ಗೋವಾ ಬಿಡಲ್ಲ... ತಮ್ಮ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್! Arjun Tendulkar
- ವೃತ್ತಿ ಭವಿಷ್ಯದ ಕುರಿತು ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಅರ್ಜುನ್ ತೆಂಡೂಲ್ಕರ್
- ಗೋವಾ ತಂಡದಲ್ಲೇ ಮುಂದುವರಿಯುವುದಾಗಿ ಅರ್ಜುನ್ ತೆಂಡೂಲ್ಕರ್ ಸ್ಪಷ್ಟನೆ
- ಗೋವಾ ತಂಡದ ಓಮಾನ್ ಪ್ರವಾಸದಿಂದ ಅರ್ಜುನ್ ದೂರ ಉಳಿದಾಗ ಹರಿದಾಡಿದ್ದ ವದಂತಿ
- ಅರ್ಜುನ್ ಅವರು ತಂಡದಲ್ಲೇ ಮುಂದುವರಿಯಲಿದ್ದಾರೆ ಎಂದ ಗೋವಾ ಕ್ರಿಕೆಟ್ ಸಂಘದ ಮೂಲಗಳು
ನವದೆಹಲಿ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಹಾಗೂ 26 ವರ್ಷದ ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ( Arjun Tendulkar ) ಅವರು ತಮ್ಮ ವೃತ್ತಿ ಭವಿಷ್ಯದ ಕುರಿತು ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಮುಂಬರುವ ದೇಶೀಯ ಕ್ರಿಕೆಟ್ ಸೀಸನ್‌ನಲ್ಲೂ ಗೋವಾ ತಂಡದ ಪರವಾಗಿಯೇ ಆಡಲಿದ್ದಾರೆ ಎಂದು 'ಸ್ಪೋರ್ಟ್ಸ್‌ಸ್ಟಾರ್' ವರದಿ ಮಾಡಿದೆ.
ಇತ್ತೀಚೆಗೆ ಗೋವಾ ತಂಡದ ಓಮಾನ್ ಪ್ರವಾಸದಿಂದ ಅರ್ಜುನ್ ದೂರ ಉಳಿದಾಗ ಅವರು ತಂಡವನ್ನು ತೊರೆಯಲಿದ್ದಾರೆ ಎಂಬ ವಾದಗಳು ಬಲವಾಗಿ ಕೇಳಿಬಂದಿದ್ದವು. ಆದರೆ, ಗೋವಾ ಕ್ರಿಕೆಟ್ ಸಂಘದ ಆಂತರಿಕ ಮೂಲಗಳು ಅರ್ಜುನ್ ಅವರು ತಂಡದಲ್ಲೇ ಮುಂದುವರಿಯಲಿದ್ದಾರೆ ಎಂಬುದನ್ನು ಖಚಿತಪಡಿಸಿವೆ. 2022-23ರ ದೇಶೀಯ ಸೀಸನ್‌ನಲ್ಲಿ ಮುಂಬೈ ತೊರೆದು ಗೋವಾ ತಂಡಕ್ಕೆ ಸೇರ್ಪಡೆಗೊಂಡಿದ್ದ ಅರ್ಜುನ್ ತೆಂಡೂಲ್ಕರ್, ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ (LSG) ತಂಡದ ಪ್ರಮುಖ ಭಾಗವಾಗಿಯೂ ಗುರುತಿಸಿಕೊಂಡಿದ್ದಾರೆ.
ಗೋವಾ ತಂಡದ ಪರವಾಗಿ ದೇಶೀಯ ಕ್ರಿಕೆಟ್‌ನಲ್ಲಿ ನಿಯಮಿತವಾಗಿ ಆಡುತ್ತ ಬಂದಿರುವ ಅರ್ಜುನ್, ಇಲ್ಲಿಯವರೆಗೆ ತಂಡಕ್ಕಾಗಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳನ್ನು ಪಡೆದಿದ್ದಾರೆ. ಬೌಲಿಂಗ್ ಜತೆಗೆ ತಮ್ಮ ಬ್ಯಾಟಿಂಗ್ ಶೈಲಿಯನ್ನೂ ಸುಧಾರಿಸಿಕೊಂಡಿರುವ ಅರ್ಜುನ್, ರಣಜಿ ಟ್ರೋಫಿಯಲ್ಲಿ ರಾಜಸ್ಥಾನ ವಿರುದ್ಧ ಭರ್ಜರಿ ಶತಕ ಸಿಡಿಸುವುದರ ಮೂಲಕ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ಐಪಿಎಲ್ 2026 ರಲ್ಲಿ ಲಖನೌ ಸೂಪರ್ ಜೈಂಟ್ಸ್ (LSG) ತಂಡದ ಭಾಗವಾಗಿದ್ದ ಅರ್ಜುನ್, ಸುದೀರ್ಘ ಬೆಂಚ್ ಕಾಯುವಿಕೆಯ ಬಳಿಕ ಲೀಗ್‌ನ ಕೊನೆಯ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಅವಕಾಶ ಪಡೆದರು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ಅವರು ಮೊದಲ ಓವರ್‌ನಲ್ಲೇ ಬಿಗಿಯಾ ಬೌಲಿಂಗ್ ದಾಳಿ ಪ್ರದರ್ಶಿಸಿದರು. ನಾಯಕ ರಿಷಬ್ ಪಂತ್ ಅವರ ನಾಯಕತ್ವದಲ್ಲಿ ಬೌಲಿಂಗ್ ಮಾಡಿದ ಅರ್ಜುನ್, 15ನೇ ಓವರ್‌ನಲ್ಲಿ ನಿಖರವಾದ ಯಾರ್ಕರ್ ಮೂಲಕ ಪ್ರಭ್‌ಸಿಮ್ರಾನ್ ಸಿಂಗ್ ಅವರನ್ನು ಎಲ್ಬಿಡಬ್ಲ್ಯೂ ಮಾಡಿದರು. ಪವರ್‌ಪ್ಲೇ ನಂತರ ದಾಳಿಗಿಳಿದ ಅರ್ಜುನ್ ಒಟ್ಟು 4 ಓವರ್‌ಗಳನ್ನು ಮಾಡಿ 36 ರನ್ ನೀಡಿ 1 ವಿಕೆಟ್ ಪಡೆದರು.
ಮಗನ ಚೊಚ್ಚಲ ಅವಕಾಶದ ಬಗ್ಗೆ ಭಾವುಕರಾದ ಸಚಿನ್ ತೆಂಡೂಲ್ಕರ್, ಅರ್ಜುನ್ ಅವರ ತಾಳ್ಮೆ, ಪರಿಶ್ರಮ ಮತ್ತು ಸಕಾರಾತ್ಮಕ ಮನೋಭಾವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕಷ್ಟದ ಸಂದರ್ಭದಲ್ಲೂ ಧೃತಿಗೆಡದೆ ಅಭ್ಯಾಸದಲ್ಲಿ ನಿರತರಾಗಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಕ್ರಿಕೆಟ್ ಕೌಶಲದಷ್ಟೇ ತಾಳ್ಮೆಯನ್ನು ಪರೀಕ್ಷಿಸುತ್ತದೆ ಎಂದು ಹೇಳಿದ ಸಚಿನ್, ಮಗನಿಗೆ ನೆಲದ ಮೇಲೆ ಕಾಲಿಟ್ಟು ಆಟದ ಮೇಲಿನ ಪ್ರೀತಿಯನ್ನು ಮುಂದುವರಿಸುವಂತೆ ಭಾವನಾತ್ಮಕ ಸಂದೇಶದ ಮೂಲಕ ಕಿವಿಮಾತು ಹೇಳಿದರು.
ದಂತಕಥೆ ಸಚಿನ್ ಅವರ ಪುತ್ರರಾಗಿರುವುದರಿಂದ ಸಹಜವಾಗಿಯೇ ಸದಾ ಸುದ್ದಿಯಲ್ಲಿರುವ ಅರ್ಜುನ್, ಲಖನೌ ತಂಡದಲ್ಲೂ ಮೊದಲೇ ಅವಕಾಶ ಪಡೆಯಬೇಕೆಂದು ಬಯಸಿದ್ದರು. ಆದರೆ, ಸಾಧ್ಯವಾಗಲಿಲ್ಲ. ಅಂತಿಮ ಹಂತದಲ್ಲಿ ತಮಗೆ ದೊರೆತ ಅವಕಾಶವನ್ನು ಅರ್ಜುನ್ ಬಳಸಿಕೊಂಡರು. ಮುಂದಿನ ಸೀಸನ್ನಲ್ಲಾದರೂ ಅರ್ಜುನ್ಗೆ ಪೂರ್ಣ ಅವಕಾಶ ಸಿಗುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).