನು ನಾವು ಮೊದಲೇ ನಿರೀಕ್ಷಿಸಿದ್ದೆವು. ಆದರೆ, ಅಬ್ರಾರ್ ಈ ವಿವಾದದ ಬಗ್ಗೆ ಸ್ವಲ್ಪವೂ ಚಿಂತಿಸುವುದಿಲ್ಲ. ಅಬ್ರಾರ್ ಪ್ರಪಂಚದಾದ್ಯಂತದ ಲೀಗ್‌ಗಳಲ್ಲಿ ಆಡಲು ಸಿದ್ಧನಾಗಿರುವುದರಿಂದ ದಿ ಹಂಡ್ರೆಡ್‌ಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಟಿ20 ಶ್ರೇಯಾಂಕದಲ್ಲಿ ಅಗ್ರ-3 ರಲ್ಲಿದ್ದ ಕಾರಣ ಅಬ್ರಾರ್ ಅವರು ಹರಾಜಿನಲ್ಲಿ ಭಾರಿ ಬೆಲೆ ಪಡೆದರು. ಅವರು ಖಂಡಿತವಾಗಿಯೂ ಅದಕ್ಕೆ ಅರ್ಹರು ಎಂದು ಹೇಳಿದೆ.
ಸನ್‌ರೈಸರ್ಸ್ ಲೀಡ್ಸ್ ಕೋಚ್ ಡೇನಿಯಲ್ ವೆಟ್ಟೋರಿ, ಅಬ್ರಾರ್‌ಗೆ ಕರೆ ಮಾಡಿ ತಮ್ಮ ಖರೀದಿಯ ಬಗ್ಗೆ ತಿಳಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೂಲಗಳು ಟೆಲಿಕಾಂಸ್‌ನೆಟ್‌ಗೆ ತಿಳಿಸಿದೆ. ಸದ್ಯ ಈ ವಿವಾದ ಮುಂದುವರಿದ್ದಿದ್ದು, ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ, (ಏಜೆನ್ಸೀಸ್).