ಕ್ರೀಡೆ

ಫಿಟ್ನೆಸ್ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ಪಾಸ್? ಟೀಮ್ ಇಂಡಿಯಾ ಕೋಚ್‌ ಕೊಟ್ಟ ಪ್ರಾಮಾಣಿಕ ಪ್ರತಿಕ್ರಿಯೆ ಇದು!

ಹೊಸದಿಲ್ಲಿ: ಭಾರತೀಯ ಕ್ರಿಕೆಟ್​ ತಂಡದಲ್ಲಿ ಉಳಿಯಬೇಕು ಅಂದ್ರೆ ಫಿಟ್​ನೆಸ್​ ಉಳಿಸಿಕೊಳ್ಳುವುದು ಅತ್ಯಗತ್ಯ ಮತ್ತು ಇದು ಪ್ರತಿಯೊಬ್ಬ ಕ್ರಿಕೆಟಿಗನಿಗೂ ಬಹುಮುಖ್ಯವಾದ ಅಂಶ! ತಂಡದಲ್ಲಿ ಫಿಟ್‌ನೆಸ್ ಎಂದಿಗೂ ಆಯ್ಕೆಯ ಮಾನದಂಡವಾಗಿರಲಿಲ್ಲ. ಆದ್ರೆ, ಕ್ರಿಕೆಟ್‌ನ ವಿಕಾಸದೊಂದಿಗೆ ಇದೀಗ ಬಹಳಷ್ಟು ಬದಲಾಗಿದೆ. ರೋಹಿತ್​ ಶರ್ಮಾ ಫಿಟ್ನೆಸ್​ ಪರೀಕ್ಷೆಯಲ್ಲಿ ಪಾಸ್​ ಆದ್ರಾ? ಅವರು ಫಿಟ್​ ಆಗಿ ಮುಂದುವರೆಯಬಹುದಾ? ಎಂಬ ಪ್ರಶ್ನೆಗೆ ಟೀಮ್ ಇಂಡಿಯಾದ ಸಾಮರ್ಥ್ಯ ಮತ್ತು ಕಂಡೀಷನಿಂಗ್ ಕೋಚ್ ಆದ ಅಂಕಿತ್ ಕಲಿಯಾರ್ ವಿವರಿಸಿದ್ದಾರೆ.

ಆಟಗಾರರು ಭಾರತ ತಂಡಕ್ಕೆ ಸೇರಬೇಕು ಎಂದರೆ ಈ ಯೋ-ಯೋ ಟೆಸ್ಟ್‌ನಲ್ಲಿ ಉತ್ತೀರ್ಣರಾಗಬೇಕು. ಇದರಲ್ಲಿ ಸೈ ಎನ್ನಿಸಿಕೊಂಡರೆ ಮಾತ್ರ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಈ ಮಧ್ಯೆ ಫಿಟ್‌ನೆಸ್ ಚರ್ಚೆಗೆ ತುತ್ತಾಗುವ ಆಟಗಾರರ ಪೈಕಿ ರೋಹಿತ್ ಶರ್ಮಾ ಮುಂಚೂಣಿಯಲ್ಲಿದ್ದು, ಅವರು ಆಡಲು ಫಿಟ್​ ಇದ್ದಾರಾ? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬರುತ್ತದೆ. ಸದ್ಯ ಈ ಪ್ರಶ್ನೆಗ ಅಂಕಿತ್ ಅವರ ಉತ್ತರ ಹೀಗಿದೆ.

"ರೋಹಿತ್ ಶರ್ಮಾ ಉತ್ತಮ ಫಿಟ್ನೆಸ್ ಹೊಂದಿದ್ದು. ನೋಡಲು ಹೆಚ್ಚಿನ ತೂಕ ಹೊಂದಿರುವ ರೀತಿ ಕಾಣುತ್ತಾರೆ. ಆದ್ರೆ ಅವರು ಪ್ರತಿಬಾರಿ ಯೋ-ಯೋ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಶರ್ಮಾ ವಿರಾಟ್ ಕೊಹ್ಲಿ ಅವರಂತೆಯೇ ಫಿಟ್ ಆಗಿದ್ದಾರೆ. ರೋಹಿತ್ ಅವರ ಚುರುಕುತನ ಮತ್ತು ಚಲನಶೀಲತೆ ಅದ್ಭುತವಾಗಿದೆ. ಅವರು ಕೂಡ ಫಿಟೆಸ್ಟ್ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ" ಎಂದು ಹೇಳಿದರು.

ಇನ್ನು ರನ್ ಮಷಿನ್ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ಅಂಕಿತ್, "ಫಿಟ್‌ನೆಸ್ ವಿಚಾರದಲ್ಲಿ ವಿರಾಟ್ ಪ್ರಮುಖ ಉದಾಹರಣೆ. ತಂಡದಲ್ಲಿ ಅವರು ಫಿಟ್‌ನೆಸ್ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ. ವಿರಾಟ್ ನಾಯಕರಾಗಿದ್ದಾಗ ಎಲ್ಲರೂ ಫಿಟ್ ಆಗಿರುವಂತೆ ನೋಡಿಕೊಂಡರು. ತಂಡದಲ್ಲಿ ಫಿಟ್ನೆಸ್ ಅವರ ಪ್ರಮುಖ ಮಾನದಂಡವಾಗಿತ್ತು. ಟೀಮ್​ನಲ್ಲಿ ಆ ಸಂಸ್ಕೃತಿ ಮತ್ತು ಶಿಸ್ತನ್ನು ಸೃಷ್ಟಿಸಿದ್ದಾರೆ. ಅದಕ್ಕಾಗಿ ಅವರಿಗೆ ವಿಶೇಷ ಶ್ಲಾಘನೆಯಿದೆ" ಎಂದು ಹೇಳಿದರು,(ಏಜೆನ್ಸೀಸ್).