ಕ್ರೀಡೆ

ಚೆನ್ನೈ ಸೂಪರ್‌ಕಿಂಗ್ಸ್ ತಂಡದಿಂದ ಕುಟುಂಬ ಸದಸ್ಯರಿಗೆ ನಿರ್ಬಂಧ

ಚೆನ್ನೈ: ಐಪಿಎಲ್ ಟೂರ್ನಿಗೆ ಕುಟುಂಬದ ಸದಸ್ಯರನ್ನು ಕರೆದೊಯ್ಯಲು ಆಟಗಾರರಿಗೆ ಬಿಸಿಸಿಐ ಅವಕಾಶ ಕಲ್ಪಿಸಿದೆ. ಆದರೆ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಕುಟುಂಬ ಸದಸ್ಯರ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎನ್ನಲಾಗಿದೆ. ಇದಲ್ಲದೆ ಹೆಚ್ಚಿನ ತಂಡಗಳ ಆಟಗಾರರು ಕುಟುಂಬ ಸದಸ್ಯರನ್ನು ಯುಎಇಗೆ ಕರೆದೊಯ್ಯಲು ಒಲವು ಹೊಂದಿಲ್ಲ ಎನ್ನಲಾಗಿದೆ.

ಹೆಚ್ಚಿನ ಆಟಗಾರರು 3-5 ವರ್ಷದ ಮಕ್ಕಳನ್ನು ಹೊಂದಿದ್ದು, ಅವರ ಜತೆ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ ಎನ್ನಲಾಗಿದೆ. ಸಿಎಸ್‌ಕೆ ತಂಡ ಆಗಸ್ಟ್ 19ರಂದು ಚೆನ್ನೈನಲ್ಲಿ ಒಗ್ಗೂಡಲಿದ್ದು, ಬಳಿಕ ಬಾಡಿಗೆ ವಿಮಾನದ ಮೂಲಕ ಆಗಸ್ಟ್ 22ರಂದು ದುಬೈಗೆ ಪ್ರಯಾಣಿಸಲಿದೆ ಎನ್ನಲಾಗಿದೆ. ದುಬೈನ ಐತಿಹಾಸಿಕ ಬುರ್ಜ್ ಖಲಿಾದ ಸಮೀಪದ ಪಂಚತಾರಾ ಹೋಟೆಲ್‌ನಲ್ಲಿ ಸಿಎಸ್‌ಕೆ ತಂಡ ನೆಲೆಸಲಿದೆ. ಹೋಟೆಲ್‌ನ 2-3 ಮಹಡಿಗಳನ್ನು ಈಗಾಗಲೆ ಬುಕ್ ಮಾಡಿಕೊಂಡಿದೆ ಎನ್ನಲಾಗಿದೆ.

ರಾಂಚಿಯಲ್ಲಿ ಧೋನಿ ಅಭ್ಯಾಸ ಆರಂಭ

ಚೆನ್ನೈ ಸೂಪರ್‌ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್ ಟೂರ್ನಿಗೆ ಪೂರ್ವಭಾವಿಯಾಗಿ ತವರು ನಗರ ರಾಂಚಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ. 2019ರ ಏಕದಿನ ವಿಶ್ವಕಪ್ ಸೆಮಿೈನಲ್ ಪಂದ್ಯದ ಬಳಿಕ ಧೋನಿ ಯಾವುದೇ ಸ್ಪರ್ಧಾತ್ಮಕ ಪಂದ್ಯವಾಡಿಲ್ಲ. ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದ ಒಳಾಂಗಣದಲ್ಲಿ ಬೌಲಿಂಗ್ ಮೆಷಿನ್ ಎದುರು 39 ವರ್ಷದ ಧೋನಿ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ಮಾರ್ಚ್‌ನಲ್ಲಿ ಧೋನಿ ಐಪಿಎಲ್ ಸಿದ್ಧತೆಯ ಅಂಗವಾಗಿ ಚೆನ್ನೈನಲ್ಲಿ ಸಿಎಸ್‌ಕೆ ತಂಡದ ಶಿಬಿರದಲ್ಲಿ ಭಾಗಿಯಾಗಿದ್ದರು. ಬಳಿಕ ಟೂರ್ನಿ ಮುಂದೂಡಿಕೆಯಾದ ಬೆನ್ನಲ್ಲೇ ತವರಿಗೆ ಮರಳಿದ್ದರು.