ಕ್ರೀಡೆ

ಟಿ20 ವಿಶ್ವಕಪ್​ಗೆ 10 ಪಂದ್ಯಗಳ ಕೌಂಟ್​ಡೌನ್​! ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗರ ಭವಿಷ್ಯದ ಬಗ್ಗೆ ಗೊಂದಲ...

ನವದೆಹಲಿ: ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಅನುಭವಿಸಿದ ನಿರಾಸೆಯ ಬಳಿಕ, ಮುಂದಿನ ವರ್ಷದ ಟಿ20 ವಿಶ್ವಕಪ್​ನಲ್ಲಿ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವುದು ಭಾರತ ತಂಡದ ಗುರಿಯಾಗಿದೆ. ಆದರೆ ವಿಶ್ವಕಪ್​ ತಂಡವನ್ನು ಮುಂದಿನ 10 ಟಿ20 ಪಂದ್ಯಗಳಲ್ಲೇ ಅಂತಿಮಗೊಳಿಸಬೇಕಾದ ಸವಾಲು ಭಾರತದ ಮುಂದಿದೆ.

ಟಿ20 ವಿಶ್ವಕಪ್​ ಟೂರ್ನಿ ಮುಂದಿನ ವರ್ಷ ಜೂನ್​ 4ರಿಂದ 30ರವರೆಗೆ ನಡೆಯಲಿದೆ. ಅದಕ್ಕೆ ಮುನ್ನ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ ಹಾಲಿ ಟಿ20 ಸರಣಿಯ ಉಳಿದ 4 ಪಂದ್ಯಗಳಲ್ಲದೆ, ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ 3 ಮತ್ತು ಜನವರಿಯಲ್ಲಿ ಅ್ಘಾನಿಸ್ತಾನ ವಿರುದ್ಧ 3 ಟಿ20 ಪಂದ್ಯಗಳನ್ನು ಮಾತ್ರ ಭಾರತ ತಂಡ ಆಡಲಿದೆ. ಭಾರತ ತಂಡದ ಮುಂದಿನ ಕೋಚ್​ ಆಗುವ ರೇಸ್​ನಲ್ಲಿ ಮುಂಚೂಣಿಯಲ್ಲಿರುವ ವಿವಿಎಸ್​ ಲಕ್ಷ್ಮಣ್​, ಆಸೀಸ್​ ವಿರುದ್ಧದ ಹಾಲಿ ಟಿ20 ಸರಣಿಯಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಭಾರತಕ್ಕೆ ವಿಶ್ವಕಪ್​ ತಂಡವನ್ನು ಅಂತಿಮಗೊಳಿಸಲು ನೆರವಾಗುವ ನಿರೀಕ್ಷೆ ಇದೆ.

ಇನ್ನು ಟಿ20 ತಂಡದ ನಾಯಕ ಹಾರ್ದಿಕ್​ ಪಾಂಡ್ಯ ವಿಶ್ವಕಪ್​ಗೆ ಮುನ್ನ ಭಾರತ ಪರ ಯಾವುದೇ ಪಂದ್ಯ ಆಡುವ ಸಾಧ್ಯತೆಯೂ ಇಲ್ಲ. ಮುಂದಿನ ವರ್ಷದ ಐಪಿಎಲ್​ ವೇಳೆಗೆ ಹಾರ್ದಿಕ್​ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದರೂ, ಐಪಿಎಲ್​ ಬೆನ್ನಲ್ಲೇ ಟಿ20 ವಿಶ್ವಕಪ್​ ಆಡಬೇಕಾದ ಸವಾಲು ಇದೆ. ಹೀಗಾಗಿ ವಿಶ್ವಕಪ್​ಗೆ ಮುನ್ನ ಭಾರತದ ಪೂರ್ಣ ಪ್ರಮಾಣದ ಟಿ20 ತಂಡ ಕಣಕ್ಕಿಳಿಯುವ ಸಾಧ್ಯತೆಗಳಿಲ್ಲ.

ಆಸೀಸ್​, ಆಫ್ರಿಕಾ, ಆ್ಘನ್​ ವಿರುದ್ಧದ ಸರಣಿಯಲ್ಲಿ ಆಡುವ ಆಟಗಾರರೇ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯಬಹುದಾದರೂ, ಮಾರ್ಚ್​-ಏಪ್ರಿಲ್​&ಮೇನಲ್ಲಿ ಐಪಿಎಲ್​ ವೇಳೆ ಯಾರಾದರೂ ಹೊಸ ಆಟಗಾರರು ಗಮನಸೆಳೆದರೆ ಅಚ್ಚರಿಯ ಆಯ್ಕೆ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ರೋಹಿತ್​, ಕೊಹ್ಲಿ ಬಗ್ಗೆ ಗೊಂದಲ
ಟಿ20 ವಿಶ್ವಕಪ್​ ತಂಡಕ್ಕೆ ಹಾರ್ದಿಕ್​ ಪಾಂಡ್ಯ ಜತೆಗೆ ರವೀಂದ್ರ ಜಡೇಜಾ, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​ ಮತ್ತು ಶುಭಮಾನ್​ ಗಿಲ್​ ಖಚಿತ ಆಯ್ಕೆ ಎನಿಸಿದ್ದಾರೆ. ಆದರೆ ಭಾರತದ ಅನುಭವಿ ಆಟಗಾರರಾದ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಟಿ20 ವಿಶ್ವಕಪ್​ನಲ್ಲಿ ಆಡುವ ಬಗ್ಗೆ ಸ್ಪಷ್ಟತೆ ಇಲ್ಲ. 2022ರ ಟಿ20 ವಿಶ್ವಕಪ್​ ಬಳಿಕ ಇವರು ಭಾರತ ಪರ ಒಂದೂ ಪಂದ್ಯ ಆಡಿಲ್ಲ. ಆದರೆ ಟಿ20 ವಿಶ್ವಕಪ್​ನಲ್ಲಿ ಆಡುವ ಅಥವಾ ಗೈರಾಗುವ ಆಯ್ಕೆಯನ್ನು ಆಯ್ಕೆಗಾರರು ಇವರಿಬ್ಬರಿಗೇ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ರೋಹಿತ್​ ಆಡದಿದ್ದರೆ ಆರಂಭಿಕನ ಸ್ಥಾನಕ್ಕೆ ಋತುರಾಜ್​ ಗಾಯಕ್ವಾಡ್​, ಯಶಸ್ವಿ ಜೈಸ್ವಾಲ್​ ಪೈಪೋಟಿ ನಡೆಸಲಿದ್ದಾರೆ. 3ನೇ ಕ್ರಮಾಂಕಕ್ಕೆ ಕೊಹ್ಲಿ ಗೈರಾದರೆ, ಶ್ರೇಯಸ್​ ಅಯ್ಯರ್​ ಅಥವಾ ಇಶಾನ್​ ಕಿಶನ್​ ಆ ಸ್ಥಾನದಲ್ಲಿ ಆಡಬಹುದು.

ರಿಂಕು ಸಿಂಗ್​ ಫಿನಿಷರ್​
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್​, ಹಾರ್ದಿಕ್​ ಪಾಂಡ್ಯ ಆಡುವುದು ಖಚಿತವಿದ್ದರೆ, ಉಳಿದೊಂದು ಸ್ಥಾನಕ್ಕೆ ರಿಂಕು ಸಿಂಗ್​ ಜತೆ ತಿಲಕ್​ ವರ್ಮ, ಸಂಜು ಸ್ಯಾಮ್ಸನ್​ ಪೈಪೋಟಿ ನಡೆಸಲಿದ್ದಾರೆ. 2022ರ ಟಿ20 ವಿಶ್ವಕಪ್​ನಲ್ಲಿ ದಿನೇಶ್​ ಕಾರ್ತಿಕ್​ಗೆ ನೀಡಲಾಗಿದ್ದ ಫಿನಿಷರ್​ ಪಾತ್ರ ಈ ಬಾರಿ ರಿಂಕು ಸಿಂಗ್​ಗೆ ಒಲಿಯಬಹುದು.

ಟಿ20 ವಿಶ್ವಕಪ್​ ತಂಡದ ರೇಸ್​ನಲ್ಲಿರುವವರು:
ಬ್ಯಾಟರ್ಸ್​: ರೋಹಿತ್​ ಶರ್ಮ, ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಋತುರಾಜ್​ ಗಾಯಕ್ವಾಡ್​, ಯಶಸ್ವಿ ಜೈಸ್ವಾಲ್​, ತಿಲಕ್​ ವರ್ಮ, ಸೂರ್ಯಕುಮಾರ್​ ಯಾದವ್​, ರಿಂಕು ಸಿಂಗ್​.
ವಿಕೆಟ್​ ಕೀಪರ್ಸ್​: ಇಶಾನ್​ ಕಿಶನ್​, ಕೆಎಲ್​ ರಾಹುಲ್​, ಜಿತೇಶ್​ ಶರ್ಮ, ಸಂಜು ಸ್ಯಾಮ್ಸನ್​, ರಿಷಭ್​ ಪಂತ್​ (ಫಿಟ್​ ಆದರೆ).
ಆಲ್ರೌಂಡರ್ಸ್​: ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಶಿವಂ ದುಬೆ, ಅಕ್ಷರ್​ ಪಟೇಲ್​, ವಾಷಿಂಗ್ಟನ್​ ಸುಂದರ್​.
ಸ್ಪಿನ್ನರ್ಸ್​: ಕುಲದೀಪ್​ ಯಾದವ್​, ರವಿ ಬಿಷ್ಣೋಯಿ, ಯಜುವೇಂದ್ರ ಚಾಹಲ್​.
ವೇಗಿಗಳು: ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಶಮಿ, ಮೊಹಮದ್​ ಸಿರಾಜ್​, ಅರ್ಷದೀಪ್​ ಸಿಂಗ್​, ಪ್ರಸಿದ್ಧ ಕೃಷ್ಣ, ಮುಕೇಶ್​ ಕುಮಾರ್​, ಆವೇಶ್​ ಖಾನ್​.