ಮಾಜಿ ವೇಗಿ ಎಸ್. ಶ್ರೀಶಾಂತ್‌ಗೆ ಬಿಗ್ ರಿಲೀಫ್!
- ಮಾಜಿ ವೇಗಿ ಎಸ್. ಶ್ರೀಶಾಂತ್‌ಗೆ ಬಿಗ್ ರಿಲೀಫ್!
- ಕೇರಳ ಕ್ರಿಕೆಟ್ ಅಸೋಸಿಯೇಷನ್ ವಿಧಿಸಿದ್ದ 3 ವರ್ಷಗಳ ಬ್ಯಾನ್ ಹಿಂಪಡೆತ
- ಕ್ಷಮೆ ಕೇಳಿದ ಬೆನ್ನಲ್ಲೇ ಕೆಸಿಎ ಮಹತ್ವದ ನಿರ್ಧಾರ
- ಮುಂಬರುವ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಸಕ್ರಿಯರಾಗಲು ಸಿಕ್ತು ಗ್ರೀನ್ ಸಿಗ್ನಲ್
ಕೇರಳ: ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ಎಸ್.ಶ್ರೀಶಾಂತ್ (Sreesanth) ಮೇಲೆ ಹೇರಲಾಗಿದ್ದ ಮೂರು ವರ್ಷಗಳ ನಿಷೇಧವನ್ನು ಕೇರಳ ಕ್ರಿಕೆಟ್ ಅಸೋಸಿಯೇಶನ್ ಹಿಂತೆಗೆದುಕೊಂಡಿದೆ. ತಮ್ಮ ಹೇಳಿಕೆಯಿಂದ ಅಸೋಸಿಯೇಷನ್ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ ಎಂದು ಶ್ರೀಶಾಂತ್ ಕ್ಷಮೆ ಕೇಳಿದ ತರುವಾಯ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಅಸೋಸಿಯೇಶನ್ ಮೇಲೆ ಕಿಡಿಕಾರಿದ್ದ ಶ್ರೀಶಾಂತ್!
ಕಳೆದ ಬಾರಿಯ ಕೇರಳ ಕ್ರಿಕೆಟ್ ಲೀಗ್ ಸಮಯದಲ್ಲಿ ಕೇರಳ ಕ್ರಿಕೆಟ್ ಅಸೋಸಿಯೇಶನ್ ವಿರುದ್ಧ ಶ್ರೀಶಾಂತ್ ನಾಲಿಗೆ ಹರಿಬಿಟ್ಟ ಹಿನ್ನಲೆ ಇವರನ್ನು ಮೂರು ವರ್ಷಗಳ ಅವಧಿಕೆ ಕ್ರಿಕೆಟ್ನಿಂದ ಬ್ಯಾನ್ ಮಾಡಲಾಗಿತ್ತು. ಆದರೆ ಇಂದು (ಬುಧವಾರ, ಜುಲೈ 1) ರಂದು ಕೇರಳ ಕ್ರಿಕೆಟ್ ಅಸೋಸಿಯೇಶನ್ಗೆ ಶ್ರೀಶಾಂತ್ ಕ್ಷಮೆಯಾಚಿಸಿದ್ದು, ಇವರ ಕ್ಷಮೆಯನ್ನು ಒಪ್ಪಿಕೊಂಡು ತಪ್ಪನ್ನು ಮನ್ನಿಸಿರುವ ಅಸೋಸಿಯೇಶನ್ ಹೇರಿದ್ದ ನಿಷೇಧವನ್ನು ಹಿಂಪಡೆದಿದೆ.
ಏರಿಸ್ ಕೊಲ್ಲಂ ಸೇಲರ್ಸ್ ತಂಡದ ಸಹ ಮಾಲೀಕನಾಗಿರುವ ಶ್ರೀಶಾಂತ್ ಮುಂದೆ ನಡೆಯಲಿರುವ ಕೇರಳ ಕ್ರಿಕೆಟ್ ಲೀಗ್ನ ಮೂರನೇ ಆವೃತ್ತಿಯಲ್ಲಿ ಸಕ್ರೀಯರಾಗಿ ಕಾಣಿಸಿಕೊಳ್ಳಲು ಹಸಿರು ನಿಶಾನೆ ದೊರೆತಂದಾಗಿದೆ.
ಅಸೋಸಿಯೇಶನ್ ಖಡಕ್ ಎಚ್ಚರಿಕೆ!
ಶ್ರೀಶಾಂತ್ ಈ ಹಿಂದೆ ಮಾಡಿದ್ದ ತಪ್ಪಿಗೆ ಕ್ಷಮೆ ಕೇಳಿದ ಹಿನ್ನಲೆ ಕೇರಳ ಕ್ರಿಕೆಟ್ ಅಸೋಸಿಯೇಶನ್ ಹೇರಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದೆ. ಆದರೆ ಈ ವರ್ತನೆ ಮರುಕಳಿಸಿದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಅಸೋಸಿಯೇಶನ್ನ ಜನರಲ್ ಬಾಡಿ ಸಭೆಯಲ್ಲಿ ಸ್ಪಷ್ಟ ಪಡಿಸಿದೆ.
ಯಾರು ಈ ಶ್ರೀಶಾಂತ್?
ಭಾರತದ ಮಾಜಿ ವೇಗದ ಬೌಲರ್ ಶಾಂತಕುಮಾರನ್ ಶ್ರೀಶಾಂತ್ (S. Sreesanth) ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಪ್ರತಿಭಾವಂತ ಹಾಗೂ ಅಷ್ಟೇ ವಿವಾದಾತ್ಮಕ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
2005 ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಶ್ರೀಶಾಂತ್ ಪದಾರ್ಪಣೆ ಮಾಡಿದರು. ಭಾರತ ತಂಡವು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2007 ರ ಚೊಚ್ಚಲ ಟಿ20 ವಿಶ್ವಕಪ್ ಮತ್ತು 2011 ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದಾಗ ಶ್ರೀಶಾಂತ್ ಆ ತಂಡಗಳ ಪ್ರಮುಖ ಸದಸ್ಯರಾಗಿದ್ದರು. ಅದರಲ್ಲೂ ವಿಶೇಷವಾಗಿ, 2007 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಮಿಸ್ಬಾ-ಉಲ್-ಹಕ್ ನೀಡಿದ ಕ್ಯಾಚ್ ಅನ್ನು ಶ್ರೀಶಾಂತ್ ಹಿಡಿಯುವ ಮೂಲಕ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟ ಕ್ಷಣ ಕ್ರಿಕೆಟ್ ಇತಿಹಾಸದಲ್ಲಿ ಅಮರವಾಗಿದೆ.
ಮೈದಾನದಲ್ಲಿ ತಮ್ಮ ಅತಿಯಾದ ಆಕ್ರಮಣಕಾರಿ ವರ್ತನೆಯಿಂದ ಸದಾ ಸುದ್ದಿಯಲ್ಲಿರುತ್ತಿದ್ದ ಶ್ರೀಶಾಂತ್ ವೃತ್ತಿಜೀವನಕ್ಕೆ ದೊಡ್ಡ ಆಘಾತ ಎದುರಾಗಿದ್ದು 2013 ರ ಐಪಿಎಲ್ ಸಮಯದಲ್ಲಿ. ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿದ್ದಾಗ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಿಸಿಸಿಐ (BCCI) ಅವರ ಮೇಲೆ ಆಜೀವ ನಿಷೇಧ ಹೇರಿತು. ದೀರ್ಘಾವಧಿಯ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯಿಂದ ಅವರ ನಿಷೇಧವನ್ನು 7 ವರ್ಷಗಳಿಗೆ ಕಡಿತಗೊಳಿಸಲಾಯಿತು.
ನಿಷೇಧದ ಅವಧಿ ಮುಗಿದ ನಂತರ ಅವರು ಮತ್ತೆ ದೇಶಿ ಕ್ರಿಕೆಟ್‌ಗೆ ಮರಳಿ ಕೇರಳ ತಂಡವನ್ನು ಪ್ರತಿನಿಧಿಸಿ, ಮಾರ್ಚ್ 2022 ರಲ್ಲಿ ಎಲ್ಲಾ ಮಾದರಿಯ ಭಾರತೀಯ ದೇಶಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಕ್ರಿಕೆಟ್ ಹೊರತುಪಡಿಸಿ ಶ್ರೀಶಾಂತ್ ಬಿಗ್ ಬಾಸ್, ಝಲಕ್ ದಿಖ್ಲಾ ಜಾ ಮುಂತಾದ ರಿಯಾಲಿಟಿ ಶೋಗಳಲ್ಲಿ ಹಾಗೂ ಕೆಲವು ಚಲನಚಿತ್ರಗಳಲ್ಲೂ ನಟಿಸಿ ಮನರಂಜನಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ, (ಏಜನ್ಸೀಸ್).