ಬ್ರಿಸ್ಬೇನ್: ಆರ್. ಅಶ್ವಿನ್ ಭಾರತ ಪರ ಅಂತಾರಾಷ್ಟ್ರೀಯ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಬಳಿಕ 2ನೇ ಗರಿಷ್ಠ ವಿಕೆಟ್ ಸಾಧಕ ಎನಿಸಿದ್ದಾರೆ. 106 ಟೆಸ್ಟ್ಗಳಲ್ಲಿ 537 ವಿಕೆಟ್ ಕಬಳಿಸಿರುವ ಅವರು, ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 765 ವಿಕೆಟ್ ಸಂಪಾದಿಸಿದ್ದಾರೆ. ಜತೆಗೆ 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡದ ಸದಸ್ಯರೂ ಆಗಿದ್ದಾರೆ.
ಮುತ್ತಯ್ಯ ಮುರಳೀಧರನ್ (67) ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ 2ನೇ ಗರಿಷ್ಠ 5 ವಿಕೆಟ್ ಗೊಂಚಲು ಪಡೆದ ಶೇನ್ ವಾರ್ನ್ (37) ದಾಖಲೆ ಸರಿಗಟ್ಟಿರುವ ಅಶ್ವಿನ್, 11 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆಯನ್ನು ಮುರಳೀಧರನ್ ಜತೆಗೆ ಹಂಚಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 250, 300, 350 ವಿಕೆಟ್ಗಳನ್ನು ಅತಿವೇಗವಾಗಿ ಪಡೆದ ಸಾಧಕರಾಗಿದ್ದಾರೆ. ಭಾರತ ಪರ 50ರಿಂದ 500 ವಿಕೆಟ್ಗಳನ್ನು ಅತಿವೇಗವಾಗಿ ಪಡೆದ ಬೌಲರ್ ಆಗಿದ್ದಾರೆ. ಒಂದೇ ಟೆಸ್ಟ್ನಲ್ಲಿ ಶತಕ, 5 ವಿಕೆಟ್ ಗೊಂಚಲು ಪಡೆದ ಸಾಧನೆಯನ್ನು 4 ಬಾರಿ ಸಾಧಿಸಿರುವ ಏಕೈಕ ಭಾರತೀಯರಾಗಿದ್ದಾರೆ.
3 ಸಾವಿರ ರನ್ ಮತ್ತು 500 ವಿಕೆಟ್ ಪಡೆದ ವಿಶ್ವದ ಕೇವಲ 3 ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದಾರೆ. ಭಾರತದಲ್ಲಿ ಗರಿಷ್ಠ (383) ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಎಡಗೈ ಬ್ಯಾಟರ್ಗಳನ್ನು ಗರಿಷ್ಠ ಬಾರಿ ಔಟ್ (268) ಔಟ್ ಮಾಡಿದ ಬೌಲರ್ ಆಗಿದಾರೆ. ಬೆನ್ ಸ್ಟೋಕ್ಸ್ (13), ಡೇವಿಡ್ ವಾರ್ನರ್ (11) ಅಶ್ವಿನ್ಗೆ ಗರಿಷ್ಠ ಬಾರಿ ವಿಕೆಟ್ ಒಪ್ಪಿಸಿದ ಬ್ಯಾಟರ್ಗಳಾಗಿದ್ದಾರೆ. 25 ಬಾರಿ ಸರಣಿಯೊಂದರಲ್ಲಿ 25ಕ್ಕಿಂತ ಅಧಿಕ ವಿಕೆಟ್ ಕಬಳಿಸಿರುವ ಏಕೈಕ ಬೌಲರ್ ಆಗಿದ್ದಾರೆ. ಅಶ್ವಿನ್ ತವರೂರು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲೇ (36) ಸರ್ವಾಧಿಕ ವಿಕೆಟ್ ಕಬಳಿಸಿದ್ದಾರೆ.