ನಿಮ್ಮ ಪೌರುಷ ಉಗಾಂಡ ವಿರುದ್ಧ ಮಾತ್ರ... ಭಾರತ ವಿಶ್ವಕಪ್ ಗೆದ್ದ ಬೆನ್ನಲ್ಲೇ ಪಾಕ್ ಮಾಜಿ ಕ್ರಿಕೆಟಿಗನ ಹೇಳಿಕೆ ವೈರಲ್! Ahmed Shehzad
- ಟೀಮ್ ಇಂಡಿಯಾದ ಬಿರುಗಾಳಿ ಬ್ಯಾಟಿಂಗ್ಗೆ ಕಂಗಾಲಾದ ನ್ಯೂಜಿಲೆಂಡ್ ತಂಡ
- ಭಾನುವಾರ (ಮಾರ್ಚ್ 08) ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆದ್ದು ಭಾರತ
- ಐತಿಹಾಸಿಕ ಜಯದೊಂದಿಗೆ ಮೂರನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದ ಟೀಮ್ ಇಂಡಿಯಾ
- ಟೀಮ್ ಇಂಡಿಯಾದ ಈ ಅದ್ಭುತ ಗೆಲುವು ಪಕ್ಕದ ಪಾಕಿಸ್ತಾನಕ್ಕೆ ಬೆಂಕಿ ಇಟ್ಟಂತಾಗಿದೆ
Ahmed Shehzad : ಟೀಮ್ ಇಂಡಿಯಾದ ಬಿರುಗಾಳಿ ಬ್ಯಾಟಿಂಗ್ಗೆ ಕಂಗಾಲಾದ ನ್ಯೂಜಿಲೆಂಡ್ ತಂಡ ಭಾನುವಾರ (ಮಾರ್ಚ್ 08) ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿತು. ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತನ್ನ ಪರಾಕ್ರಮ ಮೆರೆದ ಭಾರತ, ಐತಿಹಾಸಿಕ ಜಯದೊಂದಿಗೆ ಮೂರನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಿತು. ಅಚ್ಚರಿಯ ಸಂಗತಿ ಏನೆಂದರೆ, ಆತಿಥೇಯ ರಾಷ್ಟ್ರ ಟಿ20 ವಿಶ್ವಕಪ್ ಗೆದ್ದಿದ್ದು ಇದೇ ಮೊದಲು. ಟೀಮ್ ಇಂಡಿಯಾದ ಈ ಗೆಲುವು ಪಕ್ಕದ ಪಾಕಿಸ್ತಾನಕ್ಕೆ ಬೆಂಕಿ ಇಟ್ಟಂತಾಗಿದೆ. ಅಲ್ಲಿನ ಆಟಗಾರರು ತಮ್ಮ ತಂಡವನ್ನೇ ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಟೀಮ್ ಇಂಡಿಯಾವನ್ನು ಹೊಗಳಿ ತಮ್ಮದೇ ಪಾಕ್ ತಂಡವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಪಾಕಿಸ್ತಾನ ತಂಡವು ಸಾಕಷ್ಟು ಪ್ರತಿಭಾವಂತ ಕ್ರಿಕೆಟಿಗರನ್ನು ಹೊಂದಿದೆ. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯೇ ಇಲ್ಲ. ಆದರೆ, ನಮ್ಮ ವ್ಯವಸ್ಥೆಯಲ್ಲಿ ನಿಜಕ್ಕೂ ಸಮಸ್ಯೆಗಳಿವೆ. ಹಾಗಾದರೆ, ಇಂಡಿಯಾದಲ್ಲಿ ಏನಿದೆ? ಅಲ್ಲಿ ಪ್ರತಿಭೆ ಮತ್ತು ವ್ಯವಸ್ಥೆ ಎರಡು ಕೂಡ ಚೆನ್ನಾಗಿವೆ. ನೀವು ಅದನ್ನು ಸ್ಪಷ್ಟವಾಗಿ ಕಾಣಬಹುದು. ಭಾರತದಲ್ಲಿ ಉತ್ತಮ ಆಟಗಾರರನ್ನು ಹುಟ್ಟುಹಾಕುತ್ತಾರೆ. ಈ ಆಟಗಾರರು ಯಾರು? ಸಂಜು ಸ್ಯಾಮ್ಸನ್ ಅವರಿಗೆ ಸಾಕಷ್ಟು ಅವಕಾಶಗಳೇ ಸಿಗಲಿಲ್ಲ. ಆದರೆ, ಇಂದು ವಿಶ್ವಕಪ್ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅದೇ ರೀತಿ ಇಶಾನ್ ಕಿಶನ್ ಕೂಡ ಅಪರೂಪಕ್ಕೆ ಟೀಮ್ ಇಂಡಿಯಾದಲ್ಲಿ ಆಡಿದರು. ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನ ನೀಡಿದ ನಂತರ ತಂಡವನ್ನು ಸೇರಿಕೊಂಡರು ಎಂದು ಪಾಕಿಸ್ತಾನದಲ್ಲಿ ನಡೆದ ಹಾರ್ನಾ ಮನಾ ಹೈ ಕಾರ್ಯಕ್ರಮದಲ್ಲಿ ಶೆಹಜಾದ್ ಹೇಳಿದರು.
ಸಾಲು ಸಾಲು ವೈಫಲ್ಯಗಳಿಂದ ಅಭಿಷೇಕ್ ಶರ್ಮಾ ಅವರು ತುಂಬಾ ಒತ್ತಡದಲ್ಲಿದ್ದರು ಆದರೆ, ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 52 ರನ್ ಬಾರಿಸುವ ಮೂಲಕ ಮತ್ತೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಮಾಡಿದರು. ಟೀಮ್ ಇಂಡಿಯಾ ತುಂಬಾ ಬಲಿಷ್ಠವಾಗಿದೆ. ಆ ತಂಡದ ಟೈಲೆಂಡರ್‌ಗಳು (ಕೊನೆಯಲ್ಲಿ ಬ್ಯಾಟಿಂಗ್ ಮಾಡುವ ಬ್ಯಾಟರ್ಗಳು) ಸಹ 250 ರನ್‌ಗಳನ್ನು ಸುಲಭವಾಗಿ ಗಳಿಸುತ್ತಿದ್ದಾರೆ. ಟೀಮ್ ಇಂಡಿಯಾ ಆಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಅದ್ಭುತವಾಗಿದೆ. ಆ ತಂಡದ ಕೆಳ ಕ್ರಮಾಂಕವೂ ಅದ್ಭುತವಾಗಿದೆ ಎಂದರು.
ಭಾರತವನ್ನು ನೋಡಿ ಪಾಕಿಸ್ತಾನಕ್ಕೆ ಬುದ್ಧಿ ಬರಬೇಕಿದೆ. ಕೀನ್ಯಾ, ಉಗಾಂಡ, ಯುಎಇ ಮತ್ತು ಜಿಂಬಾಬ್ವೆಯಂತಹ ಸಣ್ಣ ತಂಡಗಳನ್ನು ದೇಶಕ್ಕೆ ಆಹ್ವಾನಿಸಿ, ಆ ತಂಡಗಳನ್ನು ಸೋಲಿಸಿ ಬೀಗುವುದಷ್ಟೇ ನಮ್ಮವರಿಗೆ ಗೊತ್ತಿರೋದು. ಆದರೆ, ಟೀಮ್ ಇಂಡಿಯಾ ದೊಡ್ಡ ದೊಡ್ಡ ತಂಡಗಳ ವಿರುದ್ಧ ಆಡುತ್ತಾರೆ. ಅನೇಕ ದೊಡ್ಡ ಸರಣಿಗಳನ್ನು ಆಡುತ್ತಾರೆ ಎಂದು ಶೆಹಜಾದ್ ಅವರು ಟೀಮ್ ಇಂಡಿಯಾವನ್ನು ಕೊಂಡಾಡಿದರು, (ಏಜೆನ್ಸೀಸ್).