2 ಐಪಿಎಲ್ ಟ್ರೋಫಿ ಸಾಕಾಗುವುದಿಲ್ಲವೇ? ರಜತ್ ಪಾಟೀದಾರ್ ಕಡೆಗಣನೆಗೆ ಅಸಲಿ ಕಾರಣ ಬಿಚ್ಚಿಟ್ಟ ಅಜಿತ್ ಅಗರ್ಕರ್! Rajat Patidar
- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡು ಬಾರಿ ಟ್ರೋಫಿ ಗೆದ್ದು ಕೊಟ್ಟ ನಾಯಕ ರಜತ್ ಪಾಟೀದಾರ್
- ಐಪಿಎಲ್ನಲ್ಲಿ ಒಳ್ಳೆಯ ಪ್ರದರ್ಶನ ನೀಡಿದರೂ ಭಾರತದ ಟಿ20 ತಂಡದ ಆಯ್ಕೆಯಲ್ಲಿ ರಜತ್ ಕಡೆಗಣನೆ
- ಬಿಸಿಸಿಐ ಪ್ರಕಟಿಸಿದ ತಂಡದಲ್ಲಿ ರಜತ್ ಹೆಸರಿಲ್ಲದಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
- ರಜತ್ ಆಯ್ಕೆಯಾಗದ ಬಗ್ಗೆ ಬಿಸಿಸಿಐ (BCCI) ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಪಷ್ಟನೆ
Rajat Patidar : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸತತ ಎರಡು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ರಜತ್ ಪಾಟೀದಾರ್ ಅವರನ್ನು ಭಾರತದ ಟಿ20 ತಂಡದ ಆಯ್ಕೆಯಲ್ಲಿ ಮತ್ತೊಮ್ಮೆ ನಿರ್ಲಕ್ಷಿಸಲಾಗಿದೆ. ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ ಏಷ್ಯನ್ ಗೇಮ್ಸ್ ಟೂರ್ನಿಗಾಗಿ ಬಿಸಿಸಿಐ (BCCI) ಆಯ್ಕೆ ಸಮಿತಿಯು ಪ್ರಕಟಿಸಿರುವ ಭಾರತೀಯ ಟಿ20 ತಂಡದಲ್ಲಿ ಪಾಟೀದಾರ್ ಅವರ ಹೆಸರು ಎಲ್ಲಿಯೂ ಕಾಣಿಸದಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.
ಆರ್‌ಸಿಬಿ ತಂಡ 2025 ಮತ್ತು 2026ರಲ್ಲಿ ಸತತವಾಗಿ ಐಪಿಎಲ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವಲ್ಲಿ ರಜತ್ ಪಾಟೀದಾರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಆದಾಗ್ಯೂ, ಭಾರತ ತಂಡದ ಪಟ್ಟಿಯಲ್ಲಿ ಅವರ ಹೆಸರು ಕಾಣಿಸದಿರುವುದು ಆಶ್ಚರ್ಯ ಮೂಡಿಸಿದೆ. ಆಯ್ಕೆ ಸಮಿತಿಯು ತಂಡದಲ್ಲಿ ನಾಯಕತ್ವ ಸೇರಿದಂತೆ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ನೇಮಿಸಿದೆ ಹಾಗೂ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಮಣೆ ಹಾಕಿದೆ. ಆದರೆ, ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟರ್ ಪಾಟೀದಾರ್ ಅವರನ್ನು ಮಾತ್ರ ಮತ್ತೊಮ್ಮೆ ಕಡೆಗಣಿಸಿದೆ.
ರಜತ್ ಪಾಟೀದಾರ್ ಅವರ ನಿರ್ಲಕ್ಷ್ಯದ ಬಗ್ಗೆ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಸಿಸಿಐ (BCCI) ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರಿಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು, ಅರ್ಹರಾಗಿದ್ದರೂ ಎಲ್ಲಾ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲು ಸಾಧ್ಯವಿಲ್ಲ, ಏಕೆಂದರೆ ತಂಡದಲ್ಲಿ ಕೇವಲ 15 ಸದಸ್ಯರಿಗೆ ಮಾತ್ರ ಸ್ಥಾನ ನೀಡಲು ಅವಕಾಶವಿರುತ್ತದೆ ಎಂಬ ಸತ್ಯವನ್ನು ಒಪ್ಪಿಕೊಂಡರು.
ನಾವು ಹಲವು ಆಟಗಾರರ ಕುರಿತು ಸುದೀರ್ಘವಾಗಿ ಚರ್ಚಿಸಿದ್ದೇವೆ. ಪ್ರಸ್ತುತ ಆಯ್ಕೆಯಾಗಿರುವ ಈ 15 ಆಟಗಾರರು ಅರ್ಹರೆಂದು ನಮಗೆ ಅನಿಸಿದೆ. ಭಾರತದಲ್ಲಿ ಸದ್ಯ ಅದ್ಭುತ ಆಟಗಾರರ ದಂಡೇ ಇದೆ. ನೇರವಾಗಿ ತಂಡಕ್ಕೆ ಆಯ್ಕೆಯಾಗಬಲ್ಲ ಸಾಮರ್ಥ್ಯವಿರುವ ಹಲವು ಆಟಗಾರರು ಹೊರಗಿದ್ದಾರೆ, ಆದರೆ ಸದ್ಯ ತಂಡದಲ್ಲಿರುವವರೂ ಸಹ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾವು ಒಂದು ಒಳ್ಳೆಯ ತಂಡವನ್ನು ಆಯ್ಕೆ ಮಾಡಿದ್ದೇವೆ ಎಂಬ ನಂಬಿಕೆ ನಮಗಿದೆ. ಇಂತಹ ಸಂದರ್ಭಗಳಲ್ಲಿ ಕೆಲವೊಂದು ಆಟಗಾರರು ತಂಡದಿಂದ ಹೊರಗುಳಿಯುವುದು ಸಹಜ, ಆದರೆ ಸದ್ಯದ ಆಯ್ಕೆಯಿಂದ ನಾವು ತೃಪ್ತರಾಗಿದ್ದೇವೆ ಎಂದು ಅಗರ್ಕರ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಅಂದಹಾಗೆ, ಐಪಿಎಲ್ 2026ರ ಆವೃತ್ತಿಯಲ್ಲಿ ರಜತ್ ಪಾಟೀದಾರ್ ಅವರು 192.69ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 501 ರನ್ ಚಚ್ಚಿದ್ದಾರೆ. ಈ ಮೂಲಕ ಪಂದ್ಯದ ಸಂದರ್ಭ ಹಾಗೂ ಪರಿಸ್ಥಿತಿಗೆ ತಕ್ಕಂತೆ ತಮ್ಮ ಆಟದ ವೇಗವನ್ನು ಬದಲಾಯಿಸುವ ಅದ್ಭುತ ಸಾಮರ್ಥ್ಯವನ್ನು ಅವರು ಪ್ರದರ್ಶಿಸಿದ್ದಾರೆ. ಅವರ ಈ ರನ್ ಹಂಟಿಂಗ್‌ನಲ್ಲಿ 30 ಬೌಂಡರಿ ಹಾಗೂ 42 ಸಿಕ್ಸರ್‌ಗಳು ಸೇರಿದ್ದು, ಮಧ್ಯಮ ಓವರ್‌ಗಳಲ್ಲಿ ಎದುರಾಳಿ ಬೌಲರ್‌ಗಳ ಪಾಲಿಗೆ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಿ ಅವರು ಮೂಡಿಬಂದಿದ್ದಾರೆ.
ವಿಶೇಷವಾಗಿ ಪಂದ್ಯದ 12 ರಿಂದ 16ನೇ ಓವರ್‌ಗಳ ನಡುವಿನ ಅವಧಿಯಲ್ಲಿ ಪಾಟೀದಾರ್ ಕೇವಲ 108 ಎಸೆತಗಳಲ್ಲಿ 216.67ರ ಸ್ಟ್ರೈಕ್ ರೇಟ್‌ನಲ್ಲಿ 234 ರನ್ ಕೊಳ್ಳೆ ಹೊಡೆದಿದ್ದಾರೆ. ಇನ್ನು ಇನ್ನಿಂಗ್ಸ್‌ನ ಕೊನೆಯ 4 ಓವರ್‌ಗಳಲ್ಲಿ (ಡೆತ್ ಓವರ್ಸ್) ತಮ್ಮ ಬ್ಯಾಟಿಂಗ್ ಗೇರ್ ಅನ್ನು ಮತ್ತಷ್ಟು ಬದಲಾಯಿಸಿದ ಅವರು, ಬರೋಬ್ಬರಿ 278.57ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಮಳೆ ಹರಿಸಿದ್ದಾರೆ. ಇಷ್ಟೊಂದು ಸ್ಫೋಟಕ ಅಂಕಿ-ಅಂಶಗಳನ್ನು ಹೊಂದಿದ್ದರೂ ಸಹ, ಆಯ್ಕೆ ಸಮಿತಿಯು ಪಾಟಿದಾರ್ ಅವರನ್ನು ಬದಿಗೊತ್ತಿ 4 ಮತ್ತು 5ನೇ ಕ್ರಮಾಂಕಗಳಿಗಾಗಿ ತಿಲಕ್ ವರ್ಮಾ ಮತ್ತು ಶಿವಂ ದುಬೆ ಅವರನ್ನೇ ಮುಂದುವರಿಸಲು ನಿರ್ಧರಿಸಿದೆ.
ಭಾರತದ ಟಿ20ಐ ತಂಡ
ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಹರ್ಷಿತ್ ರಾಣಾ ಹಾಗೂ ರವಿ ಬಿಷ್ಣೋಯ್, (ಏಜೆನ್ಸೀಸ್).