ಮುಂಬೈ: ವಿದೇಶಿ ಟಿ20 ಲೀಗ್ಗಳಲ್ಲಿ ಆಡುವ ಸಲುವಾಗಿ ಭಾರತದ ಹಿರಿಯ ಕ್ರಿಕೆಟಿಗರು ನಿವೃತ್ತಿ ಘೋಷಿಸುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಬಿಸಿಸಿಐ ಈಗ, ನಿವೃತ್ತಿಯ ಬೆನ್ನಲ್ಲೇ ವಿದೇಶಿ ಟಿ20 ಲೀಗ್ಗಳಲ್ಲಿ ಆಡುವುದನ್ನು ನಿರ್ಬಂಧಿಸಲು ಮುಂದಾಗಿದೆ. ಆದರೆ ಬಿಸಿಸಿಐ, ನಿವೃತ್ತ ಕ್ರಿಕೆಟಿಗರಿಗೂ "ಕೂಲಿಂಗ್-ಆಫ್ ಅವಧಿ' ನಿಗದಿಪಡಿಸಲು ಮುಂದಾಗಿರುವುದಕ್ಕೆ ಟೀಮ್ ಇಂಡಿಯಾದ ಮಾಜಿ ಬ್ಯಾಟರ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಭಾರತದ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದ 37 ವರ್ಷದ ರಾಬಿನ್ ಉತ್ತಪ್ಪ ಬಳಿಕ ವಿವಿಧ ವಿದೇಶಿ ಲೀಗ್ಗಳಲ್ಲಿ ಆಡುತ್ತಿದ್ದಾರೆ. ಇತ್ತೀಚೆಗೆ ಜಿಂಬಾಬ್ವೆಯ ಟಿ10 ಲೀಗ್ನಲ್ಲಿ ಆಡಿದ್ದರು. ಅದಕ್ಕೆ ಮುನ್ನ ಯುಎಇಯಲ್ಲಿ ಅಂತಾರಾಷ್ಟ್ರೀಯ ಲೀಗ್ ಟಿ20 ಟೂರ್ನಿಯಲ್ಲಿ ಆಡಿದ್ದರು. ಇದೀಗ ನಿವೃತ್ತಿ ಪ್ರಕಟಿಸಿದ ನಿರ್ದಿಷ್ಟ ಅವಧಿಯವರೆಗೆ ಭಾರತದ ಕ್ರಿಕೆಟಿಗರು ವಿದೇಶಿ ಲೀಗ್ಗಳಲ್ಲಿ ಆಡಬಾರದು ಎಂದು ಬಿಸಿಸಿಐ ನಿಯಮ ರೂಪಿಸಲು ಮುಂದಾಗಿದೆ. ಈ ನಿರ್ದಿಷ್ಟ ಅವಧಿ ಎಷ್ಟು ತಿಂಗಳು, ವರ್ಷ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
'ಬಿಸಿಸಿಐ ಇಂಥ ನಿಯಮ ಜಾರಿಗೆ ತಂದರೆ ಮಾಜಿ ಕ್ರಿಕೆಟಿಗರಿಗೆ ಕಿರಿಕಿರಿಯಾಗಲಿದೆ ಮತ್ತು ಇದು ನ್ಯಾಯಬದ್ಧವೂ ಅಲ್ಲ. ನಾವು ಬಿಸಿಸಿಐ ಜತೆಗೆ ಯಾವುದೇ ಕೇಂದ್ರಿಯ ಗುತ್ತಿಗೆ ಹೊಂದಿಲ್ಲ. ಭಾರತದಲ್ಲೂ ನಾವು ಕ್ರಿಕೆಟ್ ಆಡುವುದಿಲ್ಲ. ಹೀಗಾಗಿ ಇದು ಸರಿಯಾದ ಕ್ರಮವಲ್ಲ' ಎಂದು ಉತ್ತಪ್ಪ ಜಿಯೋಸಿನಿಮಾದ ಸಮಾರಂಭವೊಂದರಲ್ಲಿ ಹೇಳಿದ್ದಾರೆ.
ಇದೇ ವೇಳೆ ಬಿಸಿಸಿಐ ಕ್ರಿಕೆಟಿಗರ ಬಗ್ಗೆ ಕಾಳಜಿ ವಹಿಸುತ್ತಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಉತ್ತಪ್ಪ, ಬಿಸಿಸಿಐ ಏನೇ ನಿರ್ಧಾರ ತೆಗೆದುಕೊಂಡರೂ ಅದು ಭಾರತೀಯ ಕ್ರಿಕೆಟ್ನ ಹಿತದೃಷ್ಟಿಯಿಂದಲೇ ಆಗಿರುತ್ತದೆ ಎಂದಿದ್ದಾರೆ. ಕರ್ನಾಟಕದ ಮಾಜಿ ಬ್ಯಾಟರ್ ಉತ್ತಪ್ಪ ಭಾರತ ತಂಡದ ಪರ 46 ಏಕದಿನ ಮತ್ತು 13 ಟಿ20 ಪಂದ್ಯ ಆಡಿದ್ದಾರೆ.