ಯುರೋಪ್ ಕ್ರಿಕೆಟ್‌ಗೆ ಅಜಿಂಕ್ಯ ರಹಾನೆ ಎಂಟ್ರಿ!
- ಯುರೋಪ್ ಕ್ರಿಕೆಟ್‌ಗೆ ಅಜಿಂಕ್ಯ ರಹಾನೆ ಎಂಟ್ರಿ!
- ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ತಂಡದ ಸ್ಟಾರ್ ಪ್ಲೇಯರ್ ಆಗಿ ಆಯ್ಕೆ
- ಅಜಿಂಕ್ಯ ರಹಾನೆ ಆಯ್ಕೆಗೆ ಸ್ಟೀವ್ ವಾ ಹಾಗೂ ಅಭಿಷೇಕ್ ಬಚ್ಚನ್ ಮೆಚ್ಚುಗೆ
ನವದೆಹಲಿ: ಯುರೋಪ್ ಖಂಡದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಹೊಸ ವೇಗ ಸಿಕ್ಕಿದ್ದು, ಮುಂಬರುವ ಚೊಚ್ಚಲ ಆವೃತ್ತಿಯ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನ (ETPL) ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ಫ್ರಾಂಚೈಸಿಗೆ ಭಾರತದ ಅನುಭವಿ ಬ್ಯಾಟರ್ ಹಾಗೂ ಮಾಜಿ ನಾಯಕ ಅಜಿಂಕ್ಯ ರಹಾನೆ (Ajinkya Rahane) ಪ್ರಮುಖ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 190ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ರಹಾನೆ ಸೇರ್ಪಡೆಯು, ಯುರೋಪ್‌ನಲ್ಲಿ ಕ್ರೀಡೆಯ ಬೆಳವಣಿಗೆಗೆ ದೊಡ್ಡ ಮಟ್ಟದ ಬಲ ತುಂಬಲಿದೆ.
ಸ್ಟೀವ್ ವಾ ಮೆಚ್ಚುಗೆ!
ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ತಂಡದ ಸಹ-ಸಂಸ್ಥಾಪಕ ಹಾಗೂ ಮುಖ್ಯ ಕ್ರಿಕೆಟ್ ಅಧಿಕಾರಿ, ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಸ್ಟೀವ್ ವಾ ರಹಾನೆ ಅವರ ಆಗಮನವನ್ನು ಸ್ವಾಗತಿಸಿದ್ದಾರೆ.
ಅಜಿಂಕ್ಯ ರಹಾನೆ ಅವರು ಕೌಶಲ್ಯ, ವಿನಯತೆ ಮತ್ತು ನಾಯಕತ್ವ ಗುಣಕ್ಕೆ ಹೆಸರಾದವರು. ಒತ್ತಡದ ಸಮಯದಲ್ಲಿ ಅವರು ತೋರಿಸುವ ಶಾಂತಚಿತ್ತತೆ ಹಾಗೂ ನಾಯಕತ್ವದ ಗುಣಗಳು ತಂಡಕ್ಕೆ ಗೆಲುವನ್ನು ತರಲಿವೆ. ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ತಂಡವನ್ನು ಯುರೋಪ್‌ನ ಅತ್ಯುತ್ತಮ ಕ್ಲಬ್ ಆಗಿ ಬೆಳೆಸಲು ರಹಾನೆ ಅನುಭವ ನಮಗೆ ಅಗತ್ಯವಿದೆ, ಎಂದು ಸ್ಟೀವ್ ವಾ ಹೇಳಿದ್ದಾರೆ.
ರಹಾನೆ ಹೇಳಿದ್ದೇನು?
ತಂಡ ಸೇರಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ರಹಾನೆ, ಕ್ರಿಕೆಟ್ ನನಗೆ ಬಹಳಷ್ಟು ಕೊಟ್ಟಿದೆ. ಯೂರೋಪ್‌ನಲ್ಲಿ ಕ್ರಿಕೆಟ್‌ಗೆ ಅತ್ಯುತ್ತಮ ಭವಿಷ್ಯವಿದೆ. ಮೈದಾನದಲ್ಲಷ್ಟೇ ಅಲ್ಲದೆ ಮೈದಾನದ ಹೊರಗೂ ದೊಡ್ಡ ಮಟ್ಟದ ಸಕಾರಾತ್ಮಕ ಬದಲಾವಣೆ ತರುವ ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ಸಂಸ್ಥೆಯ ಗುರಿ ನನಗೆ ಇಷ್ಟವಾಯಿತು. ಮುಂದಿನ ಪೀಳಿಗೆಗೆ ಪ್ರೇರಣೆಯಾಗಲು ಮತ್ತು ಯುರೋಪ್‌ನಲ್ಲಿ ಕ್ರಿಕೆಟ್ ಬೆಳೆಸಲು ಶ್ರಮಿಸುತ್ತೇನೆ, ಎಂದಿದ್ದಾರೆ.
ಅಭಿಷೇಕ್ ಬಚ್ಚನ್ ಹರ್ಷ!
ETPL ನ ಸಹ-ಮಾಲೀಕರಾದ ಅಭಿಷೇಕ್ ಬಚ್ಚನ್ ಮಾತನಾಡಿ, ರಹಾನೆ ಅವರಂತಹ ಉನ್ನತ ಮಟ್ಟದ ಆಟಗಾರರು ಲೀಗ್‌ಗೆ ಸೇರ್ಪಡೆಯಾಗುವುದರಿಂದ ಟೂರ್ನಿಯ ಗುಣಮಟ್ಟ ಹೆಚ್ಚಾಗುವುದಲ್ಲದೆ, ಯುರೋಪ್‌ನ ಉದಯೋನ್ಮುಖ ಆಟಗಾರರಿಗೆ ಉತ್ತಮ ಮಾರ್ಗದರ್ಶನ ಸಿಗಲಿದೆ, ಎಂದು ಹರ್ಷ ವ್ಯಕ್ತಪಡಿಸಿದ್ದಾರೆ, (ಏಜನ್ಸೀಸ್).