ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಭದ್ರತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅತ್ಯಾಧುನಿಕ ಸ್ಮಾರ್ಟ್ ಕನ್ನಡಕಗಗಳ(ಗ್ಲಾಸ್) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಐಪಿಎಲ್ ಪಂದ್ಯಗಳ ವೇಳೆ ಆಟಗಾರರು ಅಡ್ಡದಾರಿ ಹಿಡಿಯುವುದನ್ನು ತಡೆಯಲು ಹಾಗೂ ತಂತ್ರಜ್ಞಾನದ ದುರ್ಬಳಕೆಗೆ ಬ್ರೇಕ್ ಹಾಕಲು ಬಿಸಿಸಿಐನ ಭ್ರಷ್ಟಾಚಾರ ನಿರೋಧಕ ಮತ್ತು ಭದ್ರತಾ ಘಟಕ (ACSU) ಈಗ ‘ಸ್ಮಾರ್ಟ್ ಗ್ಲಾಸ್’ (Smart Glasses) ಹಾಗೂ ಅತ್ಯಾಧುನಿಕ ಸ್ಮಾರ್ಟ್ ಕನ್ನಡಕಗಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ಬಗ್ಗೆ ಪ್ರಕಟಿಸಿದೆ.
ಇನ್ಮುಂದೆ ಪಂದ್ಯ ನಡೆಯುವ ದಿನಗಳಂದು ಆಟಗಾರರು ಮತ್ತು ಪೋಷಕ ಸಿಬ್ಬಂದಿ (Support Staff) ತಮ್ಮಲ್ಲಿರುವ ಇಂತಹ ಹೈಟೆಕ್ ಕನ್ನಡಕಗಗಳನ್ನು ಕಡ್ಡಾಯವಾಗಿ ಭದ್ರತಾಧಿಕಾರಿಗಳ ಬಳಿ ಒಪ್ಪಿಸಬೇಕಾಗುತ್ತದೆ.
ಏನಿದು ಸ್ಮಾರ್ಟ್ ಗ್ಲಾಸ್ ತಲೆನೋವು?
ಇತ್ತೀಚಿನ ದಿನಗಳಲ್ಲಿ ಹಲವು ಪ್ರಮುಖ ತಂತ್ರಜ್ಞಾನ ಕಂಪನಿಗಳು ಐಪಿಎಲ್ ಆಟಗಾರರು ಹಾಗೂ ಫ್ರಾಂಚೈಸಿ ಸಿಬ್ಬಂದಿಗೆ ಅತ್ಯಾಧುನಿಕ ಸ್ಮಾರ್ಟ್ ಸನ್‌ಗ್ಲಾಸ್‌ಗಳನ್ನು ಪ್ರಮೋಟ್ ಮಾಡುತ್ತಿವೆ. ಇವು ನೋಡಲು ಸಾಮಾನ್ಯ ಕೂಲಿಂಗ್ ಗ್ಲಾಸ್‌ಗಳಂತೆಯೇ ಕಂಡರೂ, ಇವುಗಳ ಒಳಗಿರುವ ಫೀಚರ್‌ಗಳು ಮಾತ್ರ ಟೂರ್ನಿಯ ಸಂಘಟಕರ ನಿದ್ದೆ ಕೆಡಿಸಿವೆ.
ಬಿಸಿಸಿಐ ಅಧಿಕಾರಿಗಳ ಪ್ರಕಾರ, ಈ ಸ್ಮಾರ್ಟ್ ಗ್ಲಾಸ್‌ಗಳ ಮೂಲಕ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಬಹುದು, ಪಂದ್ಯದ ದೃಶ್ಯಗಳನ್ನು ಲೈವ್ ಸ್ಟ್ರೀಮ್ ಮಾಡಬಹುದು, ಮೊಬೈಲ್ ಡೇಟಾ ಅಥವಾ ವೈಫೈ ಬಳಸಿ ಮೆಸೇಜ್ ಹಾಗೂ ಆಡಿಯೋ-ವಿಡಿಯೋ ಕರೆಗಳನ್ನು ಕೂಡ ಮಾಡಬಹುದು. ಈ ಕನ್ನಡಕಗಗಳು ಕೇವಲ ಸ್ಟೈಲ್ ಫ್ಯಾಷನ್ ಅಲ್ಲದೆ, ಸಂವಹನ ಹಾಗೂ ರೆಕಾರ್ಡಿಂಗ್ ಸಾಧನಗಳಾಗಿ ಕೆಲಸ ಮಾಡುವುದರಿಂದ ಇವುಗಳ ಮೂಲಕ ಪಂದ್ಯದ ಲೈವ್ ಮಾಹಿತಿ ಹೊರಗಿನ ಬುಕ್ಕಿಗಳಿಗೆ ಲೀಕ್ ಆಗುವ ಭಾರಿ ಆತಂಕ ಎದುರಾಗಿದೆ.
ಹೊಸ ನಿಯಮಗಳೇನು?
ಹೊಸ ಮಾರ್ಗಸೂಚಿಗಳ ಪ್ರಕಾರ, ಆಟಗಾರರು ಮತ್ತು ಅಧಿಕಾರಿಗಳ ನಿಯಂತ್ರಿತ ವಲಯಗಳಾದ (PMOA) ಡ್ರೆಸ್ಸಿಂಗ್ ರೂಮ್, ಡಗೌಟ್ ಮತ್ತು ಪ್ಲೇಯರ್ಸ್ ವೀಕ್ಷಣೆ ಗ್ಯಾಲರಿಗಳಲ್ಲಿ ಸ್ಮಾರ್ಟ್ ಗ್ಲಾಸ್ ಬಳಕೆಯನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.
ಮೈದಾನಕ್ಕೆ ಆಗಮಿಸುತ್ತಿದ್ದಂತೆಯೇ ಆಟಗಾರರು ತಮ್ಮ ಸ್ಮಾರ್ಟ್ ಗ್ಲಾಸ್ಗಳನ್ನು ಭದ್ರತಾ ಸಂಪರ್ಕ ಅಧಿಕಾರಿಗೆ (SLO) ಹಸ್ತಾಂತರಿಸಬೇಕು.
ಮೊಬೈಲ್ ಫೋನ್‌ಗಳು, ಸ್ಮಾರ್ಟ್ ವಾಚ್‌ಗಳ ಮಾದರಿಯಲ್ಲೇ ಇವುಗಳನ್ನೂ ನಿಷೇಧಿತ ಎಲೆಕ್ಟ್ರಾನಿಕ್ ಸಾಧನಗಳ ಪಟ್ಟಿಗೆ ಸೇರಿಸಲಾಗಿದೆ.
ಈ ನಿಯಮವನ್ನು ಉಲ್ಲಂಘಿಸಿ ಯಾರಾದರೂ ಸ್ಮಾರ್ಟ್ ಗ್ಲಾಸ್ ಧರಿಸಿ ಡ್ರೆಸ್ಸಿಂಗ್ ರೂಮ್ ಒಳಗೆ ಸಿಕ್ಕಿಬಿದ್ದರೆ, ಅದನ್ನು ಪ್ರೋಟೋಕಾಲ್ ಉಲ್ಲಂಘನೆ ಎಂದು ಪರಿಗಣಿಸಿ ಕಠಿಣ ಶಿಸ್ತು ಕ್ರಮ ಮತ್ತು ವೈಯಕ್ತಿಕ ದಂಡ ವಿಧಿಸಲಾಗುತ್ತದೆ.
ಇತ್ತೀಚಿನ ವಿವಾದಗಳು: ರಾಜಸ್ಥಾನ್ ರಾಯಲ್ಸ್‌ಗೆ ಬಿದ್ದಿತ್ತು ದಂಡ!
ಐಪಿಎಲ್ 2026ರ ಸೀಸನ್‌ನಲ್ಲಿ ಈಗಾಗಲೇ ನಿಯಮ ಉಲ್ಲಂಘನೆಯ ಕೆಲವು ಪ್ರಮುಖ ಘಟನೆಗಳು ನಡೆದಿರುವುದು ಬಿಸಿಸಿಐ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ಕಾರಣವಾಗಿದೆ.
ಮ್ಯಾನೇಜರ್‌ಗೆ ದಂಡ: ಪಂದ್ಯದ ವೇಳೆ ಡಗೌಟ್‌ನಲ್ಲಿ ಕುಳಿತು ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರಿಗೆ ಬಿಸಿಸಿಐ ಇತ್ತೀಚೆಗೆ 1 ಲಕ್ಷ ರೂಪಾಯಿ ದಂಡ ಹಾಗೂ ಕಠಿಣ ಎಚ್ಚರಿಕೆ ನೀಡಿತ್ತು.
ರಿಯಾನ್ ಪರಾಗ್ ಇ-ಸಿಗರೇಟ್ ವಿವಾದ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ (E-Cigarette) ಬಳಸುತ್ತಿದ್ದ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿ ಭಾರಿ ವಿವಾದ ಸೃಷ್ಟಿಸಿತ್ತು. ಕ್ರೀಡೆಯ ಗೌರವಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಅವರಿಗೆ ಪಂದ್ಯದ ಸಂಭಾವನೆಯ ಶೇ. 25 ರಷ್ಟು ದಂಡ ಹಾಗೂ ಡೆಮೆರಿಟ್ ಪಾಯಿಂಟ್ ನೀಡಲಾಗಿತ್ತು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಸಿಸಿಐ, ಧರಿಸಬಹುದಾದ ಗ್ಯಾಜೆಟ್‌ಗಳ (Wearable Technology) ಮೂಲಕ ಮೈದಾನದೊಳಗಿನ ಯಾವುದೇ ರಹಸ್ಯ ಮಾಹಿತಿ ದುರುಪಯೋಗವಾಗದಂತೆ ತಡೆಯಲು ಈ ಕಠಿಣ ನಿಯಮ ಜಾರಿಗೆ ತಂದಿದೆ,(ಏಜೆನ್ಸೀಸ್).