ಕ್ರೀಡೆ

ಒಲಿಂಪಿಕ್ಸ್​ ತರಬೇತಿಗಿಂತ ಸ್ಪರ್ಧೆಯೇ ಸುಲಭ! ಅವಳಿ ಕಂಚಿನ ತಾರೆ ಮನು ಹೀಗಂದಿದ್ಯಾಕೆ?

ಪ್ಯಾರಿಸ್​: "ಟೋಕಿಯೊದಲ್ಲಿ ನಾನು ಆತ್ಮವಿಶ್ವಾಸ ಹೊಂದಿರಲಿಲ್ಲ. ಪ್ರತಿಯೊಂದಕ್ಕೂ ಹೆದರುತ್ತಿದ್ದೆ. ಆದರೆ ಈ ಬಾರಿ ಪ್ಯಾರಿಸ್​ನಲ್ಲಿ ಹೆಚ್ಚು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದೆ. ಅನುಭವದಿಂದ ನಾನು ಪಕ್ವಗೊಂಡಿದ್ದೆ. ಪ್ರಮುಖವಾಗಿ ನನ್ನ ಕೋಚ್​ ಜಸ್ಪಾಲ್​ ರಾಣಾ ಅವರಿಂದಾಗಿ ಆ ಆತ್ಮವಿಶ್ವಾಸ ಲಭಿಸಿತು. ಈ ಸ್ಪರ್ಧೆಗಳಿಗಿಂತ ಅವರು ನೀಡುವ ತರಬೇತಿಯೇ ಕಠಿಣವಾಗಿರುತ್ತದೆ. ತರಬೇತಿಯ ವೇಳೆ ಕಲಿತಿದ್ದನ್ನು ಸ್ಪರ್ಧೆಯ ವೇಳೆ ಪುನರಾವರ್ತಿಸುವುದಷ್ಟೇ ನನ್ನ ಕೆಲಸವಾಗಿರುತ್ತದೆ. ಪ್ರತಿ ವ್ಯಕ್ತಿಯ ಜೀವನದಲ್ಲಿ ಅನುಭವ ಕಲಿಸುವ ಪಾಠ ಎಲ್ಲಕ್ಕಿಂತ ದೊಡ್ಡದು' ಎಂದು ಮನು ಭಾಕರ್​ ಹೇಳಿದ್ದಾರೆ.

ಭಾರತದ ಅವಳಿ ಕಂಚಿನ ತಾರೆ ಮನು ಭಾಕರ್​ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೂರನೇ ಪದಕ ಜಯಿಸುವ ಹೊಸ್ತಿಲಲ್ಲಿ ನಿರಾಸೆ ಅನುಭವಿಸಿದರು. ಮಹಿಳೆಯರ 25 ಮೀ. ಪಿಸ್ತೂಲ್​ ಶೂಟಿಂಗ್​ ಸ್ಪರ್ಧೆಯಲ್ಲಿ ಶನಿವಾರ ನಡೆದ ಫೈನಲ್​ನಲ್ಲಿ ಪದಕದ ರೇಸ್​ನಲ್ಲಿ ಉಳಿದುಕೊಳ್ಳುವ ಟೈಬ್ರೇಕರ್​ ಶೂಟ್​ನಲ್ಲಿ ಗುರಿ ತಪ್ಪಿದ ಮನು ಬಾಕರ್​, 4ನೇ ಸ್ಥಾನಕ್ಕೆ ತೃಪ್ತಿಪಟ್ಟು ಪದಕ ವಂಚಿತರಾದರು. ಈ ಮೂಲಕ ತ್ರಿವಳಿ ಪದಕ ಗೆಲುವಿನ ಐತಿಹಾಸಿಕ ಸಾಧನೆಯನ್ನೂ ತಪ್ಪಿಸಿಕೊಂಡರು.

8 ಶೂಟರ್​ಗಳ ನಡುವೆ ನಡೆದ ಫೈನಲ್​ನಲ್ಲಿ ಭರ್ಜರಿ ಆರಂಭ ಕಂಡ ಹರಿಯಾಣದ 22 ವರ್ಷದ ಮನು ಕೆಲಕಾಲ ಅಗ್ರಸ್ಥಾನದಲ್ಲಿದ್ದರು. ಬಳಿಕ 2ನೇ ಸ್ಥಾನಕ್ಕೆ ಜಾರಿದರು. ಎಲಿಮಿನೇಷನ್​ ಸುತ್ತು ಆರಂಭಗೊಂಡಾಗಲೂ ಮನು ಜಂಟಿ 2ನೇ ಸ್ಥಾನದೊಂದಿಗೆ ಪದಕದಾಸೆ ಜೀವಂತವಿಟ್ಟಿದ್ದರು. ಆದರೆ ಕೊನೇ 4 ಶೂಟರ್​ಗಳಿದ್ದಾಗ ಹಂಗೆರಿಯ ವೆರೋನಿಕಾ ಮೇಜರ್​ ಜತೆ 3ನೇ ಸ್ಥಾನದ ಸಮಬಲ ಸಾಧಿಸಿದ ಮನು ಭಾಕರ್​, ನಂತರ ನಡೆದ ಟೈ ಬ್ರೇಕರ್​ ಶೂಟ್​ನಲ್ಲಿ ಮನು (28 ಅಂಕ) 5ರಲ್ಲಿ 2 ಬಾರಿ ಗುರಿ ತಪ್ಪಿದರೆ, ಒಂದೇ ಬಾರಿ ಗುರಿ ತಪ್ಪಿದ ವೆರೋನಿಕಾ (31) ಪದಕ ರೇಸ್​ನಲ್ಲಿ ಉಳಿದರು ಮತ್ತು ಅಂತಿಮವಾಗಿ ಕಂಚಿಗೆ ಕೊರಳೊಡ್ಡಿದರು. ಕೊರಿಯಾದ ಜಿನ್​ ಯಂಗ್​ (37) ಚಿನ್ನ ಮತ್ತು ಫ್ರಾನ್ಸ್​​ನ ಕ್ಯಾಮಿಲ್​ ಜೆಡ್ರೆಜೆವ್​ಸ್ಕಿ (37) ಬೆಳ್ಳಿ ಜಯಿಸಿದರು.

10 ಮೀ. ಏರ್​ ಪಿಸ್ತೂಲ್​ನಲ್ಲಿ ವೈಯಕ್ತಿಕ ಮತ್ತು ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ ಬಳಿಕ ಮನು, ವಿಶ್ವ ಚಾಂಪಿಯನ್​ ಆಗಿರುವ 25 ಮೀ. ಪಿಸ್ತೂಲ್​ ವಿಭಾಗದಲ್ಲಿ ಪದಕದ ಹ್ಯಾಟ್ರಿಕ್​ ಸಾಧಿಸುವ ನಿರೀಕ್ಷೆ ಹೆಚ್ಚಾಗಿತ್ತು. ಇದಕ್ಕೆ ತಕ್ಕಂತೆ ಮನು ಉತ್ತಮ ನಿರ್ವಹಣೆ ತೋರಿದರೂ, ಅಂತಿಮ ಹಂತದಲ್ಲಿ ಮಾಡಿಕೊಂಡ ಎಡವಟ್ಟಿನಿಂದಾಗಿ ಪದಕ ಕೈಜಾರಿತು. 2021ರಲ್ಲಿ ಟೋಕಿಯೊದಲ್ಲೂ ಮನು 3 ವಿಭಾಗಗಳಲ್ಲಿ ಸ್ಪರ್ಧಿಸಿದ್ದರೂ, ಮೊದಲ ಸ್ಪರ್ಧೆಯಲ್ಲೇ ಪಿಸ್ತೂಲ್​ ಕೈಕೊಟ್ಟ ಬಳಿಕ ಲಯತಪ್ಪಿ ಮೂರೂ ಸ್ಪರ್ಧೆಗಳಲ್ಲಿ ಫೈನಲ್​ಗೇರಲು ವಿಲರಾಗಿದ್ದರು. ಆ ಕಹಿಯನ್ನು ಅವರು ಪ್ಯಾರಿಸ್​ನಲ್ಲಿ ಮರೆಸಿರುವುದು ವಿಶೇಷ ಸಾಧನೆ ಎನಿಸಿದೆ.

ನರ್ವಸ್​ ಆಗಿದ್ದೆ, ಒಪ್ಪಿಕೊಂಡ ಮನು

ಫೈನಲ್​ ಸ್ಪರ್ಧೆಯ ಅಂತಿಮ ಹಂತದಲ್ಲಿ ನರ್ವಸ್​ ಆಗಿದ್ದೆ. ಶಾಂತವಾಗಿರಲು ಸಾಕಷ್ಟು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಮನು 3ನೇ ಪದಕ ಕೈತಪ್ಪಿದ ಬಳಿಕ ಬೇಸರಿಸಿದರು. ಆದರೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟ ನಡುವೆಯೂ ಸಾಕಷ್ಟು ಸಕಾರಾತ್ಮಕ ಅಂಶಗಳು ಲಭಿಸಿವೆ. ಮುಂದಿನ 2028ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ಗೆ ಬಲಿಷ್ಠವಾಗಿ ಮರಳುವೆ ಎಂದು ಮನು ತಿಳಿಸಿದರು. "3ನೇ ಪದಕ ಗೆಲುವಿನ ಒತ್ತಡ ನನ್ನ ಮೇಲಿರಲಿಲ್ಲ. ಆದರೆ 4ನೇ ಸ್ಥಾನ ಸಂಭ್ರಮಿಸುವ ಸ್ಥಾನವಲ್ಲ. ಈಗ ಗೆದ್ದಿರುವ 2 ಪದಕಗಳು ಸಾಕಷ್ಟು ಪ್ರೇರಣೆ ತುಂಬಿದೆ. ಇನ್ನಷ್ಟು ಕಠಿಣ ಪರಿಶ್ರಮವಹಿಸಿ ಮುಂದಿನ ಬಾರಿ ಭಾರತಕ್ಕೆ ಇನ್ನೂ ಹಲವು ಪದಕಗಳನ್ನು ಗೆದ್ದುಕೊಡಲು ಪ್ರಯತ್ನಿಸುವೆ' ಎಂದು ಮನು ಭಾಕರ್​ ಹೇಳಿದರು.