ವೆಲ್ಲಿಂಗ್ಟನ್: ನ್ಯೂಜಿಲೆಂಡ್ನ ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ಇಂದು (ನ.13) ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕನೇ ಏಕದಿನ ಪಂದ್ಯವು ಕೇವಲ ಬ್ಯಾಟ್ ಮತ್ತು ಬಾಲ್ಗಳ ನಡುವಿನ ಪೈಪೋಟಿಗೆ ಮಾತ್ರವಲ್ಲದೆ, ಆಟಗಾರರ ನಡುವಿನ ತೀವ್ರ ಮಾತಿನ ಚಕಮಕಿಗೂ ಸಾಕ್ಷಿಯಾಯಿತು. ಟೀಮ್ ಇಂಡಿಯಾದ 6 ಅಡಿ 5 ಇಂಚು ಎತ್ತರದ ಯುವ ವೇಗದ ಬೌಲರ್ ಗುರ್ನೂರ್ ಬ್ರಾರ್ ಮತ್ತು ನ್ಯೂಜಿಲೆಂಡ್ನ ಸ್ಫೋಟಕ ಆರಂಭಿಕ ಆಟಗಾರ ಟಿಮ್ ಸೀಫರ್ಟ್ ನಡುವೆ ಮೈದಾನದಲ್ಲೇ ವಾಗ್ವಾದ ನಡೆಯಿತು. ಅಲ್ಲದೆ, ಆಕ್ರಮಣಕಾರಿ ವರ್ತನೆ ತೋರಿದ್ದಕ್ಕೆ ಬ್ರಾರ್ಗೆ ಅಂಪೈರ್ ಎಚ್ಚರಿಕೆ ಸಹ ನೀಡಿದರು.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಶುಭಮಾನ್ ಗಿಲ್ ಅವರ ಅನುಪಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ ಅವರು ಹಂಗಾಮಿ ನಾಯಕನಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಪಡೆ ಉತ್ತಮ ಆರಂಭ ಪಡೆಯಿತು. ಟಿಮ್ ಸೀಫರ್ಟ್ ಮತ್ತು ವಿಲ್ ಯಂಗ್ ಜೋಡಿಯು ಭಾರತದ ಬೌಲರ್ಗಳ ಮೇಲೆ ಸವಾರಿ ಮಾಡಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿತು. ಟೀಮ್ ಇಂಡಿಯಾದ ಕ್ಷೇತ್ರರಕ್ಷಣೆಯಲ್ಲಾದ ಕೆಲವು ಲೋಪಗಳ ಲಾಭ ಪಡೆದ ಈ ಜೋಡಿ, ಮೊದಲ 10 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 72 ರನ್ ಕಲೆಹಾಕಿ ಭಾರತ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಪವರ್ಪ್ಲೇ ಅವಧಿಯಲ್ಲಿ ಬೌಲಿಂಗ್ಗೆ ಇಳಿದಿದ್ದ ಗುರ್ನೂರ್ ಬ್ರಾರ್ಗೆ ಒಂದೇ ಓವರ್ನಲ್ಲಿ ಸೀಫರ್ಟ್ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿಗಳ ಸಹಿತ ಬರೋಬ್ಬರಿ 14 ರನ್ ಚಚ್ಚಿದ್ದರು. ಇದರಿಂದಾಗಿ ನಾಯಕ ಅಯ್ಯರ್ ತಕ್ಷಣವೇ ಬ್ರಾರ್ ಅವರನ್ನು ಬೌಲಿಂಗ್ ದಾಳಿಯಿಂದ ಹಿಂದಕ್ಕೆ ಕರೆಸಿಕೊಂಡಿದ್ದರು.
ಪವರ್ಪ್ಲೇ ಮುಗಿದ ನಂತರ ಮತ್ತೆ ಬೌಲಿಂಗ್ಗೆ ಮರಳಿದ 26 ವರ್ಷದ ಪಂಜಾಬ್ ಮೂಲದ ವೇಗಿ ಗುರ್ನೂರ್ ಬ್ರಾರ್, ಸೀಫರ್ಟ್ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ಅಷ್ಟರಲ್ಲಾಗಲೇ ಕೇವಲ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಅಪಾಯಕಾರಿಯಾಗಿದ್ದ ಸೀಫರ್ಟ್ ಅವರಿಗೆ ಬ್ರಾರ್ ಒಂದು ಬೌನ್ಸರ್ ಎಸೆದರು. ಆ ಶಾರ್ಟ್ ಬಾಲ್ ಅನ್ನು ಪುಲ್ ಮಾಡಲು ಯತ್ನಿಸಿದ ಸೀಫರ್ಟ್ ಚೆಂಡನ್ನು ಸರಿಯಾಗಿ ಅಂದಾಜಿಸುವಲ್ಲಿ ವಿಫಲರಾಗಿ ಟಾಪ್ ಎಡ್ಜ್ ಮಾಡಿದರು. ಗಾಳಿಯಲ್ಲಿ ಚಿಮ್ಮಿದ ಚೆಂಡನ್ನು ವಿಕೆಟ್ ಕೀಪರ್ ಇಶಾನ್ ಕಿಶನ್ ಅತ್ಯದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ಭಾರತಕ್ಕೆ ಬಹುನಿರೀಕ್ಷಿತ ಮೊದಲ ಬ್ರೇಕ್ಥ್ರೂ ತಂದುಕೊಟ್ಟರು.
ಆದರೆ, ಸೀಫರ್ಟ್ ವಿಕೆಟ್ ಪಡೆದ ಸಂಭ್ರಮದಲ್ಲಿ ಗುರ್ನೂರ್ ಬ್ರಾರ್ ತಮ್ಮ ಭಾವನೆಗಳನ್ನು ನಿಯಂತ್ರಿಸಲಾಗದೆ ಮಿತಿಮೀರಿ ವರ್ತಿಸಿದರು. ಪೆವಿಲಿಯನ್ನತ್ತ ಹೆಜ್ಜೆ ಹಾಕುತ್ತಿದ್ದ ಸೀಫರ್ಟ್ ಅವರ ಸಮೀಪಕ್ಕೆ ತೆರಳಿದ ಬ್ರಾರ್, ನೇರವಾಗಿ ಬ್ಯಾಟರ್ನ ಮುಖದ ಮುಂದೆಯೇ ನಿಂತು ಅತ್ಯಂತ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ಮಾಡಿದರು. ಬ್ರಾರ್ ಅವರ ಈ ರೀತಿಯ 'ಸೆಂಡ್-ಆಫ್' ವರ್ತನೆಯಿಂದ ತೀವ್ರ ಅಸಮಾಧಾನಗೊಂಡ ಸೀಫರ್ಟ್, ಬೌಲರ್ಗೆ ತಿರುಗೇಟು ನೀಡಲು ಮುಂದಾದರು. ಮೈದಾನದಲ್ಲಿ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪುತ್ತಿದ್ದಂತೆ ತಕ್ಷಣವೇ ಧಾವಿಸಿ ಬಂದ ವಿರಾಟ್ ಕೊಹ್ಲಿ, ಗುರ್ನೂರ್ ಬ್ರಾರ್ ಅವರನ್ನು ದೂರ ಎಳೆದುಕೊಂಡು ಹೋಗುವ ಮೂಲಕ ಸಂಭವನೀಯ ದೊಡ್ಡ ಜಗಳವನ್ನು ತಪ್ಪಿಸಿದರು. ಸಾಮಾನ್ಯವಾಗಿ ಮೈದಾನದಲ್ಲಿ ತಮ್ಮದೇ ಆದ ಆಕ್ರಮಣಕಾರಿ ವರ್ತನೆಗೆ ಹೆಸರಾಗಿರುವ ಕೊಹ್ಲಿ, ಇಂದು ಶಾಂತಿದೂತನಂತೆ ವರ್ತಿಸಿದ್ದು ಕಾಮೆಂಟೇಟರ್ಗಳಿಗೂ ಅಚ್ಚರಿ ಮೂಡಿಸಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಹ್ಲಿ ನಡೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮೈದಾನದಲ್ಲಿದ್ದ ಅಂಪೈರ್ ಕ್ರಿಸ್ ಬ್ರೌನ್ ಕೂಡ ಮಧ್ಯಪ್ರವೇಶಿಸಿ, ಗುರ್ನೂರ್ ಬ್ರಾರ್ ಅವರನ್ನು ಕರೆದು ಮಾತನಾಡಿದರು. ಸ್ಪರ್ಧಾತ್ಮಕ ಮನೋಭಾವ ಮತ್ತು ಕ್ರೀಡಾಸ್ಫೂರ್ತಿಯ ಗೆರೆಯನ್ನು ದಾಟದಂತೆ ಬ್ರಾರ್ ಅವರಿಗೆ ಅಂಪೈರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವೇಗದ ಬೌಲರ್ಗಳ ಆಕ್ರಮಣಕಾರಿ ಶೈಲಿಗೆ ಅವಕಾಶವಿದ್ದರೂ, ಎದುರಾಳಿ ಆಟಗಾರರನ್ನು ಕೆಣಕುವಂತಹ ವರ್ತನೆ ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆಯಾಗಬಹುದು ಎಂಬುದನ್ನು ಅಂಪೈರ್ ಮನವರಿಕೆ ಮಾಡಿಕೊಟ್ಟರು.
ಸೀಫರ್ಟ್ ವಿಕೆಟ್ ಪತನದೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿದ ಭಾರತಕ್ಕೆ, ಕೆಲವೇ ಹೊತ್ತಿನಲ್ಲಿ ಮತ್ತೊಂದು ಯಶಸ್ಸು ಸಿಕ್ಕಿತು. ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ಎಸೆತದಲ್ಲಿ ನ್ಯೂಜಿಲೆಂಡ್ನ ಯುವ ಬ್ಯಾಟರ್ ನಿಕ್ ಕೆಲ್ಲಿ ಕ್ರೀಸ್ ಬಿಟ್ಟು ಮುಂದೆ ಬಂದು ಆಡಲು ಯತ್ನಿಸಿದರು. ಈ ವೇಳೆ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರು ಚುರುಕಿನ ಸ್ಟಂಪ್ ಮಾಡಿ ವಿಕೆಟ್ ಪಡೆದರು. ಕೇವಲ 4 ರನ್ ಗಳಿಸಿದ್ದ ಕೆಲ್ಲಿ ಔಟಾಗುವುದರೊಂದಿಗೆ, ಉತ್ತಮ ಆರಂಭ ಪಡೆದಿದ್ದ ನ್ಯೂಜಿಲೆಂಡ್ ತಂಡಕ್ಕೆ ಭಾರತೀಯ ಬೌಲರ್ಗಳು ಸತತ ಎರಡು ಆಘಾತಗಳನ್ನು ನೀಡಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಆದರೂ, ಕಿವೀಸ್ ತಂಡ ಉತ್ತಮವಾಗಿ ಬ್ಯಾಟ್ ಬೀಸುವ ಮೂಲಕ ನಿಗದಿತ 50 ಓವರ್ಗಳಲ್ಲಿ 333 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ. ವಿಲ್ ಯಂಗ್ (125 ರನ್ ) ಶತಕದ ಮೂಲಕ ತಂಡಕ್ಕೆ ಆಸರೆಯಾದರು.
ಸದ್ಯ ಟೀಮ್ ಇಂಡಿಯಾ ಗುರಿ ಬೆನ್ನಟ್ಟಿದ್ದು, ಕೇವಲ 9 ಓವರ್ಗಳಲ್ಲಿ 22 ರನ್ಗೆ 4 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಗುರ್ನೂರ್ ಬ್ರಾರ್ ಭಾರತದ ಪಾಲಿಗೆ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ನ್ಯೂಜಿಲೆಂಡ್ ಪಿಚ್ಗಳಿಂದ ಹೆಚ್ಚುವರಿ ಬೌನ್ಸ್ ಪಡೆಯುವ ತಮ್ಮ ಎತ್ತರದ ಲಾಭವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಬ್ರಾರ್, ಆಕ್ಲೆಂಡ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 44 ರನ್ಗಳಿಗೆ 3 ವಿಕೆಟ್ ಹಾಗೂ ವೆಲ್ಲಿಂಗ್ಟನ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 30 ರನ್ಗಳಿಗೆ 4 ವಿಕೆಟ್ ಪಡೆದು ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ್ದರು. ಮೊದಲೆರಡು ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತಕ್ಕೆ, ಹ್ಯಾಮಿಲ್ಟನ್ನಲ್ಲಿ ನಡೆದ ಮೂರನೇ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಈ ನಾಲ್ಕನೇ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ಸುವರ್ಣಾವಕಾಶವಿದೆ. ಆದರೆ, ಸದ್ಯದ ಸ್ಥಿತಿ ನೋಡಿದರೆ ಈ ಪಂದ್ಯ ಗೆಲ್ಲುವುದು ಭಾರತಕ್ಕೆ ಭಾರಿ ದೊಡ್ಡ ಸವಾಲಾಗಿದೆ.
ಮತ್ತೊಂದೆಡೆ, ಈ ನಾಲ್ಕನೇ ಏಕದಿನ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆಗಳು ಕಂಡುಬಂದಿವೆ. ಮುಂಬರುವ ಟೆಸ್ಟ್ ಸರಣಿಯ ಸಿದ್ಧತೆಗಾಗಿ ಖಾಯಂ ನಾಯಕ ಶುಭಮನ್ ಗಿಲ್ ಏಕದಿನ ತಂಡದಿಂದ ಹೊರಗುಳಿದಿರುವುದರಿಂದ, ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡಿದ್ದಾರೆ. ಕೆ.ಎಲ್. ರಾಹುಲ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ತಂಡಕ್ಕೆ ಮರಳಿದ್ದರೆ, ರೋಹಿತ್ ಶರ್ಮಾ ಜತೆ ಇನ್ನಿಂಗ್ಸ್ ಆರಂಭಿಸಲು ರುತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ನೀಡಲಾಗಿದೆ. ಅತ್ತ ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ನ್ಯೂಜಿಲೆಂಡ್ ತಂಡ ಕೂಡ ಗ್ಲೆನ್ ಫಿಲಿಪ್ಸ್ ಮತ್ತು ಡ್ಯಾರಿಲ್ ಮಿಚೆಲ್ ಅವರಂತಹ ಪ್ರಮುಖ ಆಟಗಾರರಿಲ್ಲದೆ ಕಣಕ್ಕಿಳಿದಿದ್ದು, ಸರಣಿ ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಗೆಲುವಿನತ್ತ ಮುಖಮಾಡಿದೆ, (ಏಜೆನ್ಸೀಸ್).