ಕ್ರೀಡೆ

5 ರನ್​ಗೆ ವಿರಾಟ್ ಔಟ್​! ಶೀಘ್ರ ವಿಕೆಟ್​ ಪತನಕ್ಕೆ ಕೊಹ್ಲಿಯ ಈ ಬಿಗ್​ ಮಿಸ್ಟೆಕ್​ ಕಾರಣ: ಚೇತೇಶ್ವರ್​ ಪೂಜಾರ

ಪರ್ತ್​: ಇಂದು (ನ.22) ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಪರ್ತ್‌ನಲ್ಲಿ ಆರಂಭವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್​ ಇಂಡಿಯಾ ಮೊದಲ ಇನ್ನಿಂಗ್ಸ್​ ಅಂತ್ಯಕ್ಕೆ ಕೇವಲ 150ರನ್ ಗಳಿಸಲಷ್ಟೇ ಶಕ್ತವಾಯಿತು. ಆಲ್​ರೌಂಡರ್​ ನಿತೀಶ್ ರೆಡ್ಡಿ, ಇನ್ನಿಂಗ್ಸ್‌ನಲ್ಲಿ 41 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದರು.

ಚರ್ಚೆಗೆ ಗ್ರಾಸ

ಆಸ್ಟ್ರೇಲಿಯಾ ಪರವಾಗಿ ಜೋಶ್​ ಹ್ಯಾಸಲ್​ವುಡ್ 4 ವಿಕೆಟ್ ಕಬಳಿಸಿದರು. ಪಂದ್ಯದ ಆರಂಭದಿಂದಲೂ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿತು. ಭಾರತದ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಖಾತೆ ತೆರೆಯದೆ ಪೆವಿಲಿಯನ್​ನತ್ತ ಸಾಗಿದರೆ​. ದೇವದತ್ ಪಡಿಕ್ಕಲ್ ಶೂನ್ಯಕ್ಕೆ ಔಟಾದರು. ಇನ್ನು ಕಣ್ಣು ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಮೇಲಿತ್ತು. ಮೈದಾನದಲ್ಲಿ ಅಬ್ಬರಿಸಬೇಕಿದ್ದ ಕಿಂಗ್ ಕೊಹ್ಲಿ, ಕೇವಲ ಐದು ರನ್​ ಗಳಿಸುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ಸದ್ಯ ಈ ವಿಷಯ ಮಾಜಿ ಕ್ರಿಕೆಟಿಗರ ಚರ್ಚೆಗೆ ಗ್ರಾಸವಾಗಿದೆ.

ಮಾಡಿಕೊಂಡ ತಪ್ಪೇನು

ವಿರಾಟ್​ ಪ್ರದರ್ಶನ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಮ್ಯಾನೇಜ್​ಮೆಂಟ್​, ಈ ಪಂದ್ಯಗಳಲ್ಲಾದರೂ ಅವರು ಹೆಚ್ಚುವರಿ ರನ್​ಗಳನ್ನು ಗಳಿಸಬಹುದು ಎಂಬ ಭರವಸೆಯಲ್ಲಿದ್ದರು. ಆದರೆ, ಇಂದಿನ ಪಂದ್ಯದಲ್ಲಿ ಅದು ಈಡೇರಲಿಲ್ಲ. ಇನ್ನು ಆಸ್ಟ್ರೇಲಿಯಾ ಬೌಲರ್​ಗಳ ವಿರುದ್ಧ ಬ್ಯಾಟಿಂಗ್​ಗೆ ಬಂದ ವಿರಾಟ್​, ಎಡವಿದ್ದೆಲ್ಲಿ? ಮಾಡಿಕೊಂಡ ತಪ್ಪೇನು ಎಂಬುದನ್ನು ಚೇತೇಶ್ವರ್​ ಪೂಜಾರ ವಿವರಿಸಿದ್ದಾರೆ. ಒಂದೇ ಒಂದು ಸಣ್ಣ ತಪ್ಪು ಅವರ ವಿಕೆಟ್​ ಪತನವಾಗಲು ಕಾರಣವಾಯಿತು ಎಂದು ಪೂಜಾರ ತಿಳಿಸಿದ್ದಾರೆ.

ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ

"ಜೋಶ್​ ಹ್ಯಾಸಲ್​ವುಡ್ ಬೌಲಿಂಗ್​ ವೇಳೆ ವಿರಾಟ್​ ಕ್ರೀಸ್​ಗೆ ಅಂಟಿ ನಿಲ್ಲಬೇಕಿತ್ತೇ ವಿನಃ ಹೊರಗೆ ಬಂದು ಬ್ಯಾಟ್ ಬೀಸಬಾರದಿತ್ತು. ಬರುವ ಬಾಲ್​ ಪುಟಿದೇಳುವ ಸಾಧ್ಯತೆಗಳು ಹೆಚ್ಚಿವೆ ಎಂಬುದು ಅವರಿಗೆ ಗೊತ್ತಿತ್ತು. ಆದರೆ, ಆ ಕ್ಷಣದಲ್ಲಿ ಕೊಹ್ಲಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಬೌನ್ಸ್​ ಹಾಗೂ ಬ್ಯಾಟಿಂಗ್ ಶೈಲಿಯನ್ನು ಅರಿತಿದ್ದ ಜೋಶ್​, ಅದಕ್ಕೆ ತಕ್ಕಂತೆ ಬಾಲ್​ ಎಸೆದು, ಬಹುಮುಖ್ಯ ವಿಕೆಟ್ ಕಬಳಿಸಿದರು. ಇದನ್ನು ವಿರಾಟ್ ಸುಲಭವಾಗಿ ನಿಭಾಯಿಸಬಹುದಿತ್ತು. ಆದರೆ, ಅಷ್ಟರೊಳಗೆ ಬಾಲ್​ ಬಂದಿದ್ದೇ ಪತನಕ್ಕೆ ಕಾರಣವಾಯಿತು" ಎಂದು ಹೇಳಿದ್ದಾರೆ,(ಏಜೆನ್ಸೀಸ್).