ಕ್ರೀಡೆ

ಪಾಕಿಸ್ತಾನ ಸೂಪರ್ ಲೀಗ್ ಆಟಗಾರರಿಗೆ ಕರೊನಾ?

ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್​ಎಲ್) ಟಿ20 ಕ್ರಿಕೆಟ್ ಟೂರ್ನಿಯ ನಾಕೌಟ್ ಹಂತದ ಪಂದ್ಯಗಳನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಸಜ್ಜಾಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ದಿಢೀರ್ ಮುಂದೂಡಿಕೆ ಮಾಡಿದೆ. ಇದಕ್ಕೆ ಕಾರಣ, ಟೂರ್ನಿಯಲ್ಲಿ ಆಡುತ್ತಿದ್ದ ವಿದೇಶಿ ಆಟಗಾರರಿಗೆ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು! ಮುನ್ನೆಚ್ಚರಿಕೆ ದೃಷ್ಟಿಯಿಂದ ಅನಿರ್ದಿಷ್ಟಾವಧಿಗೆ ಪಿಎಸ್​ಎಲ್ ಮುಂದೂಡಿಕೆಯಾಗಿದೆ.

ಹ್ಯಾಲ್ಸ್​ಗೆ ಕರೊನಾ ಶಂಕೆ: ಇಂಗ್ಲೆಂಡ್ ಬ್ಯಾಟ್ಸ್​ಮನ್ ಅಲೆಕ್ಸ್ ಹ್ಯಾಲ್ಸ್​ಗೆ ವೈರಸ್ ಲಕ್ಷಣಗಳು ಕಂಡು ಬಂದಿವೆ ಎಂದು ಮಾಜಿ ನಾಯಕ ಹಾಗೂ ವೀಕ್ಷಕ ವಿವರಣೆಗಾರ ರಮೀಜ್ ರಾಜಾ ತಿಳಿಸಿದ್ದಾರೆ. ಕರೊನಾ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಿಎಸ್​ಎಲ್​ನಿಂದ ಈಗಾಗಲೇ ಕೆಲ ವಿದೇಶಿ ಆಟಗಾರರು ತವರಿಗೆ ವಾಪಸಾಗಿದ್ದರು. ಕರಾಚಿ ಕಿಂಗ್ಸ್ ಪರ ಆಡುತ್ತಿದ್ದ ಅಲೆಕ್ಸ್ ಹ್ಯಾಲ್ಸ್​ಗೆ ದೇಶ ಬಿಡುವ ಮೊದಲೇ ಕರೊನಾ ವೈರಸ್ ಲಕ್ಷ್ಮಣವಿದ್ದ ಬಗ್ಗೆ ದೃಢಪಡಿಸಿದ್ದರು. ಬಳಿಕ ಪಿಎಸ್​ಎಲ್ ಮುಂದೂಡುವ ಕ್ರಮ ಕೈಗೊಳ್ಳಲಾಯಿತು. ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪಿಸಿಬಿ ಸಿಇಒ ವಾಸಿಂ ಖಾನ್ ತಿಳಿಸಿದ್ದಾರೆ. ಅಲೆಕ್ಸ್ ಹ್ಯಾಲ್ಸ್​ಗೆ ವೈರಸ್ ಲಕ್ಷಣ ಪತ್ತೆಯಾಗಿದ್ದು, ಬಳಿಕ ಪಿಎಸ್​ಎಲ್ ಆಡಿದ ಎಲ್ಲ ಆಟಗಾರರಿಗೆ, ಸಿಬ್ಬಂದಿ ವರ್ಗ ಹಾಗೂ ವೀಕ್ಷಕ ವಿವರಣೆಗಾರರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹ್ಯಾಲ್ಸ್​ಗೆ ವೈರಸ್ ಇರುವ ಕುರಿತು ಸಂಪೂರ್ಣ ಖಚಿತವಾಗಿಲ್ಲ ಎಂದು ರಮೀಜ್ ರಾಜಾ ಹೇಳಿದ್ದಾರೆ.

‘ಇಂಗ್ಲೆಂಡ್ ತಲುಪಿದ ಬಳಿಕ ಭಾನುವಾರ ಬೆಳಗ್ಗೆ ಜ್ವರದಿಂದ ಬಳಲಿದೆ. ಸರ್ಕಾರದ ಸಲಹೆಯಂತೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದು, ಈಗಲೂ ಕೆಮ್ಮು ಇದೆ’ ಎಂದು 31 ವರ್ಷದ ಹ್ಯಾಲ್ಸ್ ತಿಳಿಸಿದ್ದಾರೆ. ಲೀಗ್​ನಲ್ಲಿ ಒಟ್ಟಾರೆ 34 ವಿದೇಶಿ ಆಟಗಾರರು ಆಡುತ್ತಿದ್ದರು. ಲಾಹೋರ್​ನಲ್ಲಿ ಮಂಗಳವಾರ ಸೆಮಿಫೈನಲ್ ಪಂದ್ಯಗಳು ನಿಗದಿಯಾಗಿದ್ದವು. ಪಾಕಿಸ್ತಾನದಲ್ಲಿ ಇದುವರೆಗೆ 184 ಕರೊನಾ ಪ್ರಕರಣ ಪತ್ತೆಯಾಗಿವೆ.