ವಿರಾಟ್ ಸ್ಟೈಲ್ ಕಾಪಿ ಮಾಡಿ ಸಂಭ್ರಮಿಸಿದ ಸೆಹ್ವಾಗ್ ಪುತ್ರ ಆರ್ಯವೀರ್!  
ಕ್ರಿಕೆಟ್

ಗಾಯದ ನೋವಿನಲ್ಲೂ ದಿಟ್ಟ ಹೋರಾಟ: ವಿರಾಟ್ ಸ್ಟೈಲ್ ಕಾಪಿ ಮಾಡಿ ಸಂಭ್ರಮಿಸಿದ ಸೆಹ್ವಾಗ್ ಪುತ್ರ ಆರ್ಯವೀರ್! | Aaryavir Sehwag

Aaryavir Sehwag: ಪಾಕಿಸ್ತಾನ ವಿರುದ್ಧದ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತದ 15 ವರ್ಷದ ಯುವ ಆರಂಭಿಕ ಆಟಗಾರ ಆರ್ಯವೀರ್ ಸೆಹ್ವಾಗ್ ಅವರು ತಮ್ಮ ಕೆಚ್ಚೆದೆಯ ಬ್ಯಾಟಿಂಗ್ ಮತ್ತು ವಿಶಿಷ್ಟ ಸಂಭ್ರಮಾಚರಣೆಯ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿಯನ್ನು ನೆನಪಿಸಿದ್ದಾರೆ. ಪಾಕಿಸ್ತಾನ ನೀಡಿದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ವೇಳೆ ಕೈಗೆ ಗಾಯವಾದರೂ ಎದೆಗುಂದದೆ ಆಡಿದ ಆರ್ಯವೀರ್, ಆಕರ್ಷಕ ಅರ್ಧಶತಕ ಬಾರಿಸಿ ಗಮನ ಸೆಳೆದರು.

50 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದ ತಕ್ಷಣ ಆರ್ಯವೀರ್ ಸೆಹ್ವಾಗ್, ಬ್ಯಾಟ್ ತೋರಿಸುತ್ತಾ ನನ್ನ ಬ್ಯಾಟ್ ಮಾತನಾಡಲಿ (Let my bat do the talking) ಎನ್ನುವ ರೀತಿಯಲ್ಲಿ ಸನ್ನೆ ಮಾಡುವ ಮೂಲಕ ಸಂಭ್ರಮಿಸಿದರು. 2018ರ ಡಿಸೆಂಬರ್ 16ರಂದು ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ 25ನೇ ಟೆಸ್ಟ್ ಶತಕ ಬಾರಿಸಿದಾಗ ವಿರಾಟ್ ಕೊಹ್ಲಿ ಇದೇ ರೀತಿ ಸಂಭ್ರಮಿಸಿದ್ದರು. ನೋವಿನ ನಡುವೆಯೂ ದಿಟ್ಟ ಆಟವಾಡಿದ ಆರ್ಯವೀರ್, ಕೊಹ್ಲಿಯ ಆ ಐಕಾನಿಕ್ ಕ್ಷಣವನ್ನು ಮೈದಾನದಲ್ಲಿ ಮರುಸೃಷ್ಟಿಸಿ ತಮ್ಮ ಇನ್ನಿಂಗ್ಸ್‌ಗೆ ವಿಶೇಷ ಮೆರುಗು ನೀಡಿದರು. ಪ್ರಸಕ್ತ ಟೂರ್ನಿಯಲ್ಲಿ ಇದು ಆರ್ಯವೀರ್ ಅವರ ನಾಲ್ಕನೇ 50ಕ್ಕೂ ಅಧಿಕ ರನ್‌ಗಳ ಇನ್ನಿಂಗ್ಸ್ ಆಗಿದ್ದು, ಇದಕ್ಕೂ ಮುನ್ನ ಅವರು ಔಟಾಗದೆ 70, 160 ಮತ್ತು 51 ರನ್ ಗಳಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು.

ಪಂದ್ಯದ ಆರಂಭದಲ್ಲೇ ಪಾಕಿಸ್ತಾನದ ವೇಗದ ಬೌಲರ್ ಅಲಿ ರಜಾ ಎಸೆದ ಇನ್‌ಸ್ವಿಂಗರ್ ಎಸೆತವೊಂದು ಆರ್ಯವೀರ್ ಮುಂಗೈಗೆ ಬಲವಾಗಿ ಬಡಿಯಿತು. ತೀವ್ರ ನೋವಿನಿಂದ ಒದ್ದಾಡಿದ ಅವರಿಗೆ ತಕ್ಷಣವೇ ಮೈದಾನಕ್ಕೆ ಬಂದ ಫಿಸಿಯೋ ಚಿಕಿತ್ಸೆ ನೀಡಿ ಬ್ಯಾಂಡೇಜ್ ಸುತ್ತಿದರು. ಆದರೆ, ಆಟದಿಂದ ಹಿಂದೆ ಸರಿಯಲು ನಿರಾಕರಿಸಿದ ಆರ್ಯವೀರ್ ಬ್ಯಾಟಿಂಗ್ ಮುಂದುವರಿಸಿದರು. ಆಟ ಪುನರಾರಂಭವಾದ ತಕ್ಷಣವೇ ಎದುರಿಸಿದ ಮೊದಲ ಎಸೆತವನ್ನೇ ಆಕರ್ಷಕ ಕಟ್ ಶಾಟ್ ಮೂಲಕ ಬೌಂಡರಿಗಟ್ಟಿ ತಮ್ಮ ಆತ್ಮವಿಶ್ವಾಸವನ್ನು ಸಾಬೀತುಪಡಿಸಿದರು.

ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಆರಂಭಿಕ ಜೋಡಿ

ಕಠಿಣ ಗುರಿ ಬೆನ್ನಟ್ಟುವ ಒತ್ತಡದಲ್ಲಿದ್ದ ಭಾರತಕ್ಕೆ ನಾಯಕ ಲಕ್ಷ್ಯ ರಾಯ್‌ಚಂದಾನಿ ಜೊತೆಗೂಡಿ ಆರ್ಯವೀರ್ ಭರ್ಜರಿ ಆರಂಭ ಒದಗಿಸಿದರು. ನಾಯಕ ಲಕ್ಷ್ಯ ಒಂದು ತುದಿಯಲ್ಲಿ ತಾಳ್ಮೆಯ ಆಟವಾಡಿದರೆ, ಆರ್ಯವೀರ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಮೊದಲ ವಿಕೆಟ್‌ಗೆ 97 ರನ್‌ಗಳ ಮಹತ್ವದ ಜೊತೆಯಾಟವಾಡಿದರು. 61 ಎಸೆತಗಳನ್ನು ಎದುರಿಸಿದ ಆರ್ಯವೀರ್, 9 ಆಕರ್ಷಕ ಬೌಂಡರಿಗಳ ನೆರವಿನಿಂದ 58 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

ಭಾರತ 17.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 97 ರನ್ ಗಳಿಸಿದ್ದಾಗ (ರಾಯ್‌ಚಂದಾನಿ 35 ರನ್), ಸ್ಪಿನ್ನರ್ ನಿಕಾಬ್ ಶಫೀಕ್ ಎಸೆತವನ್ನು ಮುನ್ನುಗ್ಗಿ ಬಾರಿಸಲು ಯತ್ನಿಸಿದ ಆರ್ಯವೀರ್ ಟೈಮಿಂಗ್ ತಪ್ಪಿದರು. ಬ್ಯಾಟ್‌ನ ಕೆಳಭಾಗಕ್ಕೆ ತಗುಲಿದ ಚೆಂಡನ್ನು ಲಾಂಗ್-ಆಫ್‌ನಲ್ಲಿದ್ದ ಉಸ್ಮಾನ್ ಖಾನ್ ಕ್ಯಾಚ್ ಹಿಡಿಯುವ ಮೂಲಕ ಆರ್ಯವೀರ್ ಅವರ ಹೋರಾಟದ ಇನ್ನಿಂಗ್ಸ್‌ಗೆ ತೆರೆ ಎಳೆದರು. ಶತಕದತ್ತ ಸಾಗುವ ಅವಕಾಶ ತಪ್ಪಿದರೂ, ಗಾಯದ ನೋವಿನ ನಡುವೆ ಅವರು ನೀಡಿದ ಈ ಕೆಚ್ಚೆದೆಯ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ(ಏಜೆನ್ಸೀಸ್​).