ನವದೆಹಲಿ: ಟೀಮ್ ಇಂಡಿಯಾ ಮೈದಾನಕ್ಕೆ ಇಳಿಯದೆ 2 ತಿಂಗಳುಗಳೇ ಕಳೆದಿವೆ. ಸರಿಸುಮಾರು 60 ದಿನಗಳಿಂದ ಯಾವುದೇ ಪಂದ್ಯವನ್ನು ಆಡದೆ, ಲಾಕ್ಡೌನ್ನಿಂದಾಗಿ ಮನೆಯಲ್ಲೇ ಬಂಧಿಯಾಗಿರುವ ಭಾರತ ತಂಡದ ಆಟಗಾರಿಗೆ ಶೀಘ್ರದಲ್ಲೇ ಮರಳಿ ಕಣಕ್ಕಿಳಿಯಲು ಅವಕಾಶ ದೊರೆಯುವ ನಿರೀಕ್ಷೆ ಹರಡಿದೆ. ಮೇ 18ರ ನಂತರ ಲಾಕ್ಡೌನ್ನ 4ನೇ ಹಂತದಲ್ಲಿ ಸರ್ಕಾರ ಕ್ರೀಡಾ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದರೆ, ದೇಶದ ಅಗ್ರ ಕ್ರಿಕೆಟಿಗರು ಕೌಶಲ ಆಧಾರಿತ ಹೊರಾಂಗಣ ಅಭ್ಯಾಸ ಆರಂಭಿಸಬಹುದು ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದಾರೆ.
ಕ್ರಿಕೆಟ್ ಚಟುವಟಿಕೆ ಪುನರಾರಂಭಕ್ಕೆ ಬಿಸಿಸಿಐ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ ಎಂದಿರುವ ಧುಮಾಲ್, ಕೇಂದ್ರ ಸರ್ಕಾರದಿಂದ ಇದಕ್ಕೆ ಪೂರಕವಾದ ಮಾರ್ಗಸೂಚಿಗಳು ಬರುವ ನಿರೀಕ್ಷೆಯಲ್ಲಿದೆ. ಲಾಕ್ಡೌನ್ ಸಮಯದಲ್ಲಿ ಕ್ರಿಕೆಟಿಗರು ಮನೆಯಲ್ಲೇ ವ್ಯಾಯಾಮ ಮಾಡುವ ಮೂಲಕ ಫಿಟ್ನೆಸ್ ಕಾಯ್ದುಕೊಳ್ಳಲು ಪ್ರಯತ್ನಿಸಿ ದ್ದಾರೆ. ನಾಯಕ ವಿರಾಟ್ ಕೊಹ್ಲಿಯಂಥ ಆಟಗಾರರು ಮನೆಯಲ್ಲೇ ಜಿಮ್ ಕೂಡ ಹೊಂದಿದ್ದಾರೆ. ಆದರೆ ಕಳೆದ 2 ತಿಂಗಳಿನಿಂದ ಯಾವ ಕ್ರಿಕೆಟಿಗರಿಗೂ ನೆಟ್ಸ್ನಲ್ಲಿ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಮೇ 18ರ ನಂತರ ಸರ್ಕಾರ ಕೆಲ ನಿರ್ಬಂಧ ಸಡಿಲ ಮಾಡುವ ನಿರೀಕ್ಷೆ ಇದೆ. ಆದರೆ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಟೀಮ್ ಇಂಡಿಯಾ ಆಟಗಾರರು, ಪ್ರಯಾಣ ನಿರ್ಬಂಧದಿಂದಾಗಿ ಒಂದೆಡೆ ಸೇರಿ ಅಭ್ಯಾಸ ನಡೆಸಲು ಸಾಧ್ಯವಾಗದು. ಹೀಗಾಗಿ ಆಟಗಾರರು ತಮ್ಮ ಮನೆಯ ಪಕ್ಕದ ಮೈದಾನದಲ್ಲೇ ಅಭ್ಯಾಸ ನಡೆಸಬಹುದು ಎಂದು ಧುಮಾಲ್ ತಿಳಿಸಿದ್ದಾರೆ.
ಮನೆ ಪಕ್ಕದ ಮೈದಾನದಲ್ಲಿ ನೆಟ್ಸ್ ಅಭ್ಯಾಸದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ, ಒಬ್ಬ ಬ್ಯಾಟ್ಸ್ಮನ್ ಮೂವರು ನೆಟ್ ಬೌಲರ್ಗಳನ್ನಷ್ಟೇ ಎದುರಿಸಲು ಅನುಮತಿ ಲಭಿಸಲಿದೆ. ಭಾರತ ತಂಡದ ಆಟಗಾರರು ಸದ್ಯ ಟ್ರೇನರ್ ನಿಕ್ ವೆಬ್ ಕೊಟ್ಟಿರುವ ಫಿಟ್ನೆಸ್ ಡ್ರಿಲ್ ಚಾರ್ಟ್ ಅನ್ವಯ ತಾಲೀಮು ನಡೆಸುತ್ತಿದ್ದಾರೆ. ಆಟಗಾರರ ಟ್ರೇನಿಂಗ್ ಮೇಲ್ವಿಚಾರಣೆಗಾಗಿ ಬಿಸಿಸಿಐ ವಿಶೇಷ ಆಪ್ ಒಂದನ್ನೂ ರೂಪಿಸಿದೆ.
ಹೆಚ್ಚಿನ ಪ್ರಮುಖ ಕ್ರಿಕೆಟಿಗರು ಮೆಟ್ರೋ ನಗರಗಳಲ್ಲಿ ಲಾಕ್ ಆಗಿರುವುದರಿಂದ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಆದರೆ ವೇಗಿ ಮೊಹಮದ್ ಶಮಿ ಮಾತ್ರ ಉತ್ತರ ಪ್ರದೇಶದ ತವರು ಹಳ್ಳಿ ಸಾಹಸ್ಪುರದ ಕ್ರಿಕೆಟ್ ಮೈದಾನದಲ್ಲಿ ರನ್ನಿಂಗ್ ಮುಂತಾದ ದೈಹಿಕ ಚಟುವಟಿಕೆಗಳನ್ನು ನಡೆಸುವುದು ಸಾಧ್ಯವಾಗಿದೆ.
ಕರೊನಾ ಭೀತಿ ಸಂಪೂರ್ಣ ನಿವಾರಣೆಯಾಗಿ ಸಹಜಸ್ಥಿತಿಗೆ ಬಂದ ನಂತರವಷ್ಟೇ ಕ್ರಿಕೆಟ್ ಶಿಬಿರ ಗಳನ್ನು ನಡೆಸಲು ಸಾಧ್ಯವಾಗಲಿದೆ. ಆಟಗಾರರ ಆರೋಗ್ಯ ಮತ್ತು ಸುರಕ್ಷತೆಗೆ ಅಗ್ರ ಆದ್ಯತೆ ನೀಡುತ್ತೇವೆ. ಪ್ರಯಾಣ ನಿರ್ಬಂಧ ತೆರವಾಗುವವರೆಗೂ ಯಾವುದೇ ಶಿಬಿರ ಆಯೋಜಿಸುವುದಿಲ್ಲ ಎಂದು ಧುಮಾಲ್ ಹೇಳಿದ್ದಾರೆ. -ಪಿಟಿಐ/ಏಜೆನ್ಸೀಸ್