ಕ್ರೀಡೆ

ಹಿರಿಯ ಆಟಗಾರರ ಬಗ್ಗೆ ಅಸಮಾಧಾನ ಹೊರಹಾಕಿದ Gautam Gambhir; ಟೀಮ್​ ಇಂಡಿಯಾದಲ್ಲಿನ ಬಿರುಕಿಗೆ ಕಾರಣವಾಯ್ತಾ ಈ ಅಂಶ?

ಮುಂಬೈ: ಟೀಮ್​ ಇಂಡಿಯಾದ ಮುಖ್ಯಕೋಚ್​ ಗೌತಮ್​ ಗಂಭೀರ್​ (Gautam Gambhir) ಯಾಕೋ ಕಾಲಿಟ್ಟ ಘಳಿಗೆ ಸರಿ ಇಲ್ಲದಂತೆ ಕಾಣುತ್ತಿದೆ. 17ನೇ ಆವೃತ್ತಿಯ ಐಪಿಎಲ್​ ಬಳಿಕ ಭಾರೀ ಹೈಪ್​ನೊಂದಿಗೆ ಟೀಮ್​ ಇಂಡಿಯಾದ ಮುಖ್ಯ ಕೋಚ್​ ಆಗಿ ಅಧಿಕಾರ ವಹಿಸಿಕೊಂಡಿದ್ದ ಗೌತಮ್​ ಗಂಭೀರ್​ ಕ್ರೀಡಾಭಿಮಾನಿಗಳು ಇಟ್ಟಿದ್ದ ನಿರೀಕ್ಷೆಯನ್ನು ಹುಸಿ ಮಾಡಿದ್ದು, ಟೀಮ್​ ಇಂಡಿಯಾ ನೀಡಿರುವ ಕಳಪೆ ಪ್ರದರ್ಶನವೇ ಇದಕ್ಕೆ ಜೀವಂತೆ ಸಾಕ್ಷಿಯಾಗಿದೆ.

ಗೌತಮ್​ ಗಂಭೀರ್​ (Gautam Gambhir) ಕೋಚ್​ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಟೀಮ್​ ಇಂಡಿಯಾದಲ್ಲಿನ ಆಂತರಿಕ ಕಿತ್ತಾಟ ಮುನ್ನೆಲೆಗೆ ಬಂದಿದೆ ಎಂದು ಹೇಳಲಾಗಿದ್ದು, ಯಾಕೋ ಎಲ್ಲವೂ ಸರಿ ಇಲ್ಲವೆಂಬಂತೆ ಭಾಸವಾಗುತ್ತಿದೆ. ಅದಕ್ಕೆ ಪೂರಕವೆಂಬಂತೆ ಇತ್ತೀಚಿಗೆ ಬಿಸಿಸಿಐ ನಡೆಸಿದ ಸಭೆಯಲ್ಲಿ ಈ ಬಗ್ಗೆ ಮಾತನಾಡಲಾಗಿದ್ದು, ಕೋಚ್​ ಗೌತಮ್​ ಗಂಭೀರ್​ ಹಿರಿಯ ಆಟಗಾರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗಿದೆ.

ಈಚೆಗೆ ಮುಕ್ತಾಯಗೊಂಡ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ವೇಳೆ ಟೀಮ್​ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿತ್ತು. ಇದಲ್ಲದೆ ಡ್ರೆಸ್ಸಿಂಗ್ ರೂಮ್ ವಿಚಾರಗಳು ಹೊರಬರುತ್ತಿದ್ದಂತೆ, ಭಾರತ ತಂಡದಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಬಹಿರಂಗವಾಗಿತ್ತು. ಹಿರಿಯ ಆಟಗಾರರು ಹೋಟೆಲ್​ ಹಾಗೂ ಅಭ್ಯಾಸದ ವಿಚಾರವಾಗಿ ಕೆಲವು ಬೇಡಿಕೆಗಳನ್ನು ಇರಿಸಿದ್ದರು ಎಂಬ ಸುದ್ದಿಯೂ ಕೇಳಿ ಬಂದಿತ್ತು.

ಇದೀಗ ಕೋಚ್​ ಗೌತಮ್​ ಗಂಭೀರ್​ (Gautam Gambhir) ಈ ವಿಚಾರವನ್ನು ಬಿಸಿಸಿಐ ನಡೆಸಿದ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಹಿರಿಯ ಆಟಗಾರರಿಂದ ಬೇರೆಯವರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿಯನ್ನು ಎತ್ತಿದ್ದಾರೆ. ಸೂಪರ್‌ಸ್ಟಾರ್ ಸಂಸ್ಕೃತಿಯನ್ನು ಕೊನೆಗೊಳಿಸಬೇಕೆಂದು ಬಿಸಿಸಿಐ ನಡೆಸಿದ ಪರಿಶೀಲನಾ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ಧಾರೆ ಎಂದು ಹೇಳಲಾಗಿದೆ.

ಇದಲ್ಲದೆ ಗಂಭೀರ್​ (Gautam Gambhir) ವಿರುದ್ಧವೂ ಹಿರಿಯ ಆಟಗಾರರು ಅಪಸ್ವರ ತೆಗೆದಿದ್ದು, ಬಿಸಿಸಿಐನ ಹಿರಿಯ ಅಧಿಕಾರಿಗಳು ಕೂಡ ಗಂಭೀರ್​ ವಿರುದ್ಧ ಕಿಡಿಕಾರಿದ್ದಾರೆ. ನ್ಯೂಜಿಲೆಂಡ್​ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಿಗೆ ಸಂಬಂಧಿಸಿದಂತೆ ಗಂಭೀರ್​ ಕೇಳಿದ ತಂಡವನ್ನೇ ಆಯ್ಕೆ ಮಾಡಲಾಗಿತ್ತು. ಆದರೆ, ಈ ಎರಡು ಸರಣಿಗಳನ್ನು ತಂಡ ಹೀನಾಯವಾಗಿ ಸೋಲುಂಡಿತ್ತು. ಇದೀಗ ತಂಡ ಆಯ್ಕೆಗೆ ಸಂಬಂಧಿಸಿದ ವಿಚಾರಗಳಿಂದ ದೂರ ಉಳಿಯುವಂತೆ ಸೂಚನೆ ನೀಡಿದ್ದು, ಗೌತಮ್ ಗಂಭೀರ್ ತಮ್ಮ ಮ್ಯಾನೇಜರ್​ನನ್ನು ಜತೆಗೆ ಕರೆದುಕೊಂಡು ಹೋಗುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದೆ.

ಸರಣಿಗಳ ಸೋಲಿನ ಬೆನ್ನಲ್ಲೇ ಬಿಸಿಸಿಐ ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿದ್ದು, ಆಟಗಾರರು ಹಾಗೂ ಕೋಚ್​ಗೆ ಬಿಸಿ ಮುಟ್ಟಿಸಿದೆ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ ತಂಡದ ಪ್ರದರ್ಶನ ಆಧರಿಸಿ ಬಿಸಿಸಿಐ ಕ್ರಮ ಜರುಗಿಸಲು ಮುಂದಾಗಿದ್ದು, ಅಂತಿಮವಾಗಿ ಏನಾಗಲಿದೆ ಎಂದು ಮುಂದಿನ ಕೆಲವೇ ದಿನಗಳಲ್ಲಿ ತಿಳಿದು ಬರಲಿದೆ.