ಬೇಬಿ ಬಾಸ್ ಫ್ಯಾನ್ಸ್ಗೆ ಬ್ಯಾಡ್ ನ್ಯೂಸ್... ಅನಗತ್ಯ ವಿವಾದದಲ್ಲಿ ಸಿಲುಕಿದ ವೈಭವ್ ಸೂರ್ಯವಂಶಿಗೆ ನಿಷೇಧ!? Vaibhav Suryavanshi
- ಬಿಸಿಸಿಐ ಅಂಗಳ ತಲುಪಿದ ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಫೋನ್ ಬಳಕೆ ವಿವಾದ
- ನಿಯಮ ಉಲ್ಲಂಘಿಸಿದ ರೋಮಿ ಭಿಂದರ್ಗೆ 48 ಗಂಟೆಗಳೊಳಗೆ ಉತ್ತರಿಸುವಂತೆ ಬಿಸಿಸಿಐ ನೋಟಿಸ್
- ವೈರಲ್ ವಿಡಿಯೋ ನೋಡಿ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರಿಂದ ಭಿಂದರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
- ಭಿಂದರ್ ಫೋನ್ ಬಳಸುವುದನ್ನು ಕದ್ದು ನೋಡಿದ ಬೇಬಿ ಬಾಸ್ ವೈಭವ್ ಸೂರ್ಯವಂಶಿಗೂ ನಿಷೇಧದ ಭೀತಿ
Vaibhav Suryavanshi : ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಡಗೌಟ್‌ನಲ್ಲಿ ಫೋನ್ ಬಳಸಿ ವಿವಾದಕ್ಕೆ ಸಿಲುಕಿದ್ದಾರೆ. ಐಪಿಎಲ್ ಭ್ರಷ್ಟಾಚಾರ ವಿರೋಧಿ ಶಿಷ್ಟಾಚಾರವನ್ನು ಉಲ್ಲಂಘಿಸಿದ ಆರೋಪವನ್ನು ರೋಮಿ ಭಿಂದರ್ ಎದುರಿಸುತ್ತಿದ್ದಾರೆ. ಈ ವಿವಾದದಲ್ಲಿ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರ ಹೆಸರು ಕೂಡ ಕೇಳಿಬಂದಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಿಸಿಸಿಐ ಕೂಡ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಒಬ್ಬ ಮ್ಯಾನೇಜರ್ ಆಗಿ ರೋಮಿ ಭಿಂದರ್ ತಮ್ಮ ಫೋನ್ ತೆಗೆದುಕೊಂಡು ಹೋಗಬಹುದು ಆದರೆ, ಅದನ್ನು ಡಗೌಟ್‌ನಲ್ಲಿ ಬಳಸಬಾರದು. ವಿಡಿಯೋ ದೃಶ್ಯಾವಳಿ ಮತ್ತು ಚಿತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ. ರೋಮಿ ಭಿಂದರ್ ಅವರಿಗೆ ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಇಲಾಖೆಯಿಂದ ಈಗಾಗಲೇ ನೋಟಿಸ್ ನೀಡಲಾಗಿದ್ದು, 48 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.
ಅಷ್ಟಕ್ಕೂ ಏನಾಯಿತು?
ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ರಾಜಸ್ಥಾನ ಡಗೌಟ್‌ನಲ್ಲಿ ರೋಮಿ ಭಿಂದರ್ ತಮ್ಮ ಫೋನ್ ಬಳಸುತ್ತಿದ್ದರು. ಅವರ ಪಕ್ಕದಲ್ಲಿ ಕುಳಿತಿದ್ದ ವೈಭವ್ ಸೂರ್ಯವಂಶಿ ಕೂಡ ಫೋನ್ ಪರದೆಯನ್ನು ಕದ್ದು ನೋಡುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಭಾರಿ ಟೀಕೆಗಳು ಕೇಳಿಬಂದ ಬೆನ್ನಲ್ಲೇ ಬಿಸಿಸಿಐ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಬಿಸಿಸಿಐ ಭ್ರಷ್ಟಾಚಾರ ವಿರೋಧಿ ಘಟಕವು ಈ ಬಗ್ಗೆ ಆಂತರಿಕ ತನಿಖೆ ನಡೆಸಲಿದೆ. ಆಟಗಾರರು ಮತ್ತು ಪಂದ್ಯ ಅಧಿಕಾರಿಗಳ ಪ್ರದೇಶ (PMOA) ನಿಯಮಗಳ ಪ್ರಕಾರ, ಪಂದ್ಯದ ಸಮಯದಲ್ಲಿ ಡಗೌಟ್‌ನಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ, ವ್ಯವಸ್ಥಾಪಕರು ಡ್ರೆಸ್ಸಿಂಗ್ ಕೋಣೆಯಲ್ಲಿ ಫೋನ್ ಬಳಸಬಹುದು.
ವೈಭವ್ ಅವರಿಗೂ ಬ್ಯಾನ್ ಭೀತಿ!
ನಿಯಮಗಳ ಉಲ್ಲಂಘನೆ ಕಂಡುಬಂದರೆ, ಭಿಂದರ್ ಮೇಲೆ ದಂಡ ಅಥವಾ ನಿಷೇಧ ಹೇರುವ ಸಾಧ್ಯತೆಯಿದೆ. ಪಕ್ಕದಲ್ಲಿದ್ದ ಮತ್ತು ಫೋನ್ ನೋಡಿದ ವೈಭವ್ ಸೂರ್ಯವಂಶಿ ವಿರುದ್ಧವೂ ಬಿಸಿಸಿಐ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ. ಅವರ ಮೇಲೆ ದಂಡ ಅಥವಾ ಒಂದು ಪಂದ್ಯದ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವೈಭವ್ರಿಂದ ಸಿಕ್ಕಿಬಿದ್ದ ಭಿಂದರ್
ವಾಸ್ತವವಾಗಿ ಭಿಂದರ್ ಅವರು ಕ್ಯಾಮೆರಾ ಕಣ್ಣಿಗೆ ಬೀಳುತ್ತಿರಲಿಲ್ಲ. ತಮ್ಮ ಪಕ್ಕದಲ್ಲಿ ವೈಭವ್ ಇದ್ದಿದ್ದರಿಂದ ಭಿಂದರ್ ಸಿಕ್ಕಿಹಾಕಿಕೊಂಡರು. ಪ್ರಸ್ತುತ ವೈಭವ್ ಐಪಿಎಲ್ನಲ್ಲಿ ತಮ್ಮ ಬಿರುಗಾಳಿ ಇನ್ನಿಂಗ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೇವಲ 15 ವರ್ಷದ ಬಾಲಕ ಪ್ರತಿ ಪಂದ್ಯದಲ್ಲೂ ಅಬ್ಬರಿಸಿ, ಬೊಬ್ಬಿರಿಯುತ್ತಿದ್ದಾನೆ. ವಿಶ್ವ ದರ್ಜೆಯ ಬೌಲರ್ಗಳಿಗೆ ಬೆವರಿಳಿಸುತ್ತಿದ್ದಾನೆ. ಹೀಗಾಗಿ, ಆರ್ಆರ್ ತಂಡದ ಪಂದ್ಯವಿದ್ದಾಗಲೆಲ್ಲ ಕ್ಯಾಮೆರಾಮೆನ್ ವೈಭವ್ ಅವರನ್ನು ಹೆಚ್ಚು ಫೋಕಸ್ ಮಾಡುತ್ತಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ಕ್ಯಾಮೆರಾಮೆನ್ ವೈಭವ್ ಅವರನ್ನು ಸಾಕಷ್ಟು ಬಾರಿ ಸರೆಹಿಡಿದರು. ಈ ವೇಳೆ ಭಿಂದರ್ ಫೋನ್ ಬಳಸುವುದು ಕೂಡ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಬಳಿಕ ಸಾಕಷ್ಟು ಮಂದಿ ಡಗೌಟ್‌ನಲ್ಲಿ ಫೋನ್ ಬಳಸಬಹುದೇ? ಇದು ನಿಯಮ ಉಲ್ಲಂಘನೆ ಅಲ್ಲವೇ? ಎಂದು ಪ್ರಶ್ನೆ ಎತ್ತಿದರು. ಹೀಗಾಗಿ, ಇದೀಗ ಬಿಸಿಸಿಐ ನೋಟಿಸ್ ನೀಡಿದೆ. ಇದಕ್ಕೆ ಭಿಂದರ್ ಯಾವ ಉತ್ತರ ನೀಡುತ್ತಾರೆಂದು ಕಾದು ನೋಡಬೇಕಾಗಿದೆ.
ಬಿಸಿಸಿಐ ನಿಯಮಗಳೇನು?
* ಮೊಬೈಲ್ ಫೋನ್‌ಗಳು ಮತ್ತು ಸಂವಹನ ಸಾಧನಗಳನ್ನು ಡಗೌಟ್‌ನಲ್ಲಿ ಅನುಮತಿಸಲಾಗುವುದಿಲ್ಲ’
* ತಂಡದ ವ್ಯವಸ್ಥಾಪಕರು ಫೋನ್ ಅನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ಮಾತ್ರ ಬಳಸಬಹುದು ಮತ್ತು ಡಗೌಟ್‌ನಲ್ಲಿ ಅಲ್ಲ
* ವಿಶ್ಲೇಷಕರು ಕಂಪ್ಯೂಟರ್‌ಗಳನ್ನು ಬಳಸಬಹುದು, ಆದರೆ ವಿಶೇಷವಾಗಿ ಗೊತ್ತುಪಡಿಸಿದ ವಿಶ್ಲೇಷಕ ಟೇಬಲ್‌ನಲ್ಲಿ ಮಾತ್ರ
* ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕ್ರೀಡಾಂಗಣಕ್ಕೆ ಪ್ರವೇಶಿಸಿದ ತಕ್ಷಣ ತಮ್ಮ ಸಾಧನಗಳನ್ನು ಆಫ್ ಮಾಡಿ ಸುರಕ್ಷಿತವಾಗಿ ಇಡಬೇಕು
* ಪರಿಚಾರಕರು ಮತ್ತು ಅಡುಗೆ ಕೆಲಸಗಾರರಂತಹ ಸಿಬ್ಬಂದಿಗಳು ಸಂವಹನ ಸಾಧನಗಳನ್ನು ತರಲು ಸಹ ಅನುಮತಿಸಲಾಗುವುದಿಲ್ಲ, (ಏಜೆನ್ಸೀಸ್).