ಆರ್‌ಜೆ ಮಹ್ವಾಶ್, ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಾಹಲ್  
ಕ್ರಿಕೆಟ್

"ಪ್ರೆಗ್ನೆಂಟ್ ವೈಫ್‌ಗೆ ಚೀಟ್ ಮಾಡಿದ..." ಚಾಹಲ್-ಧನಶ್ರೀ ಡಿವೋರ್ಸ್‌ಗೆ ಆರ್‌ಜೆ ಮಹ್ವಾಶ್ ವಿಡಿಯೋ ಲಿಂಕ್: ಅಸಲಿಗೆ ನಡೆದಿದ್ದೇನು? RJ Mahvash

ಮುಂಬೈ: ಟೀಮ್​ ಇಂಡಿಯಾ ಸ್ಟಾರ್​ ಬೌಲರ್​ ಯುಜ್ವೇಂದ್ರ ಚಾಹಲ್ ಅವರ ವೈಯಕ್ತಿಕ ಜೀವನದ ಕುರಿತಾದ ಶಾಕಿಂಗ್​ ಸುದ್ದಿಯೊಂದು ಸದ್ಯ ಸೋಷಿಯಲ್​ ಮೀಡಿಯಾನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಚಾಹಲ್​ ಅವರ ಆಪ್ತ ಸ್ನೇಹಿತೆ, ಖ್ಯಾತ ಆರ್‌ಜೆ ಮಹ್ವಾಶ್ ಅವರ ಹಳೆಯ ಪಾಡ್‌ಕಾಸ್ಟ್ ಸಂದರ್ಶನದ ಸಣ್ಣ ವಿಡಿಯೋ ತುಣುಕೊಂದು ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

"ಗರ್ಭಿಣಿಯಾಗಿದ್ದ ಪತ್ನಿಗೆ ಆತ ಮೋಸ ಮಾಡಿದ್ದ, ಒಮ್ಮೆ ಮೋಸಗಾರನಾದವನು ಎಂದಿಗೂ ಮೋಸಗಾರನೇ" ಎಂದು ಮಹ್ವಶ್ ಹೇಳಿರುವ ವಿಡಿಯೋವನ್ನು ಕೆಲವರು ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನಕ್ಕೆ ಲಿಂಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದ್ದಾರೆ. ಆದರೆ, ಈ ವೈರಲ್ ವಿಡಿಯೋದ ಅಸಲಿ ಕಥೆಯೇ ಬೇರೆಯೇ ಆಗಿದೆ.

ವೈರಲ್ ವಿಡಿಯೋದಲ್ಲಿ ಮಹ್ವಾಶ್ ಹೇಳಿದ್ದೇನು?

ವೈರಲ್ ಆಗಿರುವ ಆ ಕ್ಲಿಪ್‌ನಲ್ಲಿ ಆರ್‌ಜೆ ಮಹ್ವಾಶ್, "ದೇವರು ನಮ್ಮನ್ನು ಎಂತಹ ಕೆಟ್ಟ ಪರಿಸ್ಥಿತಿಗಳಿಂದ ಬಚಾವ್ ಮಾಡುತ್ತಾನೆ ನೋಡಿ! ಆ ವ್ಯಕ್ತಿಗೆ ಡಿವೋರ್ಸ್ ಆಗಲು ಕಾರಣವೇ ಆತ ತನ್ನ ಪ್ರೆಗ್ನೆಂಟ್ ವೈಫ್‌ಗೆ ಚೀಟ್ ಮಾಡಿದ್ದು. ಒಮ್ಮೆ ಚೀಟ್ ಮಾಡಿದವನು ಯಾವತ್ತಿದ್ರೂ ಚೀಟರೇ..." ಎಂದು ಕಟುವಾಗಿ ಮಾತನಾಡಿದ್ದಾರೆ.

ಈ ಸಣ್ಣ ಕ್ಲಿಪ್ ಹೊರಬರುತ್ತಿದ್ದಂತೆ ನೆಟ್ಟಿಗರು, "ಹಾಗಾದ್ರೆ ಧನಶ್ರೀ ಗರ್ಭಿಣಿಯಾಗಿದ್ದಾಗ ಚಾಹಲ್ ಮೋಸ ಮಾಡಿದ್ರಾ?", "ಅದಕ್ಕೇ ಇಬ್ಬರೂ ಬೇರೆಯಾದ್ರಾ?" ಎಂದೆಲ್ಲಾ ಕಮೆಂಟ್ ಬಾಕ್ಸ್‌ನಲ್ಲಿ ಚರ್ಚೆ ಶುರುಮಾಡಿಬಿಟ್ಟರು. ಚಾಹಲ್ ಹಾಗೂ ಧನಶ್ರೀ ಡಿವೋರ್ಸ್ ಬಳಿಕ ಮಹ್ವಾಶ್ ಅವರೊಂದಿಗೆ ಚಾಹಲ್ ಆಗಾಗ ಕಾಣಿಸಿಕೊಳ್ಳುತ್ತಿದ್ದ ಕಾರಣ, ಈ ಊಹಾಪೋಹಗಳಿಗೆ ಇನ್ನಷ್ಟು ಪುಷ್ಠಿ ದೊರಕಿತು.

ತನ್ನ ಕರಾಳ ಸತ್ಯ ಬಿಚ್ಚಿಟ್ಟ ಮಹ್ವಾಶ್​!

ಆದರೆ, ಕೇವಲ ಕೆಲವೇ ಸೆಕೆಂಡುಗಳ ಕ್ಲಿಪ್ ನೋಡಿ ತೀರ್ಪು ಕೊಡುವ ಮುನ್ನ ಪೂರ್ತಿ ವಿಡಿಯೋ ನೋಡಿದರೆ ಸತ್ಯ ಬಯಲಾಗುತ್ತದೆ. ವಾಸ್ತವವಾಗಿ ಮಹ್ವಶ್ ಮಾತನಾಡುತ್ತಿದ್ದುದು ಚಾಹಲ್ ಬಗ್ಗೆ ಅಲ್ಲವೇ ಅಲ್ಲ. ಅಲಿಗಢದಲ್ಲಿ ವಾಸವಿದ್ದಾಗ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬನನ್ನು ಮಹ್ವಾಶ್ ಗಾಢವಾಗಿ ಪ್ರೀತಿಸಿದ್ದರು. ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಲು ಹೊರಟಿದ್ದರು. ಆದರೆ, ಆತ ಮಹ್ವಾಶ್​ಗೆ ಪದೇ ಪದೇ ಮೋಸ ಮಾಡುತ್ತಿದ್ದ. ಆ ನೋವಿನಿಂದಾಗಿ ತಮಗೆ ತೀವ್ರ ಪ್ಯಾನಿಕ್ ಅಟ್ಯಾಕ್‌ಗಳು ಆಗುತ್ತಿದ್ದವು ಮತ್ತು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಯಿತು ಎಂದು ಅವರು ಭಾವುಕರಾಗಿ ಹಂಚಿಕೊಂಡಿದ್ದರು.

ನಂತರ ಆ ವ್ಯಕ್ತಿ ಬೇರೊಬ್ಬಾಕೆಯನ್ನು ಮದುವೆಯಾಗಿದ್ದ. ಅಷ್ಟೇ ಅಲ್ಲದೆ, ಆತನ ಪತ್ನಿ ಗರ್ಭಿಣಿಯಾಗಿದ್ದಾಗಲೂ ಮತ್ತೊಬ್ಬಳ ಜೊತೆ ಸಂಬಂಧವಿಟ್ಟುಕೊಂಡು ಆಕೆಗೆ ಕೈಕೊಟ್ಟಿದ್ದನಂತೆ. ಆ ವ್ಯಕ್ತಿಯ ವಿಚ್ಛೇದನದ ಬಗ್ಗೆ ಹೇಳುವಾಗ ಮಹ್ವಾಶ್ ಈ ಮಾತುಗಳನ್ನು ಆಡಿದ್ದರೇ ಹೊರತು, ಎಲ್ಲಿಯೂ ಚಾಹಲ್ ಪ್ರಸ್ತಾಪವೇ ಇರಲಿಲ್ಲ.

ಚಾಹಲ್-ಧನಶ್ರೀ ಡಿವೋರ್ಸ್ ಮತ್ತು ಮಹ್ವಾಶ್ ಸ್ನೇಹ

ಕೋವಿಡ್ ಲಾಕ್‌ಡೌನ್‌ನಲ್ಲಿ ಆನ್‌ಲೈನ್ ಡ್ಯಾನ್ಸ್ ಕ್ಲಾಸ್ ಮೂಲಕ ಹತ್ತಿರವಾಗಿ 2020 ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಚಾಹಲ್-ಧನಶ್ರೀ ಜೋಡಿ, 2025ರ ಮಾರ್ಚ್‌ನಲ್ಲಿ ಮುಂಬೈ ಫ್ಯಾಮಿಲಿ ಕೋರ್ಟ್ ಮೂಲಕ ಅಧಿಕೃತವಾಗಿ ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್ ಪಡೆದಿದ್ದರು.

ಡಿವೋರ್ಸ್ ಬಳಿಕ ಚಾಹಲ್ ಜೀವನದ ಕಠಿಣ ದಿನಗಳಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದು ಆರ್‌ಜೆ ಮಹ್ವಾಶ್. ಇಬ್ಬರೂ ಒಟ್ಟಿಗೆ ಹಲವು ಕಡೆ ಕಾಣಿಸಿಕೊಂಡಾಗ ಡೇಟಿಂಗ್ ವದಂತಿ ಹಬ್ಬಿತ್ತಾದರೂ, ನಮ್ಮಿಬ್ಬರ ನಡುವೆ ಇರುವುದು ಶುದ್ಧ ಸ್ನೇಹ ಮಾತ್ರ ಎಂದು ಇಬ್ಬರೂ ಸ್ಪಷ್ಟಪಡಿಸಿದ್ದರು. ಧನಶ್ರೀ ಗರ್ಭಿಣಿಯಾಗಿದ್ದರು ಎಂದಾಗಲಿ, ಅಥವಾ ಚಾಹಲ್ ಯಾವುದೇ ರೀತಿಯಲ್ಲಿ ಮೋಸ ಮಾಡಿದ್ದರು ಎಂಬುದಕ್ಕೆ ಯಾವುದೇ ದಾಖಲೆ ಅಥವಾ ಆಧಾರಗಳಿಲ್ಲ, (ಏಜೆನ್ಸೀಸ್).