ಕ್ರೀಡೆ

ಗೌತಮ್​ ಗಂಭೀರ್​​ ಟೀಮ್​ ಇಂಡಿಯಾ ಕೋಚ್​ ಆದರೆ… ಅಚ್ಚರಿಯ ಹೇಳಿಕೆ ನೀಡಿದ ಮೊಹಮ್ಮದ್​ ಶಮಿ!

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಗೌತಮ್​ ಗಂಭೀರ್​ ಭಾರತ ತಂಡದ ಮುಖ್ಯ ಕೋಚ್​ ಆಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಗಂಭೀರ್​ ಅವರು ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ಸೀಸನ್-17ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ ಗಂಭೀರ್ ಮಾರ್ಗದರ್ಶನದಲ್ಲಿ ಕೆಕೆಆರ್ ಈ ಬಾರಿ ಚಾಂಪಿಯನ್ ಪಟ್ಟವನ್ನು ಗಳಿಸಿತು.

ಕೆಕೆಆರ್​ ಟ್ರೋಫಿ ಗೆಲ್ಲಲು ಮೆಂಟರ್​ ಆಗಿ ಗಂಭೀರ್ ತೆಗೆದುಕೊಂಡ ಖಡಕ್​​ ನಿರ್ಧಾರಗಳೇ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಗಂಭೀರ್ ಅವರನ್ನು ಟೀಮ್​ ಇಂಡಿಯಾ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬಿಸಿಸಿಐ ಹಾಗೂ ಗಂಭೀರ್ ನಡುವೆ ಒಪ್ಪಂದ ನಡೆದಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎಂದು ವರದಿಯಾಗಿದೆ. ಜೂನ್​ 2ರಿಂದ ಆರಂಭವಾಗುವ ಟಿ20 ವಿಶ್ವಕಪ್‌ನೊಂದಿಗೆ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಇದಾದ ನಂತರ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಮಾತಿದೆ.

ಗಂಭೀರ್​ ಟೀಮ್​ ಇಂಡಿಯಾ ಕೋಚ್ ಆಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಅನೇಕ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್​ ಶಮಿ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಗೌತಮ್ ಗಂಭೀರ್ ಅವರ ಹೆಸರು ಸದ್ಯ ಹೆಚ್ಚು ಚರ್ಚೆಯಾಗುತ್ತಿದೆ. ಅವರೊಬ್ಬ ಕ್ರಿಕೆಟ್​ ದಂತಕತೆ ಮತ್ತು ಅಭಿಮಾನಿಗಳು ಅವರ ಮೇಲೆ ತುಂಬಾ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಗಂಭೀರ್​ ಅವರ ನಾಯಕತ್ವದಲ್ಲಿ ಕೆಕೆಆರ್​ 2 ಪ್ರಶಸ್ತಿಗಳನ್ನು ಗೆದ್ದಿದೆ ಮತ್ತು ಅವರ ಮಾರ್ಗದರ್ಶನದಲ್ಲಿ 2024 ರಲ್ಲಿ ಕೆಕೆಆರ್​ ಚಾಂಪಿಯನ್ ಕೂಡ ಆಗಿದೆ ಎಂದು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಮೊಹಮ್ಮದ್​ ಶಮಿ ಹೇಳಿದ್ದಾರೆ.

ಗಂಭೀರ್​ ಅವರದ್ದು ನೇರ ನಡೆ-ನುಡಿಯಾಗಿದೆ.​ ಹೀಗಾಗಿ ಅವರ ಕೋಚಿಂಗ್ ಶೈಲಿಯು ಸಹ ನೇರವಾಗಿರುತ್ತದೆ ಮತ್ತು ಯುವ ಆಟಗಾರರಿಗೆ ಅತ್ಯುತ್ತಮ ಶಿಸ್ತನ್ನು ತುಂಬುತ್ತದೆ. ಕೌಶಲ್ಯ, ವರ್ತನೆ ಮತ್ತು ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಯುವ ಆಟಗಾರರಿಗೆ ಕಲಿಸುತ್ತಾರೆ. ಇದರಿಂದ ಭಾರತ ತಂಡದಲ್ಲಿರುವ ಯುವ ಆಟಗಾರರಿಗೆ ಅನುಕೂಲವಾಗಲಿದೆ ಎಂದು ಶಮಿ ಹೇಳಿದ್ದಾರೆ.

ಕೋಚ್​ ಆಸೆ ವ್ಯಕ್ತಪಡಿಸಿದ ಗಂಭೀರ್​

ಇತ್ತೀಚೆಗೆ ಅಬುಧಾಬಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ 42 ವರ್ಷದ ಗಂಭೀರ್​, ಭಾರತ ತಂಡದ ಕೋಚ್​ ಆಗಲು ಇಷ್ಟಪಡುವೆ. ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವ ಬೇರೆ ಇಲ್ಲ. ಅದು 140 ಕೋಟಿ ಭಾರತೀಯರನ್ನು ಪ್ರತಿನಿಧಿಸಿದಂತೆ ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್​ನೊಂದಿಗೆ ಹಾಲಿ ಕೋಚ್​ ರಾಹುಲ್​ ದ್ರಾವಿಡ್​ ಅವಧಿ ಮುಕ್ತಾಯಗೊಳ್ಳಲಿದ್ದು, ಮುಂದಿನ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲು ಬಿಸಿಸಿಐ ನೀಡಿರುವ ಗಡುವು ಮೇ 27ರಂದೇ ಮುಗಿದಿದೆ. ಆದರೆ ಗಂಭೀರ್​ ಅರ್ಜಿ ಸಲ್ಲಿಸಿರುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. (ಏಜೆನ್ಸೀಸ್​)