ಕ್ರೀಡೆ

ನಿನ್ನದು ಸ್ವಾರ್ಥಿ ಆಟ! ನಾಯಕನಾಗಿ ಪ್ರಯೋಜನವಿಲ್ಲ… ಶುಭಮನ್​ ಗಿಲ್​ಗೆ ತಪ್ಪಲಿಲ್ಲ ಫ್ಯಾನ್ಸ್​ ಛೀಮಾರಿ​

ನವದೆಹಲಿ: ಪ್ರಸ್ತುತ ಜಿಂಬಾಬ್ವೆ ವಿರುದ್ಧ ಐದು ಟಿ20 ಪಂದ್ಯಗಳ ಸರಣಿಯಲ್ಲಿ ತೊಡಗಿರುವ ಟೀಮ್ ಇಂಡಿಯಾ, ನಿನ್ನೆ (ಜು.10) ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 23 ರನ್​ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಒಂದೆಡೆ ಸರಣಿಯನ್ನು ಗೆಲ್ಲುವ ತವಕದಲ್ಲಿರುವ ಭಾರತ ತಂಡದ ಬಗ್ಗೆ ಅಭಿಮಾನಿಗಳು ಸಂತಸ ಹೊರಹಾಕಿದ್ದೇ ಆದರೂ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಶುಭಮನ್ ಗಿಲ್​ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಂಬಾಬ್ವೆ ಸರಣಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಅಭಿಷೇಕ್ ಶರ್ಮ, ಮೊದಲ ಪಂದ್ಯದಲ್ಲಿ ಡಕ್​ ಔಟ್​ ಆಗಿ ಭಾರೀ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದ್ದರು. ಬಳಿಕ ಎರಡನೇ ಮ್ಯಾಚ್​ನಲ್ಲಿ 47 ಎಸೆತಗಳಲ್ಲಿ 100 ರನ್​ ಸಿಡಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದ ಅವರು, ತಮ್ಮ ಅಂತಾರಾಷ್ಟ್ರೀಯ ಕರಿಯರ್​ನಲ್ಲಿ ಹೊಸ ದಾಖಲೆಗೆ ಸಾಕ್ಷಿಯಾದರು. ಇದೇ ರೀತಿ ನಿಮ್ಮ ಫಾರ್ಮ್​ ಮುಂದುವರೆಸಿ ಎಂದಿದ್ದ ಅಭಿಷೇಕ್​ ಅಭಿಮಾನಿಗಳ ಬಳಗಕ್ಕೆ ಗಿಲ್ ತೆಗೆದುಕೊಂಡ ನಿರ್ಧಾರವು ಕಿಂಚಿತ್ತು ಸರಿ ಅನಿಸಲಿಲ್ಲ.

ಅತ್ಯುತ್ತಮ ಪರ್ಫಾಮೆನ್ಸ್ ನೀಡಿದ್ದ ಅಭಿಷೇಕ್ ಶರ್ಮರನ್ನು ಓಪನಿಂಗ್ ಆರ್ಡರ್​​ನಿಂದ ಕೈಬಿಟ್ಟು, ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್​ ಅವರೊಂದಿಗೆ ಆರಂಭಿಕ ಆಟಗಾರರಾಗಿ ಗಿಲ್ ಕ್ರೀಸ್​ಗೆ ಬಂದರು. ಇದರಿಂದ ತೀವ್ರ ಅಸಮಾಧಾನಗೊಂಡ ಕ್ರಿಕೆಟ್ ಅಭಿಮಾನಿಗಳು, ದಿಢೀರ್​ ಬದಲಾವಣೆಗೆ ಕಾರಣವೇನು? ಓಪನಿಂಗ್​ ಬರುತ್ತಿದ್ದ ಅಭಿಷೇಕ್​ರಿಂದ ಏಕೆ ಸ್ಥಾನ ಕಿತ್ತುಕೊಂಡಿದ್ದೀರಿ ಎಂದು ಗಿಲ್​ಗೆ ಸರಣಿ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ  ಕೇಳಿದ್ದಾರೆ.

ಮೂರನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 49 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳಿಂದ 66 ರನ್ ಗಳಿಸಿದ ಗಿಲ್​, ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿ ಹೊರಹೊಮ್ಮಿದರು. ಇದನ್ನು ಲೆಕ್ಕಕ್ಕೆ ಪರಿಗಣಿಸದ ಅಭಿಮಾನಿಗಳು, ನಾಯಕನಾಗಿ ಇಂತಹ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ ಎಂದು ವ್ಯಾಪಕವಾಗಿ ಟೀಕಿಸಿ, ಛೀಮಾರಿ ಹಾಕಿದ್ದಾರೆ.