ನವದೆಹಲಿ: ಟೀಮ್ ಇಂಡಿಯಾ ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಅವರ ಪತ್ನಿ ಅಥಿಯಾ ಶೆಟ್ಟಿ ಇತ್ತೀಚೆಗೆ "ಕ್ರಿಕೆಟ್ ಫಾರ್ ಚಾರಿಟಿ" ಹರಾಜನ್ನು ಆಯೋಜಿಸಿದ್ದರು. ಈ ಹರಾಜಿನ ಉದ್ದೇಶ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡಲು ಕೆಲಸ ಮಾಡುವ ಸಂಸ್ಥೆಗೆ ಧನ ಸಹಾಯ ಮಾಡುವುದು.
ಟೀಮ್ ಇಂಡಿಯಾದ ಹಲವು ಕ್ರಿಕೆಟಿಗರು ತಮ್ಮ ವೈಯಕ್ತಿಕ ವಸ್ತುಗಳನ್ನು ಹರಾಜಿಗೆ ನೀಡಿದ್ದರು. ಇದರಲ್ಲಿ ವಿರಾಟ್ ಕೊಹ್ಲಿ ಧರಿಸಿದ್ದ ಜೆರ್ಸಿ, ಬ್ಯಾಟಿಂಗ್ ವೇಳೆ ಬಳಸುತ್ತಿದ್ದ ಗ್ಲೌಸ್, ರೋಹಿತ್ ಶರ್ಮ ಬ್ಯಾಟ್, ಎಂ.ಎಸ್. ಧೋನಿ ಬ್ಯಾಟ್ ಹಾಗೂ ರಾಹುಲ್ ದ್ರಾವಿಡ್ ಬ್ಯಾಟ್ ಸೇರಿದಂತೆ ಹಲವು ವಸ್ತುಗಳು ಹರಾಜಾದವು. ಈ ಹರಾಜಿನಲ್ಲಿ ಯಾವ ವಸ್ತು ಎಷ್ಟು ಮೊತ್ತಕ್ಕೆ ಮಾರಾಟವಾಯಿತು ಎಂಬುದನ್ನು ನಾವೀಗ ತಿಳಿಯೋಣ.
ಈ ಹರಾಜಿನಲ್ಲಿ ಟೀಮ್ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಜೆರ್ಸಿ ಹೆಚ್ಚಿನ ಬೆಲೆಗೆ ಬಿಕರಿಯಾಯಿತು. ಬರೋಬ್ಬರಿ 40 ಲಕ್ಷ ರೂಪಾಯಿಗೆ ಮಾರಾಟವಾಯಿತು. ಆ ಬಳಿಕ ಕೊಹ್ಲಿ ಬ್ಯಾಟಿಂಗ್ ವೇಳೆ ಬಳಸುತ್ತಿದ್ದ ಗ್ಲೌಸ್ 28 ಲಕ್ಷ ರೂ.ಗೆ ಬಿಕರಿಯಾಯಿತು.
ಉಳಿದಂತೆ ಕ್ರಿಕೆಟ್ ಫಾರ್ ಚಾರಿಟಿ ಹರಾಜಿನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಬ್ಯಾಟ್ 24 ಲಕ್ಷ ರೂ., ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟ್‌ಗೆ 13 ಲಕ್ಷ ರೂ., ಭಾರತದ ಮಾಜಿ ಆಟಗಾರ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ಬ್ಯಾಟ್‌ಗೆ 11 ಲಕ್ಷ ರೂ. ಮತ್ತು ಕೆಎಲ್ ರಾಹುಲ್ ಧರಿಸಿದ್ದ ಜೆರ್ಸಿಗೆ 11 ಲಕ್ಷ ರೂ.ಗೆ ಬಿಕರಿಯಾಯಿತು.
ಕೆ.ಎಲ್. ರಾಹುಲ್ ಮತ್ತು ಅವರ ಪತ್ನಿ ಅಥಿಯಾ ಶೆಟ್ಟಿ ಆರಂಭಿಸಿದ ಈ ಅಭಿಯಾನದಲ್ಲಿ ಟೀಮ್ ಇಂಡಿಯಾ ಆಟಗಾರರಾದ ರಿಷಭ್ ಪಂತ್, ಸಂಜು ಸ್ಯಾಮ್ಸನ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಭಾಗವಹಿಸಿದ್ದಾರೆ. ಇವರಲ್ಲದೆ ಅಂತಾರಾಷ್ಟ್ರೀಯ ಆಟಗಾರರಾದ ನಿಕೋಲಸ್ ಪೂರನ್, ಜೋಶ್ ಬಟ್ಲರ್, ಕ್ವಿಂಟನ್ ಡಿ ಕಾಕ್ ಕೂಡ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಈ ಚಾರಿಟಿ ಹರಾಜಿನಲ್ಲಿ ಒಟ್ಟು 1.93 ಕೋಟಿ ರೂಪಾಯಿ ನಿಧಿ ಸಂಗ್ರಹವಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಕೆಎಲ್ ರಾಹುಲ್ ಇತ್ತೀಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದರ ಬಗ್ಗೆ ಪೋಸ್ಟ್ ಮಾಡಿದ್ದರು. ಹರಾಜು ಯಶಸ್ವಿಯಾಗಿದ್ದು, ಎಲ್ಲ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲಾಗುವುದು ಎಂದರು. ಇಂತಹ ಒಳ್ಳೆಯ ಕೆಲಸ ಮಾಡಿದ ಕೆಎಲ್ ರಾಹುಲ್ ದಂಪತಿಗೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. (ಏಜೆನ್ಸೀಸ್)