ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17ನೇ ಆವೃತ್ತಿ ಮುಗಿದಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಿನ್ನೆ (ಮೇ 26) ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್), ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡವನ್ನು ಸೋಲಿಸುವ ಮೂಲಕ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ ಎಲ್ಲ ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. 18.3 ಓವರ್‌ಗಳಲ್ಲಿ ಕೇವಲ 113 ರನ್‌ಗಳಿಗೆ ಕುಸಿಯಿತು. ಬಳಿಕ ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ 10.3 ಓವರ್‌ಗಳಲ್ಲಿ ಗುರಿ ತಲುಪಿತು. ಆರೆಂಜ್ ಆರ್ಮಿ ಪರ 2 ನಿರ್ಣಾಯಕ ವಿಕೆಟ್ ಪಡೆದ ಮಿಚೆಲ್ ಸ್ಟಾರ್ಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಇಡೀ ಐಪಿಎಲ್ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅಬ್ಬರಿಸಿದ ಸುನಿಲ್ ನಾರಾಯಣ್ ಪಂದ್ಯಾವಳಿಯ ಆಟಗಾರ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ, ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕಪ್ ಅನ್ನು ಕಳೆದುಕೊಂಡರೂ ಕ್ರೇಜಿ ದಾಖಲೆಯನ್ನು ಬರೆದಿದ್ದಾರೆ.
ವಿರಾಟ್ ಕೊಹ್ಲಿ ಈ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಈ ಸೀಸನ್ನಲ್ಲಿ ಒಟ್ಟು 15 ಪಂದ್ಯಗಳಲ್ಲಿ 154 ಸ್ಟ್ರೈಕ್ ರೇಟ್‌ನೊಂದಿಗೆ 741 ರನ್ ಗಳಿಸಿದರು. ಇದರಲ್ಲಿ ಒಂದು ಶತಕವೂ ಇದೆ. ಐಪಿಎಲ್ ಇತಿಹಾಸದಲ್ಲೇ ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಪಡೆದ ಏಕೈಕ ಭಾರತೀಯ ಆಟಗಾರನಾಗಿ ವಿರಾಟ್ ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ಪಂದ್ಯಕ್ಕೆ ಕೊಹ್ಲಿ ಹಾಜರಾಗದ ಕಾರಣ ಅವರ ಸ್ಥಾನದಲ್ಲಿ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಆರೆಂಜ್ ಕ್ಯಾಪ್ ಪಡೆದರು. ಪ್ರಶಸ್ತಿ ಪ್ರದಾನದ ವೇಳೆ ಕೊಹ್ಲಿ ಹೆಸರು ಹೇಳಿದಾಗ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಜೋರಾಗಿ ಕೂಗಿದರು. ಕೊಹ್ಲಿ.. ಕೊಹ್ಲಿ ಎಂದು ಘೋಷಣೆ ಕೂಗಿದರು. ಅಯ್ಯರ್ ಬಂದು ಆರೆಂಜ್ ಕ್ಯಾಪ್ ಪಡೆದ ನಂತರವೂ ವಿರಾಟ್ ಘೋಷಣೆ ನಿಲ್ಲಲಿಲ್ಲ. ಇದನ್ನು ನೋಡಿದ ನೆಟ್ಟಿಗರು ಇದು ಕೊಹ್ಲಿ ಕ್ರೇಜ್ಗೆ ಸಾಕ್ಷಿ ಎನ್ನುತ್ತಿದ್ದಾರೆ.
ಅಂದಹಾಗೆ ಈ ಸೀಸನ್ನಲ್ಲೂ ಆರ್‌ಸಿಬಿ ತಂಡ ಕಪ್ ಗೆಲ್ಲುವಲ್ಲಿ ವಿಫಲವಾಯಿತು. ಟೂರ್ನಿಯ ಮೊದಲಾರ್ಧದಲ್ಲಿ ಸತತ ಆರು ಪಂದ್ಯಗಳಲ್ಲಿ ಸೋತು ತೀವ್ರ ನಿರಾಸೆ ಅನುಭವಿಸಿತ್ತು. ಆರ್ಸಿಬಿಯಿಂದ ಪ್ಲೇಆಫ್ ಎಂಟ್ರಿ ಸಾಧ್ಯವೇ ಇಲ್ಲ ಅಂದುಕೊಂಡಿದ್ದರು. ಆದರೆ, ಎಲ್ಲರ ಲೆಕ್ಕಾಚಾರವನ್ನ ಫಾಫ್ ಡುಪ್ಲೆಸಿಸ್ ಪಡೆ ಹುಸಿ ಮಾಡಿತು. ಅಚ್ಚರಿ ಎಂಬಂತೆ ಸತತ 6 ಪಂದ್ಯಗಳನ್ನು ಗೆದ್ದು ಭರ್ಜರಿಯಾಗಿ ಪ್ಲೇಆಫ್ ಪ್ರವೇಶಿಸಿತು. ಆದರೆ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ಕತೆಯನ್ನು ರಾಜಸ್ಥಾನ ರಾಯಲ್ಸ್ ತಂಡ ಕೊನೆಗೊಳಿಸಿತು. ಮತ್ತೊಮ್ಮೆ ಕಪ್ ಕೈ ತಪ್ಪಿದ್ದಕ್ಕೆ ಆರ್‌ಸಿಬಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಟ್ರೋಫಿ ಕೈ ತಪ್ಪಿದರೂ ಕೊಹ್ಲಿ ಆರೆಂಜ್ ಕ್ಯಾಪ್ ಪಡೆದಿರುವುದು ಸಂತಸದ ಸುದ್ದಿಯಾಗಿದೆ. (ಏಜೆನ್ಸೀಸ್)