ನಾಲ್ವರಂತು ಫಿಕ್ಸ್... ಕಿವೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನವೇ ಬದಲಾವಣೆ ಬಗ್ಗೆ ಕ್ಯಾಪ್ಟನ್​ ಗಿಲ್ ಮಾತು | IND vs NZ ODI​  
ಕ್ರಿಕೆಟ್

ನಾಲ್ವರಂತು ಫಿಕ್ಸ್... ಕಿವೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನವೇ ಬದಲಾವಣೆ ಬಗ್ಗೆ ಕ್ಯಾಪ್ಟನ್​ ಗಿಲ್ ಮಾತು | IND vs NZ ODI​

IND vs NZ ODI​: ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 3-2 ಅಂತರದಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ, ನಾಳೆಯಿಂದ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಐದು ಪಂದ್ಯಗಳ ಏಕದಿನ ಸರಣಿ ಬುಧವಾರ ಆಕ್ಲೆಂಡ್​ ಮೈದಾನದಲ್ಲಿ ನಡೆಯಲಿದ್ದು, ಮೊದಲ ಪಂದ್ಯಕ್ಕೂ ಮುನ್ನವೇ ತಂಡದ ನಾಯಕ ಶುಭಮನ್ ಗಿಲ್ ಕೆಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಈಗಾಗಲೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಅಗ್ರ 4 ಸ್ಥಾನಗಳನ್ನು ಅಂತಿಮಗೊಳಿಸಲಾಗಿದೆ. ಆದಾಗ್ಯೂ, ಪಂದ್ಯದ ಪರಿಸ್ಥಿತಿಗಳಿಗೆ ಅನುಗುಣವಾಗಿ ಐದು ಮತ್ತು ಆರನೇ ಸ್ಥಾನಗಳಲ್ಲಿ ಯಾವ ಆಟಗಾರರನ್ನು ಕಳುಹಿಸಿದರೆ ಉತ್ತಮ ಎಂಬುದನ್ನು ಪಿಚ್​ ಮತ್ತು ಆಟದ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಅಲ್ಲಿಗೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ತಮ್ಮನ್ನು ಸೇರಿಸಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಮೊದಲ ನಾಲ್ಕು ಸ್ಥಾನಗಳಲ್ಲಿ ಆಡಲಿರುವ ಬ್ಯಾಟ್ಸ್​ಮನ್​ ಎಂದು ಗಿಲ್ ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ನಾಲ್ವರೂ ಬಲಗೈ ಬ್ಯಾಟ್ಸ್‌ಮನ್‌ ಆಗಿರುವುದರಿಂದ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್‌ಮನ್ ಅಗತ್ಯವಿದ್ದರೆ ಎದುರಾಳಿಯ ಬೌಲಿಂಗ್‌ಗೆ ಅನುಗುಣವಾಗಿ ಅಕ್ಷರ್ ಪಟೇಲ್ ಅವರನ್ನು ಮೊದಲು ಕಳುಹಿಸುವುದಾಗಿ ಹೇಳಿದರು.

ಐದು ಮತ್ತು ಆರನೇ ಕ್ರಮಾಂಕದಲ್ಲಿ ಆಡಲು ಎಡಗೈ ಬ್ಯಾಟ್ಸ್‌ಮನ್ ಅಗತ್ಯವಿದ್ದರೆ, ಅಕ್ಷರ್ ಪಟೇಲ್​ ಮುಂದೆ ಬರುತ್ತಾರೆ. ಪಂದ್ಯದ ಪರಿಸ್ಥಿತಿಯನ್ನು ಅವಲಂಬಿಸಿ, ಕೆ.ಎಲ್. ರಾಹುಲ್ ಅವರು ಕೂಡ ಮೊದಲು ಬ್ಯಾಟಿಂಗ್‌ಗೆ ಇಳಿಯಬಹುದು. ಪ್ರಸ್ತುತ ನನಗೆ ಯಾವುದೇ ಇಂಜುರಿ ಅಥವಾ ನೋವಿನ ಅನುಭವವಿಲ್ಲ ಮತ್ತು ಸರಣಿಯ ಮೊದಲು ಅಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ. ಸುಮಾರು ಒಂದೂವರೆ ಗಂಟೆಗಳ ಕಾಲ ಬ್ಯಾಟಿಂಗ್ ಅಭ್ಯಾಸ ಮಾಡಿದ್ದೇನೆ. ನಾನು ಯಾವುದೇ ತೊಂದರೆಯಿಲ್ಲದೆ ಫೀಲ್ಡಿಂಗ್ ಕೂಡ ಮಾಡಿದ್ದೇನೆ. ಇದೀಗ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.

ಇದು ಏಕದಿನ ಪಂದ್ಯದ ಲೆಕ್ಕಾಚಾರ ಆಗಿದ್ದರೆ, ಅತ್ತ ಮಾಜಿ ಕ್ರಿಕೆಟ್​ ಯುವರಾಜ್ ಸಿಂಗ್ ಕೇಳಿಕೊಂಡಂತೆ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾಗೆ ಏಕದಿನ ಸರಣಿಗೆ ಅವಕಾಶ ನೀಡಿಲ್ಲ. ಅಭಿಷೇಕ್​ ಮತ್ತು ವೈಭವ್​ ಅದ್ಭುತ ಪ್ರತಿಭೆಗಳು. ಇವರನ್ನು ಕೇವಲ ಟಿ20 ಕ್ರಿಕೆಟ್​ ಮಾತ್ರ ಸೀಮಿತ ಮಾಡದೆ, ಏಕದಿನ ತಂಡದಲ್ಲಿಯೂ ಅವಕಾಶ ಕೊಡಬೇಕು ಎಂದು ಯುವಿ ಮ್ಯಾನೇಜ್​ಮೆಂಟ್​ ಮತ್ತು ಆಯ್ಕೆಗಾರರ ಸಮಿತಿಗೆ ಸಲಹೆ ನೀಡಿದ್ದರು. ಆದ್ರೆ, ಯುವರಾಜ್​ ಮಾತನ್ನು ಸದ್ಯ ಬಿಸಿಸಿಐ ಪರಿಗಣಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).