ಕ್ರೀಡೆ

ಬಹುಶಃ ಪಾಕ್​ ವಿರುದ್ಧ ಇದೇ ಕೊನೆ ಟೂರ್ನಿಯಾಗಬಹುದು; Champions Trophy ಹೈವೋಲ್ಟೇಜ್​ ಪಂದ್ಯಕ್ಕೂ ಮುನ್ನ ಮಾಜಿ ಆಟಗಾರನ ಹೇಳಿಕೆ ವೈರಲ್

ನವದೆಹಲಿ: ಮಿನಿ ವಿಶ್ವಕಪ್ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್ ಟ್ರೋಫಿ (Champions Trophy) ಈಗಾಗಲೇ ಆರಂಭವಾಗಿದ್ದು, ಈಗಾಗಲೇ ಮೂರು ಪಂದ್ಯಗಳು ಮುಕ್ತಾಯಗೊಂಡಿವೆ. ಟೂರ್ನಿಯ ಐದನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯವನ್ನು ಕಣ್​ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಉಭಯ ದೇಶಗಳ ದ್ವಿಪಕ್ಷೀಯ ಸರಣಿಗಳನ್ನು ಆಡಿ ತುಂಬಾ ವರ್ಷಗಳಾಗಿದೆ. ಉಭಯ ದೇಶಗಳು ಐಸಿಸಿ ಮತ್ತು ಏಷ್ಯಾಕಪ್​ನಂತಹ ಟೂರ್ನಿಗಳು ನಡೆದಾಗ ಮಾತ್ರ ಮುಖಾಮುಖಿಯಾಗಿದೆ. ಇದೀಗ ಚಾಂಪಿಯನ್ಸ್ ಟ್ರೋಫಿಯ (Champions Trophy) ಐದನೇ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಕುರಿತಾಗಿ ಪಾಕ್ ಮಾಜಿ ಆಟಗಾರ ರಶೀದ್ ಲತೀಫ್ ನೀಡಿರುವ ಹೇಳಿಕೆ ಸಖತ್​ ವೈರಲ್ ಆಗುತ್ತಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಶೀದ್, ನನ್ನ ಪ್ರಕಾರ ವಿರಾಟ್ ಹಾಗೂ ರೋಹಿತ್​ಗೆ ಇದು ಕಡೆಯ ಐಸಿಸಿ ಟೂರ್ನಮೆಂಟ್ ಎಂದು ನಾನು ಭಾವಿಸುತ್ತೇನೆ. ನೀವು ಭಾರತದ ಬ್ಯಾಟಿಂಗ್ ಲೈನ್‌ಅಪ್ ಅನ್ನು ನೋಡಿದರೆ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಅವರಂತಹ ಅನೇಕ ಪ್ರತಿಭಾವಂತ ಯುವ ಆಟಗಾರರನ್ನು ನೋಡಬಹುದಾಗಿದೆ. ಅವರು ಪೆಕಿಂಗ್ ಆರ್ಡರ್‌ನಲ್ಲಿ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಅವರು ಫೈನಲ್‌ನಲ್ಲಿ ಭೇಟಿಯಾಗದ ಹೊರತು ಪಾಕಿಸ್ತಾನವನ್ನು ಎದುರಿಸುವುದು ಅವರ ಕೊನೆಯ ಬಾರಿ ಎಂದು ನಾನು ಭಾವಿಸುತ್ತೇನೆ.

ಪ್ರಸ್ತುತ ಭಾರತ ತಂಡವನ್ನು ನೋಡಿದರೆ ಶುಭಮನ್ ಗಿಲ್​ ಟ್ರಂಪ್ ಕಾರ್ಡ್​ನಂತೆ ಕಾಣುತ್ತಿದ್ದು, ಮುಂದಿನ ಉತ್ತತಾಧಿಕಾರಿ ಅವರೇ ಎಂದು ನಾನು ಭಾವಿಸುತ್ತೇನೆ. ಆತ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಖಚಿತವಾಗಿ ಪರಿಣಾಮ ಬೀರುತ್ತಾನೆ ಎಂಬ ಗ್ಯಾರಂಟಿ ನನಗಿದೆ. ಅದೇ ರೀತಿ ರೋಹಿತ್​ ಶರ್ಮ ಕಂಡರೆ ನನಗೆ ಭಯವಾಗುತ್ತದೆ. ಆತ ನಿರ್ಭೀತಿಯಿಂದ ಆಡುತ್ತಾನೆ. ಆರಂಭಿಕ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾದರೆ ಮಾತ್ರ ಪಾಕಿಸ್ತಾನಕ್ಕೆ ಪಂದ್ಯದಲ್ಲಿ ಅವಕಾಶ ಸಿಗುತ್ತದೆ ಎಂದು ಮಾಜಿ ಆಟಗಾರ ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್, ಕೊಹ್ಲಿ, ಗಂಭೀರ್‌ಗೆ ಮಹತ್ವದ ಟೂರ್ನಿ!

ವೃತ್ತಿಜೀವನದ ಸಂಧ್ಯಾಕಾಲದತ್ತ ಹೆಜ್ಜೆ ಹಾಕುತ್ತಿರುವ ಟೀಮ್ ಇಂಡಿಯಾ ಬ್ಯಾಟರ್ ಗಳಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಗೆ ಇದು ಮಹತ್ವದ ಟೂರ್ನಿ ಎನಿಸಿದೆ. ಅಲ್ಲದೆ ಮುಖ್ಯ ಕೋಚ್ ಹುದ್ದೆಗೇರಿದ ಕಳೆದ 7 ತಿಂಗಳ ಅವಧಿಯಲ್ಲಿ ಹೇಳಿಕೊಳ್ಳುವಂಥ ಸಾಧನೆಯನ್ನೇನೂ ತೋರದಿರುವ ಗೌತಮ್ ಗಂಭೀರ್ ಪಾಲಿಗೂ ಇದು ನಿರ್ಣಾಯಕ ಟೂರ್ನಿಯಾಗಿದೆ.

ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ತೀವ್ರ ವೈಫಲ್ಯ ಅನುಭವಿಸಿದ್ದ ಕೊಹ್ಲಿ, ರೋಹಿತ್ ಇತ್ತೀಚೆಗೆ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಲಯಕ್ಕೆ ಮರಳಿರುವ ಲಕ್ಷಣ ತೋರಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲೂ ಈ ಲಯ ಕಾಯ್ದುಕೊಂಡರೆ ಅವರಿಬ್ಬರ ಭವಿಷ್ಯ ಸ್ವಲ್ಪಮಟ್ಟಿಗೆ ಭದ್ರವೆನಿಸಲಿದೆ. ಇನ್ನು ಭಾರತ ತಂಡ ಕನಿಷ್ಠ ಟೂರ್ನಿಯ ಫೈನಲ್‌ಗೇರದಿದ್ದರೆ, ಇದು ರೋಹಿತ್ ಶರ್ಮ ಸಾರಥ್ಯದಲ್ಲಿ ಭಾರತಕ್ಕೆ ಕೊನೇ ಟೂರ್ನಿಯಾಗುವ ಸಾಧ್ಯತೆ ಇದೆ. ಜತೆಗೆ ಕೋಚ್‌ ಆಗಿ ಗಂಭೀರ್ ಭವಿಷ್ಯವೂ ಡೋಲಾಯಮಾನವಾಗಲಿದೆ. ಗಂಭೀರ್‌ಗೆ ಕೋಚ್ ಆಗಿ ಇದು ಮೊದಲ ಐಸಿಸಿ ಟೂರ್ನಿಯೂ ಆಗಿದೆ.