ಕ್ರೀಡೆ

ಬೆಂಗಳೂರು ಕಾಲ್ತುಳಿತ ಪ್ರಕರಣ: ನೈತಿಕ ಹೊಣೆ ಹೊತ್ತು ಕೆಎಸ್​ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ! Chinnaswamy stadium stampede

Chinnaswamy stadium stampede : ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಕಾರ್ಯದರ್ಶಿ ಎ. ಶಂಕರ್​ ಮತ್ತು ಖಜಾಂಚಿ ಇ.ಎಸ್​. ಜಯರಾಮ್​ ರಾಜೀನಾಮೆ ನೀಡಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಶಂಕರ್​ ಮತ್ತು ಖಜಾಂಚಿ, ಕಳೆದ ಎರಡು ದಿನಗಳಲ್ಲಿ ನಡೆದ ಅನಿರೀಕ್ಷಿತ ಮತ್ತು ದುರದೃಷ್ಟಕರ ಘಟನೆಗಳಿಂದಾಗಿ ಮತ್ತು ನಮ್ಮ ಪಾತ್ರವು ಬಹಳ ಸೀಮಿತವಾಗಿದ್ದರೂ, ನೈತಿಕ ಜವಾಬ್ದಾರಿಯಿಂದ, ನಾವು ನಿನ್ನೆ ರಾತ್ರಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇವೆ ಎಂದು ತಿಳಿಸಲು ಬಯಸುತ್ತೇವೆ. ದಿನಾಂಕ 06.06.2025 ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ ಎಂದು ಶಂಕರ್​ ಮತ್ತು ಜಯರಾಮ್​ ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಮಂದಿಯ ತಲೆದಂಡವಾಗಿದೆ. ಬೆಂಗಳೂರು ಪೊಲೀಸ್​ ಆಯ್ತುಕರಾಗಿದ್ದ ದಯಾನಂದ್​ ಅವರನ್ನು ಸಸ್ಪೆಂಡ್​ ಮಾಡಲಾಗಿದೆ. ಅಲ್ಲದೆ, ಡಿಸಿಪಿ, ಎಸಿಪಿ, ಕಬ್ಬನ್​​ಪಾರ್ಕ್​ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು

* ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್

* ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಶ್

* ಕೇಂದ್ರ ವಿಭಾಗದ ಡಿಸಿಪಿ ಶೇಖರ್

* ಕಬ್ಬನ್ ಪಾಕ್೯ ಎಸಿಪಿ ಬಾಲಕೃಷ್ಣ

* ಕಬ್ಬನ್ ಪಾರ್ಕ್ ಇನ್ಸ್‌ಪೆಕ್ಟರ್ ಗಿರೀಶ್ ಮತ್ತು ಸಿಬ್ಬಂದಿ

ನಡೆದಿದ್ದೇನು?

ಮಂಗಳವಾರ (ಜೂನ್​ 03) ಫೈನಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡವನ್ನು ಮಣಿಸಿ, ಬುಧವಾರ (ಜೂನ್​ 04) ಅಹಮದಾಬಾದ್‌ನಿಂದ ತಮ್ಮ ತವರು ಮೈದಾನಕ್ಕೆ ಆರ್​ಸಿಬಿ ತಂಡ ಹಿಂತಿರುಗಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂಬ ಸುದ್ದಿ ಕೇಳಿ ಲಕ್ಷಾಂತರ ಅಭಿಮಾನಿಗಳು ಸ್ಟೇಡಿಯಂಗೆ ಜಮಾಯಿಸಿದರು. ಇತ್ತ ಸರ್ಕಾರದಿಂದ ವಿಧಾನಸೌಧದ ಮೆಟ್ಟಿಲುಗಳಲ್ಲಿ ಆರ್​ಸಿಬಿ ತಂಡ ಸನ್ಮಾನ ಸ್ವೀಕರಿಸಿದರೆ, ಅತ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಘೋರ ದುರಂತ ಸಂಭವಿಸಿತು.

ಒಂದೇ ಕಡೆ ಲಕ್ಷಾಂತರ ಮಂದಿ ಜಮಾಯಿಸಿದ್ದರು. ಅಲ್ಲದೆ, ಯಾವುದೇ ಪೂರ್ವ ಸಿದ್ಧತೆ ಇರಲಿಲ್ಲ. ಸ್ಥಳದಲ್ಲಿ ಮೆಡಿಕಲ್​ ವ್ಯವಸ್ಥೆಯು ಇರಲಿಲ್ಲ. ಸುಮಾರು 2 ಲಕ್ಷ ಅಭಿಮಾನಿಗಳು ಜಮಾಯಿಸಿದ್ದರು ಎನ್ನಲಾಗಿದೆ. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಐಪಿಎಲ್​ ಇತಿಹಾಸದಲ್ಲೇ ಇದೊಂದು ಕರಾಳ ಘಟನೆಯಾಗಿದೆ. ಐಪಿಎಲ್​ಗೆ ಇದೊಂದು ಕಪ್ಪು ಚುಕ್ಕಿ ಎಂದರೆ ತಪ್ಪಾಗಲಾರದು. ಈ ಘಟನೆಯ ಬಗ್ಗೆ ಕೇಳಿ ಸಚಿನ್​, ಅನೀಲ್​ ಕುಂಬ್ಳೆ ಸೇರಿದಂತೆ ಅನೇಕ ದಿಗ್ಗಜರು ಕೂಡ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿರಾಟ್​ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್​ ಸಹ ಸಂತಾಪ ಸೂಚಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹ ಸಂತಾಪ ವ್ಯಕ್ತಪಡಿಸಿದೆ. ಅಲ್ಲದೆ, ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಸಹ ಘೋಷಿಸಿದೆ. ಅದೇ ರೀತಿ, ಸಿಎಂ ಸಿದ್ದರಾಮಯ್ಯ, ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದರೊಂದಿಗೆ ಆರ್​ಸಿಬಿ ಮ್ಯಾನೇಜ್​ಮೆಂಟ್​ ಮೂಲ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದೆ.