ಕ್ರೀಡೆ

ವೆಸ್ಟ್​ ಇಂಡೀಸ್​ ತಂಡಕ್ಕೆ ಕ್ರಿಸ್​ ಗೇಲ್​, ಆಂಡ್ರೆ ರಸೆಲ್​, ಹೆಟ್ಮೆಯರ್​ ವಾಪಸ್​...

ಸೇಂಟ್​ ಜಾನ್ಸ್​ (ಅಂಟಿಗುವಾ): ಚುಟುಕು ಕ್ರಿಕೆಟ್​ನ ಸ್ಟಾರ್​ ಆಟಗಾರರಾದ ಆಂಡ್ರೆ ರಸೆಲ್​, ಕ್ರಿಸ್​ ಗೇಲ್​ ಹಾಗೂ ಶಿಮ್ರೋನ್​ ಹೆಟ್ಮೆಯರ್​ ತವರಿನಲ್ಲಿ ನಡೆಯಲಿರುವ 5 ಪಂದ್ಯಗಳ 3 ಟಿ20 ಸರಣಿಗಳಿಗೆ ವೆಸ್ಟ್​ ಇಂಡೀಸ್​ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ವೆಸ್ಟ್​ ಇಂಡೀಸ್​ ತಂಡ ತವರಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೆಲಿಯಾ ಹಾಗು ಪಾಕಿಸ್ತಾನ ತಂಡಗಳನ್ನು ಎದುರಿಸಲಿದೆ. ರಸೆಲ್​ ಹಾಗೂ ಹೆಟ್ಮೆಯರ್​ 2020ರಲ್ಲಿ ಕಡೇ ಬಾರಿಗೆ ರಾಷ್ಟ್ರೀಯ ತಂಡದ ಪರ ಆಡಿದ್ದರೆ, ಕ್ರಿಸ್​ ಗೇಲ್​ ಕಳೆದ ಮಾರ್ಚ್​ನಲ್ಲಿ ಶ್ರೀಲಂಕಾ ಎದುರು ಆಡಿದ್ದರು.

ಮುಂಬರುವ ಟಿ20 ವಿಶ್ವಕಪ್​ ದೃಷ್ಟಿಯಿಂದ ಅನುಭವಿ ಹಾಗೂ ಹೆಚ್ಚು ಯುವ ಆಟಗಾರರಿಗೆ ತಂಡದಲ್ಲಿ ಮಣೆ ಹಾಕಲಾಗಿದೆ. ಜೂನ್​ 26 ರಿಂದ ಜುಲೈ 3 ರವರೆಗೆ ಗ್ರೇನಡಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಸರಣಿ ನಡೆದರೆ, ಇದಕ್ಕೂ ಮೊದಲು ಸೇಂಟ್​ ಲೂಸಿಯಾದಲ್ಲಿ 2 ಟೆಸ್ಟ್​ ಪಂದ್ಯಗಳು ನಡೆಯಲಿವೆ.

ಬಳಿಕ ಜುಲೈ 9 ರಿಂದ 16 ರವರೆಗೆ ಸೇಂಟ್​ ಲೂಸಿಯಾದಲ್ಲಿ ಆಸ್ಟ್ರೆಲಿಯಾ ಎದುರು 5 ಪಂದ್ಯಗಳ ಟಿ20 ಸರಣಿ ನಡೆದರೆ, ಬಳಿಕ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ನಂತರ ಜುಲೈ 27 ರಿಂದ ಆಗಸ್ಟ್​ 3 ರವರೆಗೆ ಪಾಕಿಸ್ತಾನ ಎದುರು ಚುಟುಕು ಕ್ರಿಕೆಟ್​ ಸರಣಿ, ಜಮೈಕಾದಲ್ಲಿ 2 ಟೆಸ್ಟ್​ ಪಂದ್ಯಗಳು ನಡೆಯಲಿವೆ. ವೆಸ್ಟ್​ ಇಂಡೀಸ್​ ತಂಡ ತವರಿನಲ್ಲಿ ಎರಡು ತಿಂಗಳ ಅಂತರದಲ್ಲಿ 4 ಟೆಸ್ಟ್​, 3 ಏಕದಿನ ಹಾಗೂ 15 ಟಿ20 ಪಂದ್ಯಗಳನ್ನಾಡಲಿದೆ.

ತಂಡ: ಕೈರಾನ್​ ಪೊಲ್ಲಾರ್ಡ್​ (ನಾಯಕ), ನಿಕೋಲಸ್​ ಪೂರನ್​, ಫ್ಯಾಬಿಯನ್ ಅಲೆನ್​, ಡ್ವೇನ್​ ಬ್ರಾವೊ, ಶೇಲ್ಡನ್​ ಕಾಟ್ರೆಲ್​, ಫಿಡೆಲ್​ ಎಡ್ವರ್ಡ್ಸ್​, ಆಂಡ್ರೆ ಫ್ಲೆಚರ್​, ಕ್ರಿಸ್​ ಗೇಲ್​, ಶಿಮ್ರೋನ್​ ಹೆಟ್ಮೆಯರ್​, ಜೇನಸ್​ ಹೋಲ್ಡರ್​, ಅಕೀಲ್​ ಹೊಸಿನ್​, ಎವಿನ್​ ಲೆವಿಸ್​, ಒಬೆಕ್​ ಮೆಕೊ, ಆಂಡ್ರೆ ರಸೆಲ್​, ಲಿಂಡ್ಲೆ ಸಿಮ್ಮನ್ಸ್​, ಕೆವಿನ್​ ಸಿನ್​ಕ್ಲೈರ್​, ಒಶಾನೆ ಥಾಮಸ್​, ಹೇಡೆನನ್​ ವಾಲ್ಷ್​ ಜೂನಿಯರ್​.