ನ್ಯೂಯಾರ್ಕ್: ವರ್ಷದ ಎರಡನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿರುವ ಬೆಲಾರಸ್ ತಾರೆ ಅರಿನಾ ಸಬಲೆಂಕಾ ಮತ್ತು ತವರು ನೆಲದಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಕನಸು ನನಸಾಗಿಸುವ ತವಕದಲ್ಲಿರುವ ಆತಿಥೇಯರ ಯುವ ಆಶಾಕಿರಣ ಕೋಕೋ ಗೌಫ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಶನಿವಾರ (ಭಾರತೀಯ ಕಾಲಮಾನ ಪ್ರಕಾರ ಭಾನುವಾರ) ಮುಖಾಮುಖಿ ಆಗಲಿದ್ದಾರೆ.
2ನೇ ಶ್ರೇಯಾಂಕಿತೆ ಹಾಗೂ ಭಾವಿ ವಿಶ್ವ ನಂ. 1 ಸಬಲೆಂಕಾ, ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಕೀಯ್ಸ್ ಎದುರು 0-6, 7-6 (7-1), 7-6 (10-5) ಅಂತರದಿಂದ ರೋಚಕ ಗೆಲುವು ದಾಖಲಿಸಿದರು. ಆಸ್ಟ್ರೆಲಿಯನ್ ಓಪನ್ ಚಾಂಪಿಯನ್ ಸಬಲೆಂಕಾಗೆ ನ್ಯೂಯಾರ್ಕ್ನಲ್ಲಿ ಇದು ಮೊದಲ ಫೈನಲ್ ಪ್ರವೇಶವಾಗಿದೆ.
ಮೊದಲ ಸೆಟ್ನಲ್ಲಿ ಒಂದೂ ಗೇಮ್ ಗೆಲ್ಲದೆ 30 ನಿಮಿಷಗಳಲ್ಲೇ ಪರಾಭವಗೊಂಡ 25 ವರ್ಷದ ಸಬಲೆಂಕಾ ನಂತರದ 2 ಸೆಟ್ಗಳ ಟೈಬ್ರೇಕರ್ನಲ್ಲಿ ದಿಟ್ಟ ತಿರುಗೇಟು ನೀಡುವಲ್ಲಿ ಸಫಲರಾದರು. ಸಬಲೆಂಕಾ ಗೆಲುವಿಗಾಗಿ 2 ಗಂಟೆ 32 ನಿಮಿಷಗಳ ಕಾಲ ಶ್ರಮಿಸಿದರು. ಇದೀಗ ವಿಶ್ವ ನಂ. 1 ಪಟ್ಟವನ್ನು ಪ್ರಶಸ್ತಿ ಗೆಲುವಿನೊಂದಿಗೆ ಸಂಭ್ರಮಿಸುವ ಅವಕಾಶ ಅವರ ಮುಂದಿದೆ. 2017ರ ನಂತರ ಮತ್ತೊಮ್ಮೆ ಯುಎಸ್ ಓಪನ್ ಫೈನಲ್ ಪ್ರವೇಶಿಸುವ ಮ್ಯಾಡಿಸನ್ ಕೀಯ್ಸ್ ಪ್ರಯತ್ನ ಫಲ ನೀಡಲಿಲ್ಲ. ಇದರಿಂದ ಆಲ್ ಅಮೆರಿಕನ್ ಫೈನಲ್ ಪಂದ್ಯವೂ ತಪ್ಪಿತು.
ಗೌಫ್ಗೆ ಮಣಿದ ಮುಚೋವಾ
ಆರನೇ ಶ್ರೇಯಾಂಕಿತೆ ಕೋಕೋ ಗೌಫ್ ಸೆಮಿಫೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕ್ಯಾರೊಲಿನಾ ಮುಚೋವಾ ಎದುರು 6-4, 7-5ರಿಂದ ಗೆಲುವು ದಾಖಲಿಸಿದರು. ನೇರಸೆಟ್ಗಳಲ್ಲಿ ಗೆಲುವು ಕಂಡರೂ, 19 ವರ್ಷದ ಗೌಫ್ ಗೆಲುವಿಗಾಗಿ 2 ಗಂಟೆ 3 ನಿಮಿಷಗಳ ಕಾಲ ಹೋರಾಡಿದರು. 5 ಮ್ಯಾಚ್ ಪಾಯಿಂಟ್ಗಳನ್ನು ಅವರು ಕೈಚೆಲ್ಲಿದ್ದು ಇದಕ್ಕೆ ಕಾರಣ. 10ನೇ ಶ್ರೇಯಾಂಕಿತೆ ಮುಚೋವಾ 2ನೇ ಸೆಟ್ನಲ್ಲಿ ನಿಕಟ ಪ್ರತಿರೋಧವನ್ನೇ ತೋರಿದರು. ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್ಗೇರಿ ರನ್ನರ್ಅಪ್ ಆಗಿದ್ದ ಗೌಫ್ಗೆ ತವರಿನ ಗ್ರಾಂಡ್ ಸ್ಲಾಂನಲ್ಲಿ ಇದು ಚೊಚ್ಚಲ ಫೈನಲ್ ಪ್ರವೇಶವಾಗಿದೆ. 19 ವರ್ಷದ ಗೌಫ್, ಸೆರೇನಾ ವಿಲಿಯಮ್ಸ್ (1999) ಬಳಿಕ ಯುಎಸ್ ಓಪನ್ ಫೈನಲ್ಗೇರಿದ ಅತ್ಯಂತ ಕಿರಿಯ ಆತಿಥೇಯ ಆಟಗಾರ್ತಿ ಎನಿಸಿದ್ದಾರೆ.