ರಾಜ್ಕೋಟ್: ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ನಡುವೆಯೂ ಭಾರತ ಟೆಸ್ಟ್ ತಂಡಕ್ಕೆ ಪುನರಾಗಮನ ಕಾಣದಿರುವ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ, ಭಾರತ-ಇಂಗ್ಲೆಂಡ್ 3ನೇ ಟೆಸ್ಟ್ ನಡೆಯುತ್ತಿರುವ ನಿರಂಜನ್ ಷಾ ಸ್ಟೇಡಿಯಂನಿಂದ ಕೇವಲ 32 ಕಿಲೋಮೀಟರ್ ದೂರದಲ್ಲಿರುವ ಸನೋಸರ ಕ್ರಿಕೆಟ್ ಗ್ರೌಂಡ್ನಲ್ಲಿ ಬಿರುಸಿನ ಶತಕ ಸಿಡಿಸುವ ಮೂಲಕ ಆಯ್ಕೆಗಾರರಿಗೆ ದಿಟ್ಟ ಉತ್ತರ ನೀಡಿದ್ದಾರೆ. ತನ್ನನ್ನು ಮತ್ತೆ ಆಯ್ಕೆಗೆ ಪರಿಗಣಿಸುವಂತೆಯೂ ಅವರು ಈ ಮೂಲಕ ಸಂದೇಶ ರವಾನಿಸಿದ್ದಾರೆ.
36 ವರ್ಷದ ಪೂಜಾರ ಮಣಿಪುರ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ಪರ 105 ಎಸೆತಗಳಲ್ಲೇ 12 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 108 ರನ್ ಸಿಡಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರ 63ನೇ ಮತ್ತು ಹಾಲಿ ರಣಜಿ ಟ್ರೋಫಿಯಲ್ಲಿ 3ನೇ ಶತಕವಾಗಿದೆ.
ಇದು ರಣಜಿಯಲ್ಲಿ ಅವರ ಒಟ್ಟಾರೆ 24ನೇ ಶತಕವಾಗಿದೆ. ಅವರು 103 ಟೆಸ್ಟ್ಗಳಲ್ಲಿ 19 ಶತಕ ಸಿಡಿಸಿದ್ದಾರೆ. ಸಚಿನ್ ತೆಂಡುಲ್ಕರ್, ಸುನೀಲ್ ಗಾವಸ್ಕರ್ (ತಲಾ 81) ಮತ್ತು ರಾಹುಲ್ ದ್ರಾವಿಡ್ (68) ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಪೂಜಾರಗಿಂತ ಅಧಿಕ ಶತಕ ಸಿಡಿಸಿರುವ ಭಾರತೀಯರಾಗಿದ್ದಾರೆ.