Cricket Stars: ಮೈದಾನದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಅಪಾರ ಸಂಖ್ಯೆಯ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುವ ಸ್ಟಾರ್ ಆಟಗಾರರು, ತಮ್ಮ ವೈವಾಹಿಕ ಜೀವನದಲ್ಲಿ ಎಡವಿದ ಸಂಗತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಸೆಂಚುರಿ ದಾಖಲಿಸಿ, ವಿಕೆಟ್ಗಳನ್ನು ಕಿತ್ತು ಅಭಿಮಾನಿಗಳೊಂದಿಗೆ ಸಂಭ್ರಮಿಸಿದ ಕ್ರಿಕೆಟಿಗರು, ತೆರೆಹಿಂದೆ ತಮ್ಮ ದಾಂಪತ್ಯ ಜೀವನದಲ್ಲಿ ಪಟ್ಟ ಕಷ್ಟ, ದುಃಖ ಮತ್ತು ಕೋರ್ಟ್-ಕಚೇರಿ ಅಲೆದಾಟಗಳು ಡಿವೋರ್ಸ್ ಮೂಲಕ ಅಂತ್ಯವಾಡಿವೆ. ದಾಂಪತ್ಯದಲ್ಲಿ ಉಂಟಾದ ಒಂದಷ್ಟು ಬಿರುಕುಗಳಿಗೆ ವಿಚ್ಛೇದನ ಮೂಲಕ ತೆರೆ ಎಳೆದ ಹೆಸರಾಂತ ಕ್ರಿಕೆಟಿಗರ ಪಟ್ಟಿ ಇಲ್ಲಿದೆ ಗಮನಿಸಿ.
ಇದನ್ನೂ ಓದಿ: ತುಂಬಿದ ಅಣೆಕಟ್ಟು, ಕೃಷಿಕರಿಗೆ ಬಿಕ್ಕಟ್ಟು :ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ : ಪ್ರಯೋಜನವಿಲ್ಲದ ಇಂದಬೆಟ್ಟು ಸೇತುವೆ
ಟೀಮ್ ಇಂಡಿಯಾದ ಯುವ ಸ್ಪಿನ್ನರ್ ಯಜುವೇಂದ್ರ ಚಹಲ್, ಇತ್ತೀಚೆಗಷ್ಟೇ ಡ್ಯಾನ್ಸ್ ಕೋರಿಯೋಗ್ರಾಫರ್ ಧನಶ್ರಿ ಅವರೊಂದಿಗೆ ತಮ್ಮ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದರು. ಡಿಸೆಂಬರ್ 22, 2020ರಂದು ಧನಶ್ರೀ ವರ್ಮಾ ಜೊತೆಗೆ ಮದುವೆಯಾದ ಚಹಲ್, ಫೆಬ್ರವರಿ 20, 2025ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ದಾಂಪತ್ಯ ಜೀವನದಿಂದ ದೂರ ಸರಿದರು.
2007ರಲ್ಲಿ ವಿವಾಹವಾದ ದಿನೇಶ್ ಕಾರ್ತಿಕ್ ಮತ್ತು ನಿಕಿತಾ ವಂಜಾರ, 2012ರಲ್ಲಿ ವಿಚ್ಛೇದನ ಮೂಲಕ ಸಂಬಂಧ ಮುರಿದುಕೊಂಡರು. ಇದಕ್ಕೆ ಮುಖ್ಯ ಕಾರಣ ನಿಕಿತಾ ಮಾಡಿದ ದ್ರೋಹ. ದಿನೇಶ್ ಕಾರ್ತಿಕ್ ಕ್ರಿಕೆಟ್ ಲೋಕ ಬೆಳೆಯುವ ವೇಳೆ ತಂಡದ ಸಹ ಆಟಗಾರ ಮುರಳಿ ವಿಜಯ್ ಜತೆಗೆ ನಿಕಿತಾ ಅನೈತಿಕ ಸಂಬಂಧ ಹೊಂದಿದ್ದಳು. ಇದು ಬಯಲಾಗ್ತಿದ್ದಂತೆ ನಿಕಿತಾಳಿಂದ ದಿನೇಶ್ ಕಾರ್ತಿಕ್ ದೂರವಾದರು. 2015ರಲ್ಲಿ ಸ್ಕ್ವಾಷ್ ತಾರೆ ದೀಪಿಕಾ ಪಲ್ಲಿಕಲ್ ಅವರೊಂದಿಗೆ ವಿವಾಹವಾದ ಡಿಕೆ, ಈಗ ಎರಡು ಮುದ್ದಾದ ಮಕ್ಕಳೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.
ಮೆಲ್ಬೋರ್ನ್ ಮೂಲದ ಕಿಕ್ ಬಾಕ್ಸರ್ ಆಯೇಷಾ ಮುಖರ್ಜಿ ಅವರೊಂದಿಗೆ ಅಕ್ಟೋಬರ್ 30, 2012ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿಖರ್ ಧವನ್, ದೆಹಲಿ ನ್ಯಾಯಾಲಯದ ಆದೇಶದ ಬಳಿಕ ಅಕ್ಟೋಬರ್ 2023ರಲ್ಲಿ ಪತ್ನಿಯಿಂದ ವಿಚ್ಛೇದನ ಪಡೆದರು. ಈ ತೀರ್ಪಿನಲ್ಲಿ ಧವನ್ ಅವರ ಮಗ ಜೊರಾವರ್ ತಾಯಿಯ ಪಾಲನೆಯಲ್ಲಿ ಬೆಳೆಯಲಿದ್ದಾನೆ ಎಂದು ಹೇಳಲಾಯಿತು. ಪ್ರಸ್ತುತ ಧವನ್ ಪುತ್ರ ಆಸ್ಟ್ರೇಲಿಯಾದಲ್ಲಿ ಆಯೇಷಾ ಅವರೊಂದಿಗೆ ವಾಸಿಸುತ್ತಿದ್ದಾನೆ.
ಮೇ 31, 2020ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾರ್ದಿಕ್ ಪಾಂಡ್ಯ ಮತ್ತು ನಟಾಸಾ ಸ್ಟಾಂಕೋವಿಕ್, ನಾಲ್ಕು ವರ್ಷಗಳ ಕಾಲ ಒಟ್ಟಿಗಿದ್ದು, 2024ರಲ್ಲಿ ದೂರ ಉಳಿಯುವುದಾಗಿ ಪರಸ್ಪರ ಘೋಷಿಸಿದರು. ಪುತ್ರ ಅಗಸ್ತ್ಯನನ್ನು ವಿಚ್ಛೇದನದ ಬಳಿಕ ಸಹ-ಪೋಷಕರಾಗಿ ಹಾರ್ದಿಕ್ ಮತ್ತು ನಟಾಸಾ ಬೆಳೆಸುತ್ತಿದ್ದಾರೆ.
ಕ್ರಿಕೆಟ್ ದಂತಕಥೆ, ಮಾಜಿ ಟೀಮ್ ಇಂಡಿಯಾ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ 10 ವರ್ಷಗಳಿಗೂ ಹೆಚ್ಚು ಕಾಲ ಒಟ್ಟಿಗಿದ್ದು, ಸಂಸಾರ ಸಾಗಿಸಿದ ಬಳಿಕ 1996ರಲ್ಲಿ ಮೊದಲ ಪತ್ನಿಗೆ ವಿಚ್ಛೇದನ ನೀಡಿದರು. ಅದೇ ವರ್ಷ ಸಂಗೀತಾ ಬಿಜ್ಲಾನಿ ಅವರನ್ನು ವಿವಾಹವಾದರು. ನಂತರದಲ್ಲಿ ದಂಪತಿಗಳ ನಡುವೆ ಉಂಟಾದ ಒಂದಷ್ಟು ಭಿನ್ನಾಭಿಪ್ರಾಯಗಳಿಂದ 2010ರಲ್ಲಿ ಎರಡನೇ ದಾಂಪತ್ಯವು ಮುರಿದುಬಿತ್ತು.
ಇದನ್ನೂ ಓದಿ: ನಾವೆಲ್ಲ ಸಾಯಬೇಕಂತೆ! ಬಾಲಕನ ಕೋರಿಕೆ ಹಿಂದಿದೆ ಹೃದಯ ಹಿಂಡುವ ಕಥೆ, ಸಹಾಯಕ್ಕೆ ಡಿಸಿ ಅಸ್ತು | Boy Request
ವಿಶ್ವ ಚಾಂಪಿಯನ್ ತಂಡದಲ್ಲಿದ್ದ ಹಿರಿಯ ಕ್ರಿಕೆಟಿಗ ರವಿಶಾಸ್ತ್ರಿ, 1990ರಲ್ಲಿ ಡಾ. ರಿತು ಸಿಂಗ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು. 22 ವರ್ಷಗಳ ಸುದೀರ್ಘ ಕಾಲ ಜೀವನ ಕಳೆದ ಜೋಡಿ, 2012ರಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದುಕೊಂಡರು.
ತಮ್ಮ ಮೊದಲ ಪತ್ನಿ ನೋಯೆಲ್ಲಾ ಲೂಯಿಸ್ ಅವರಿಗೆ ವಿಚ್ಛೇದನ ಕೊಟ್ಟ ಭಾರತದ ಮಾಜಿ ಹಿರಿಯ ಕ್ರಿಕೆಟಿಗ ವಿನೋದ್ ಕಾಂಬ್ಳಿ, ನಂತರ 1998ರಲ್ಲಿ ಮಾಡೆಲ್ ಆಂಡ್ರಿಯಾ ಹೆವಿಟ್ರನ್ನು ಮದುವೆಯಾದರು. ಎರಡನೇ ದಾಂಪತ್ಯ ಸಂಬಂಧದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿಂದ ಫೆಬ್ರವರಿ 2023ರಲ್ಲಿ ವಿನೋದ್ ವಿಚ್ಛೇದನ ಪಡೆದುಕೊಂಡರು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).