Cheteshwar Pujara: ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಆಧಾರ ಸ್ಥಂಬದಂತಿದ್ದ ಚೇತೇಶ್ವರ ಪೂಜಾರ ಭಾನುವಾರ (ಆಗಸ್ಟ್ 24) ಎಲ್ಲಾ ಮಾದರಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ವಿಷಯ ಬಹಿರಂಗಪಡಿಸಿರುವ ಪೂಜಾರ, ಸುದೀರ್ಘ ವೃತ್ತಿಜೀವನದಲ್ಲಿ ತಮ್ಮನ್ನು ಬೆಂಬಲಿಸಿದ ಸಹ ಆಟಗಾರರು, ತರಬೇತುದಾರರು ಮತ್ತು ಇತರರಿಗೆ ಸದಾ ಋಣಿಯಾಗಿರುತ್ತೇನೆ ಎಂದು ತಿಳಿಸಿದ್ದಾರೆ.
2025 ರಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಪೂಜಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂಬ ವದಂತಿಗಳು ದಟ್ಟವಾಗಿದ್ದವು, ಆದರೆ, ಆಯ್ಕೆ ಸಮಿತಿ ಭವಿಷ್ಯದ ದೃಷ್ಠಿಯಿಂದ ಕಿರಿಯ ಆಟಗಾರರತ್ತ ಒಲವು ತೋರುತ್ತಿರುವುದರಿಂದ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಭಾರತದ ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿದ ನಂತರ, ಪೂಜಾರ ರಾಷ್ಟ್ರೀಯ ತಂಡಕ್ಕೆ ಮರಳುವುದು ಕಷ್ಟಸಾಧ್ಯ ಎಂದೇ ಹೇಳಲಾಗಿತ್ತು.
ಪೂಜಾರ 2023 ರ ಕೆನ್ನಿಂಗ್ಟನ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು, ಈ ನಡುವೆ ಟೀಮ್ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನದ ಹೊರತಾಗಿಯೂ ಪೂಜಾರ ಆಯ್ಕೆಯ ಬಗ್ಗೆ ಆಡಳಿತ ಮಂಡಳಿ ಮನಸ್ಸು ಮಾಡಿರಲಿಲ್ಲ.
ರಾಜ್‌ಕೋಟ್ ಎಂಬ ಪಟ್ಟಣದ ಚಿಕ್ಕ ಹುಡುಗನಾಗಿದ್ದಾಗ, ನನ್ನ ಹೆತ್ತವರೊಂದಿಗೆ, ನಾನು ನಕ್ಷತ್ರಗಳನ್ನು ಗುರಿಯಾಗಿಟ್ಟುಕೊಂಡು ಹೊರಟೆ, ಮುಂದೊಂದು ದಿನ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಬೇಕೆಂದು ಕನಸು ಕಂಡಿದ್ದೆ. ಈ ಆಟವು ನನಗೆ ಅಮೂಲ್ಯ ಅವಕಾಶ, ಅನುಭವ, ಪ್ರೀತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ರಾಜ್ಯ ಮತ್ತು ಈ ಮಹಾನ್ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶ ನೀಡಿದಕ್ಕಾಗಿ ಧನ್ಯವಾಧಗಳನ್ನು ತಿಳಿಸಿದ್ದಾರೆ.
ಭಾರತ ತಂಡದ ಜೆರ್ಸಿ ಧರಿಸುವುದು, ರಾಷ್ಟ್ರಗೀತೆ ಹಾಡುವುದು ಮತ್ತು ನಾನು ಪ್ರತಿ ಬಾರಿ ಮೈದಾನಕ್ಕೆ ಕಾಲಿಟ್ಟಾಗಲೂ ತಂಡದ ಗೆಲುವಿಗೆ ನನ್ನ ಕೈಲಾದಷ್ಟು ಪ್ರಯತ್ನಿಸಿದ್ದನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಅಸಾಧ್ಯ. ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು, ಕೃತಜ್ಞತೆಯಿಂದ ನಾನು ಎಲ್ಲಾ ರೀತಿಯ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ.
ನನ್ನ ಕ್ರಿಕೆಟ್ ವೃತ್ತಿಜೀವನದುದ್ದಕ್ಕೂ ಅವಕಾಶ ಮತ್ತು ಬೆಂಬಲ ನೀಡಿದ ಬಿಸಿಸಿಐ ಮತ್ತು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇಷ್ಟು ವರ್ಷಗಳ ನಾನು ಪ್ರತಿನಿಧಿಸಿದ ಎಲ್ಲಾ ತಂಡಗಳು, ಫ್ರಾಂಚೈಸಿಗಳು ಮತ್ತು ಕೌಂಟಿಗಳಿಗೆ ನಾನು ಸಮಾನವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಮಾರ್ಗದರ್ಶಕರ, ತರಬೇತುದಾರರ ಮತ್ತು ಆಧ್ಯಾತ್ಮಿಕ ಗುರುಗಳ ಅಮೂಲ್ಯ ಮಾರ್ಗದರ್ಶನವಿಲ್ಲದೆ ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ, ಅವರೆಲ್ಲರಿಗು ನಾನು ಯಾವಾಗಲೂ ಋಣಿಯಾಗಿರುತ್ತೇನೆ.
ನಮ್ಮ ಎಲ್ಲಾ ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ, ನೆಟ್ ಬೌಲರ್‌ಗಳು, ವಿಶ್ಲೇಷಕರು, ಲಾಜಿಸ್ಟಿಕ್ಸ್ ತಂಡ, ಅಂಪೈರ್‌ಗಳು, ಗ್ರೌಂಡ್ ಸ್ಟಾಫ್, ಸ್ಕೋರರ್‌ಗಳು, ಮಾಧ್ಯಮ ಸಿಬ್ಬಂದಿ ಮತ್ತು ತೆರೆಮರೆಯಲ್ಲಿ ಅವಿಶ್ರಾಂತವಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
ನನ್ನ ಪ್ರಾಯೋಜಕರು, ಪಾಲುದಾರರು ಮತ್ತು ನಿರ್ವಹಣಾ ತಂಡ, ದಶಕಗಳ ಕಾಲ ನನ್ನ ಮೇಲಿನ ನಿಮ್ಮ ನಿಷ್ಠೆ ಮತ್ತು ನಂಬಿಕೆ ಮತ್ತು ನನ್ನ ಆಫ್-ಫೀಲ್ಡ್ ಚಟುವಟಿಕೆಗಳನ್ನು ನೋಡಿಕೊಳ್ಳುವುದಕ್ಕೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಈ ಆಟ ನನ್ನನ್ನು ಜಗತ್ತಿನಾದ್ಯಂತ ವಿವಿಧ ಸ್ಥಳಗಳಿಗೆ ಕೊಂಡೊಯ್ದಿದ್ದು, ಅಭಿಮಾನಿಗಳ ಬೆಂಬಲ ಯಾವಾಗಲೂ ಸ್ಥಿರವಾಗಿದೆ. ನಾನು ಆಡಿದಲ್ಲೆಲ್ಲಾ ಶುಭಾಶಯಗಳು ಮತ್ತು ಪ್ರೇರಣೆಯಿಂದ ನಾನು ವಿನಮ್ರನಾಗಿದ್ದೇನೆ ಮತ್ತು ಯಾವಾಗಲೂ ಕೃತಜ್ಞನಾಗಿರುತ್ತೇನೆ."
ಈ ಪ್ರಯಾಣವನ್ನು ನಿಜವಾಗಿಯೂ ಸಾರ್ಥಕಗೊಳಿಸಿದ ನನ್ನ ಕುಟುಂಬದ - ನನ್ನ ಪೋಷಕರು, ನನ್ನ ಪತ್ನಿ ಪೂಜಾ, ನನ್ನ ಮಗಳು ಅದಿತಿ; ನನ್ನ ಅತ್ತೆ-ಮಾವ ಮತ್ತು ನನ್ನ ವಿಸ್ತೃತ ಕುಟುಂಬದ ತ್ಯಾಗಗಳು ಮತ್ತು ದೃಢ ಬೆಂಬಲವಿಲ್ಲದೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ ಮತ್ತು ಅರ್ಥಪೂರ್ಣವಾಗುತ್ತಿರಲಿಲ್ಲ. ನನ್ನ ಜೀವನದ ಮುಂದಿನ ಹಂತವನ್ನು ನಾನು ಎದುರು ನೋಡುತ್ತಿದ್ದೇನೆ, ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ ಮತ್ತು ಆದ್ಯತೆ ನೀಡುತ್ತೇನೆ. ಎಂದು ಬರೆದುಕೊಂಡಿದ್ದಾರೆ.(ಏಜೆನ್ಸೀಸ್)