ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್​ ಕೊಹ್ಲಿ 
ಕ್ರಿಕೆಟ್

ಕ್ರಿಕೆಟ್​, ಗ್ಲಾಮರ್ ಜಗತ್ತಿನಿಂದ ದೂರಾಗಿ ಆಧ್ಯಾತ್ಮದ ಹಾದಿ ಹಿಡಿದ ವಿರುಷ್ಕಾ ದಂಪತಿ..! Virat Kohli Anushka Sharma

ನವದೆಹಲಿ: ಬಾಲಿವುಡ್​ ಎಂಬ ಗ್ಲಾಮರಸ್​ ಲೋಕದ ಗೊಂಬೆ ಅನುಷ್ಕಾ ಶರ್ಮಾ ಮತ್ತು ಟೀಮ್ ಇಂಡಿಯಾದ ರನ್‌ಮಷಿನ್ ವಿರಾಟ್ ಕೊಹ್ಲಿ ( Virat Kohli Anushka Sharma ) ಜಗತ್ಪ್ರಸಿದ್ಧ ತಾರಾದಂಪತಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಈ ದಂಪತಿಗೆ ಸಂಬಂಧಿಸಿದ ಸಣ್ಣ ವಿಚಾರವೂ ಸಾಮಾಜಿಕ ಜಾಲತಾಣದಲ್ಲಿ ಸದಾ ವೈರಲ್ ಆಗುತ್ತಿರುತ್ತದೆ. ಈ ಬಾರಿ ತಮ್ಮ ಆಧ್ಯಾತ್ಮಿಕ ಪಯಣದ ಮೂಲಕ ಈ ದಂಪತಿ ಪ್ರತಿಯೊಬ್ಬರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಪ್ರಸಿದ್ಧ ಭಕ್ತಿ ಗಾಯಕ ಕೃಷ್ಣ ದಾಸ್ ಅವರು ಆಯೋಜಿಸಿದ್ದ ಸತ್ಸಂಗ ಹಾಗೂ ಕೀರ್ತನೆ ಕಾರ್ಯಕ್ರಮದಲ್ಲಿ ವಿರಾಟ್-ಅನುಷ್ಕಾ ದಂಪತಿ ಭಾಗವಹಿಸಿ ಕೀರ್ತನೆಯಲ್ಲಿ ತಲ್ಲೀನರಾಗಿದ್ದರು. ಈ ಸುಂದರ ದೃಶ್ಯಗಳು ಹಾಗೂ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿವೆ.

ಮುಂಬೈನ ಕೀರ್ತನ ಕಾರ್ಯಕ್ರಮದಲ್ಲಿ ಕೃಷ್ಣ ದಾಸ್ ಅವರ ಕೀರ್ತನೆಯ ನಾದಕ್ಕೆ ಅನುಷ್ಕಾ ಶರ್ಮಾ ಸಂಪೂರ್ಣವಾಗಿ ಭಕ್ತಿಪರವಶರಾಗಿದ್ದರು. ಸಭಾಂಗಣದ ಮೊದಲ ಸಾಲಿನಲ್ಲಿ ಕುಳಿತು, ಎರಡೂ ಕೈಗಳಿಂದ ಚಪ್ಪಾಳೆ ತಟ್ಟುತ್ತಾ 'ರಾಧೇ ಗೋವಿಂದ' ನಾಮಸ್ಮರಣೆ ಮಾಡುತ್ತಾ ಕೀರ್ತನೆಯಲ್ಲಿ ಮೈಮರೆತಿದ್ದರು. ಅವರ ಪಕ್ಕದಲ್ಲೇ ಸರಳ ಕಪ್ಪು ಟೀ ಶರ್ಟ್ ಧರಿಸಿ ಕುಳಿತಿದ್ದ ವಿರಾಟ್ ಕೊಹ್ಲಿ ಕೂಡ ಅತ್ಯಂತ ಶಾಂತಚಿತ್ತದಿಂದ ಭಜನೆಯನ್ನು ಆಲಿಸುತ್ತಾ ಆನಂದಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಮೈದಾನದಲ್ಲಿ ಆಕ್ರಮಣಕಾರಿ ಆಟಕ್ಕೆ ಹೆಸರಾದ ವಿರಾಟ್ ಹಾಗೂ ಬೆಳ್ಳಿತೆರೆಯ ಗ್ಲಾಮರಸ್ ನಟಿ ಅನುಷ್ಕಾ ಅವರ ಈ ಆಧ್ಯಾತ್ಮಿಕ ಅವತಾರ ಮತ್ತು ಸರಳತೆಯನ್ನು ಕಂಡು ನೆಟ್ಟಿಗರು ಹಾಗೂ ಅಭಿಮಾನಿಗಳು ಮನಸೋತಿದ್ದಾರೆ.

ಕಾರ್ಯಕ್ರಮದಲ್ಲಿ ಎಲ್ಲರ ಕಣ್ಣು ನೆಟ್ಟಿದ್ದು ಅನುಷ್ಕಾ ಶರ್ಮಾ ಅವರ ನೈಸರ್ಗಿಕ ಸೌಂದರ್ಯ ಹಾಗೂ ಸರಳ ಉಡುಪಿನ ಮೇಲೆ. ಯಾವುದೇ ಆಡಂಬರವಿಲ್ಲದೆ ಗ್ಲಾಮರ್ ಲೋಕದಿಂದ ದೂರ ಉಳಿದಿರುವ ಅನುಷ್ಕಾ, ಈ ಆಧ್ಯಾತ್ಮಿಕ ಕಾರ್ಯಕ್ರಮಕ್ಕಾಗಿ ಮಲ್ಬೆರಿ (ಮೆಜೆಂಟಾ) ಬಣ್ಣದ ಸರಳ ಅನಾರ್ಕಲಿ ಸೂಟ್ ಆಯ್ಕೆ ಮಾಡಿಕೊಂಡಿದ್ದರು. ಯಾವುದೇ ಲೇಸ್, ಕಸೂತಿ (ಎಂಬ್ರಾಯ್ಡರಿ) ಅಥವಾ ಅತಿಯಾದ ತಳುಕು-ಬಳುಕಿಲ್ಲದ ಈ ಡ್ರೆಸ್ ಆ ಸಮಯದ ವಾತಾವರಣಕ್ಕೆ ಅತ್ಯಂತ ಸೂಕ್ತವಾಗಿತ್ತು. 'ಪ್ಲೇಸ್ ದಿ ಡಾಟ್' ಬ್ರಾಂಡ್‌ನ 'ಘೂಮರ್ ಅನಾರ್ಕಲಿ ಮಲ್ಬೆರಿ ಸೆಟ್' ಎಂದೇ ಕರೆಯಲ್ಪಡುವ ಈ ಉಡುಪಿನ ಬೆಲೆ ಸುಮಾರು 10,900 ಎಂದು ಅಂದಾಜಿಸಲಾಗಿದೆ.

ಅನುಷ್ಕಾ ಶರ್ಮಾ ಅವರು ಮ್ಯಾಚಿಂಗ್ ದುಪಟ್ಟಾ, ಹಗುರವಾದ ಮೇಕಪ್, ಸಡಿಲವಾದ ಕೇಶವಿನ್ಯಾಸ ಹಾಗೂ ಹಣೆಗೊಂದು ಪುಟ್ಟ ಬೊಟ್ಟು ಇಟ್ಟುಕೊಂಡು ಪೂರ್ಣಪ್ರಮಾಣದ ಸಾಂಪ್ರದಾಯಿಕ ಭಾರತೀಯ ನಾರಿಯಂತೆ ಕಂಗೊಳಿಸುತ್ತಿದ್ದರು. ದೈನಂದಿನ ಗದ್ದಲ ಮತ್ತು ಸಿನಿಮಾ-ಕ್ರಿಕೆಟ್‌ನ ಧಾವಂತದ ಬದುಕಿನ ನಡುವೆಯೂ, ಭಕ್ತಿಪರವಶತೆಯ ಹರಿವಿನಲ್ಲಿ ತೇಲುತ್ತಾ ಅತ್ಯಂತ ಸರಳವಾಗಿ ಈ ಕೀರ್ತನೆಯಲ್ಲಿ ಪಾಲ್ಗೊಂಡ ಕೊಹ್ಲಿ ದಂಪತಿಯನ್ನು ನೋಡಿ ಅಭಿಮಾನಿಗಳು ಮತ್ತು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಮಳೆಯನ್ನೇ ಹರಿಸುತ್ತಿದ್ದಾರೆ, (ಏಜೆನ್ಸೀಸ್​).