ಟೀಂ ಇಂಡಿಯಾಗೆ 15 ವರ್ಷದ ವೈಭವ್ ಸೂರ್ಯವಂಶಿ ಆಯ್ಕೆ; ಪೋಷಕರಿಗೂ ಪ್ರವಾಸದ ಆಫರ್ ನೀಡಿದ ಬಿಸಿಸಿಐ!
ಮುಂಬೈ: ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸವೊಂದು ಬರೆಯಲ್ಪಡುತ್ತಿದೆ. ಕೇವಲ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಭಾರತ ಟಿ20 ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆತನಿಗೆ ಅತ್ಯಂತ ಅಪರೂಪದ ಹಾಗೂ ವಿಶೇಷ ಸವಲತ್ತೊಂದನ್ನು ನೀಡಿದೆ. ವೈಭವ್ ಇನ್ನೂ ಅಪ್ರಾಪ್ತನಾಗಿರುವುದರಿಂದ, ಭಾರತ ತಂಡದ ಶ್ರೀಲಂಕಾ ಮತ್ತು ಬ್ರಿಟನ್ (ಯುಕೆ) ಪ್ರವಾಸಗಳ ವೇಳೆ ಆತನ ಪೋಷಕರು ಕೂಡ ತಂಡದ ಜೊತೆಯಲ್ಲೇ ಪ್ರಯಾಣಿಸುವಂತೆ ಬಿಸಿಸಿಐ ವಿನಂತಿಸಿದೆ.
ಸಾಮಾನ್ಯವಾಗಿ ಯಾವುದೇ ಆಟಗಾರರ ಪೋಷಕರಿಗೆ ಅಂತಾರಾಷ್ಟ್ರೀಯ ಪ್ರವಾಸಗಳಲ್ಲಿ ತಂಡದ ಜೊತೆ ಉಳಿದುಕೊಳ್ಳಲು ಬಿಸಿಸಿಐ ಅನುಮತಿ ನೀಡುವುದಿಲ್ಲ. ಆದರೆ, ಹಿರಿಯ ಆಟಗಾರರ ನಡುವೆ 15 ವರ್ಷದ ಬಾಲಕನಿಗೆ ಕಂಫರ್ಟ್ ಅನಿಸಲಿ ಎಂಬ ಕಾರಣಕ್ಕೆ ಬಿಸಿಸಿಐ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ವಿನಾಯಿತಿ ನೀಡಿದೆ.
ಸಚಿನ್ ತೆಂಡೂಲ್ಕರ್ ದಾಖಲೆಗೆ ಕೌಂಟ್‌ಡೌನ್!
ವೈಭವ್ ಸೂರ್ಯವಂಶಿ ಈ ಪ್ರವಾಸದಲ್ಲಿ ಭಾರತ ತಂಡದ ಪರ ಕಣಕ್ಕಿಳಿದರೆ, ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆಯಲಿದ್ದಾರೆ. ಈ ಹಿಂದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ 16ನೇ ವಯಸ್ಸಿನ 207ನೇ ದಿನದಲ್ಲಿ ಪದಾರ್ಪಣೆ ಮಾಡಿ ಈ ದಾಖಲೆ ಬರೆದಿದ್ದರು. ಈಗ ವೈಭವ್ ಕೇವಲ 15ನೇ ವಯಸ್ಸಿನಲ್ಲೇ ಈ ಮೈಲಿಗಲ್ಲು ತಲುಪಲು ಸಜ್ಜಾಗಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ವೈಭವ್ ಭಾರತ ‘ಎ’ ತಂಡದಿಂದ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ಅವನು ಇನ್ನೂ ಚಿಕ್ಕ ಮಗು. ಎಲ್ಲಾ ವಯಸ್ಕರಿರುವ ಹಿರಿಯರ ತಂಡದೊಂದಿಗೆ ಆತ ಪ್ರಯಾಣ ಬೆಳೆಸುತ್ತಿರುವುದರಿಂದ, ಆತನ ಕುಟುಂಬದವರು ಯಾರಾದರೂ ಜೊತೆಯಲ್ಲಿದ್ದರೆ ಒಳ್ಳೆಯದು ಎಂದು ನಾವು ಭಾವಿಸಿದ್ದೇವೆ. ಆತನ ತಂದೆ ನಾಳೆಯೇ ಶ್ರೀಲಂಕಾಕ್ಕೆ ಹೊರಡಲಿದ್ದಾರೆ. ನಂತರ ಇಂಗ್ಲೆಂಡ್ ಪ್ರವಾಸಕ್ಕೂ ಅವರು ಬರಲು ಇಚ್ಛಿಸಿದರೆ ಬಿಸಿಸಿಐ ಸಂಪೂರ್ಣ ಬೆಂಬಲ ನೀಡಲಿದೆ. ಹಿರಿಯ ಆಟಗಾರರ ಪ್ರಪಂಚಕ್ಕೆ ಹೊಂದಿಕೊಳ್ಳಲು ಆತನಿಗೆ ಸ್ವಲ್ಪ ಸಮಯ ಬೇಕಾಗುತ್ತದೆ, ಅದಕ್ಕೆ ನಾವು ನೆರವಾಗುತ್ತಿದ್ದೇವೆ ಎಂದು ವಿವರಿಸಿದ್ದಾರೆ.
ಆಯ್ಕೆಗಾರರ ಮನಗೆದ್ದ ರನ್ ಮಷಿನ್!
ವೈಭವ್ ಸೂರ್ಯವಂಶಿ ಕೇವಲ ವಯಸ್ಸಿನ ಕಾರಣಕ್ಕೆ ತಂಡಕ್ಕೆ ಬಂದಿಲ್ಲ, ಬದಲಿಗೆ ಐಪಿಎಲ್ ಹಾಗೂ ಅಂಡರ್-19 ಕ್ರಿಕೆಟ್‌ನಲ್ಲಿ ಅವರು ಸೃಷ್ಟಿಸಿರುವ ರನ್ ಸುನಾಮಿ ಅವರನ್ನು ಭಾರತ ಬಾಗಿಲು ತಟ್ಟುವಂತೆ ಮಾಡಿದೆ. ಕೇವಲ 23 ಐಪಿಎಲ್ ಪಂದ್ಯಗಳನ್ನಾಡಿರುವ ವೈಭವ್ 1,000ಕ್ಕೂ ಹೆಚ್ಚು ರನ್ ಚಚ್ಚಿದ್ದಾರೆ. ಕಠಿಣ ಪರಿಸ್ಥಿತಿಗಳಲ್ಲೂ ಆತ ಬ್ಯಾಟ್ ಬೀಸುವ ಶೈಲಿ ಮತ್ತು ಸಿಕ್ಸರ್ ಸಿಡಿಸುವ ಸಾಮರ್ಥ್ಯ ಟಿ20 ಕ್ರಿಕೆಟ್‌ನ ಆರಂಭಿಕ (ಓಪನರ್) ಸ್ಥಾನಕ್ಕೆ ಆತನನ್ನು ನೆಚ್ಚಿನ ಆಟಗಾರನನ್ನಾಗಿ ಮಾಡಿದೆ.
ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ವೈಭವ್ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವೈಭವ್ ತನ್ನ ಅದ್ಭುತ ಪ್ರದರ್ಶನದಿಂದ ತಾನಾಗಿಯೇ ತಂಡಕ್ಕೆ ಆಯ್ಕೆಯಾಗಿದ್ದಾನೆ. ಐಪಿಎಲ್ ಪ್ಲೇಆಫ್ ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಆತ ಒಂಟಿ ಕೈಯಿಂದ ಮುನ್ನಡೆಸಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ, ಇಂತಹ ಹೈ-ಪ್ರೆಶರ್ ಟೂರ್ನಿಯಲ್ಲಿ ಸತತವಾಗಿ ರನ್ ಗಳಿಸುವುದು ಸಾಮಾನ್ಯ ವಿಷಯವಲ್ಲ. ಆತನೊಬ್ಬ ಅಪ್ಪಟ ಗೇಮ್ ಚೇಂಜರ್. ಭಾರತೀಯ ಕ್ರಿಕೆಟ್ ಆತನ ಮೇಲೆ ದೊಡ್ಡ ಭರವಸೆ ಇಟ್ಟುಕೊಂಡಿದೆ ಎಂದು ಅಗರ್ಕರ್ ಹೇಳಿದ್ದಾರೆ,(ಏಜೆನ್ಸೀಸ್).