Champions Trophy : ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಅಂತಿಮ ಹಂತಕ್ಕೆ ಬಂದಿದೆ. ಒಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಮಾತ್ರ ಬಾಕಿ ಇದೆ. ನಿನ್ನೆ (ಮಾ.04) ನಡೆದ ಮೊದಲ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಟೀಮ್ ಇಂಡಿಯಾ ಫೈನಲ್ ತಲುಪಿದೆ. ಇಂದು ನಡೆಯಲಿರುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಸೆಣಸಾಡಲಿವೆ. ಈ ಪಂದ್ಯದಲ್ಲಿ ಗೆದ್ದವರು ಮಾರ್ಚ್ 9ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಟ್ರೋಫಿಗಾಗಿ ಪೈಪೋಟಿ ನಡೆಸಲಿದೆ.
ಭಾರತ ಫೈನಲ್ ತಲುಪಿರುವುದು ಭಾರತೀಯರಿಗೆ ಬಹಳ ಖುಷಿಯ ವಿಚಾರ. ಆದರೆ, ಪಾಕಿಸ್ತಾನಕ್ಕೆ ಮಾತ್ರ ನುಂಗಲಾರದ ತುತ್ತಾಗಿದೆ. ಕಾರಣವೇನೆಂದರೆ, ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜನೆ ಮಾಡಿರುವುದು ಪಾಕಿಸ್ತಾನ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಫೈನಲ್ ಪಂದ್ಯ ಪಾಕಿಸ್ತಾನದಲ್ಲೇ ನಡೆಯುವುದಿಲ್ಲ. ಬದಲಿಗೆ ದುಬೈನಲ್ಲಿ ನಡೆಯಲಿದೆ. ಟೂರ್ನಿಯನ್ನು ಆಯೋಜಿಸಿರುವ ಪಾಕಿಸ್ತಾನವೇ ಇದೀಗ ದುಬೈ ಬಂದು ಫೈನಲ್ ಪಂದ್ಯವನ್ನು ನಡೆಸಿಕೊಡಬೇಕಿದೆ. ಇದಕ್ಕಿಂತ ದೊಡ್ಡ ದುರಾದೃಷ್ಟ ಇನ್ನೊಂದಿಲ್ಲ ಎಂದು ಹೇಳಬಹುದು.
ಟೂರ್ನಿಯ ಆರಂಭಕ್ಕೂ ಮುನ್ನ ಭಾರತ ತಂಡ ಪಾಕಿಸ್ತಾನಕ್ಕೆ ಬರಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪಟ್ಟು ಹಿಡಿದಿತ್ತು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾತ್ರ ಇದಕ್ಕೆ ಒಪ್ಪಲಿಲ್ಲ. ಭದ್ರತಾ ದೃಷ್ಟಿಯಿಂದ ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವಂತೆ ಐಸಿಸಿ ಮುಂದೆ ಕೇಳಿಕೊಂಡಿತು. ಪಾಕಿಸ್ತಾನ ಮಾತ್ರ ಇದನ್ನು ವಿರೋಧಿಸುತ್ತಾ ಬಂತು. ಆದರೆ, ಐಸಿಸಿ ಒತ್ತಾಯಕ್ಕೆ ಮಣಿದ ಪಾಕ್, ಕೊನೆಗೂ ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿತು. ಅದರಂತೆ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುತ್ತಿವೆ.
ಇದೀಗ ಟೀಮ್ ಇಂಡಿಯಾ ಫೈನಲ್ ತಲುಪಿರುವುದರಿಂದ ಆ ಪಂದ್ಯವೂ ಕೂಡ ದುಬೈನಲ್ಲೇ ನಡೆಯಲಿದೆ. ಹೀಗಾಗಿ ಪಾಕಿಸ್ತಾನಕ್ಕೆ ಭಾರಿ ನಿರಾಸೆ ಉಂಟಾಗಿದೆ. ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸಲು ಪಾಕಿಸ್ತಾನ ಬಯಸಿತ್ತು. ಫೈನಲ್ ಪಂದ್ಯ ಪಾಕ್ನಲ್ಲಿ ನಡೆದರೆ, ಆರ್ಥಿಕವಾಗಿ ಕೊಂಚ ನೆರವಾಗಲಿದೆ ಎಂಬ ಲೆಕ್ಕಾಚಾರವು ಕೂಡ ಪಾಕಿಸ್ತಾನದ್ದಾಗಿತ್ತು. ಆದರೆ, ಈಗ ಪಾಕ್ ಕನಸು ನುಚ್ಚು ನೂರಾಗಿದೆ. ಫೈನಲ್ ಪಂದ್ಯ ದುಬೈನಲ್ಲಿ ನಡೆಯುವುದರಿಂದ ಪಾಕಿಸ್ತಾನವೇ ದುಬೈ ಹೋಗಬೇಕಿದೆ.
ಇನ್ನು ಒಂದು ಸೆಮಿಫೈನಲ್ ಪಂದ್ಯ ಕೂಡ ದುಬೈನಲ್ಲಿ ನಡೆಯಿತು. ಅಲ್ಲದೆ, ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಮೂರು ಲೀಗ್ ಪಂದ್ಯಗಳು ಮಳೆಯಿಂದ ರದ್ದಾದವು. ಇನ್ನು ಭಾರತದ ಎಲ್ಲ ಪಂದ್ಯಗಳು ದುಬೈನಲ್ಲಿ ನಡೆದಿವೆ. ಇದೀಗ ಫೈನಲ್ ಕೂಡ ದುಬೈನಲ್ಲಿ ನಡೆಯಲಿದ್ದು, ಟೂರ್ನಿಯನ್ನು ಆಯೋಜಿಸಿರುವ ಪಾಕಿಸ್ತಾನಕ್ಕೆ ಇದಕ್ಕಿಂತ ಮುಖಭಂಗ ಮತ್ತೊಂದಿಲ್ಲ ಎನ್ನುವಂತಾಗಿದೆ.
ಪಾಕಿಸ್ತಾನದ ಈ ಸ್ಥಿತಿಯನ್ನು ನೋಡಿ ನೆಟ್ಟಿಗರೆಲ್ಲ ಪಾಕ್ ತಂಡವನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಿದೆ. ಆದರೆ, ಪಾಕಿಸ್ತಾನವೇ ಚಾಂಪಿಯನ್ಸ್ ಟ್ರೋಫಿಯಲ್ಲಿಲ್ಲ. ಫೈನಲ್ ಪಂದ್ಯ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ, ಫೈನಲ್ನಲ್ಲಿ ಪಾಕಿಸ್ತಾನ ಇಲ್ಲ. ಇದೀಗ ಭಾರತ ಫೈನಲ್ನಲ್ಲಿದೆ. ಹೀಗಾಗಿ ಫೈನಲ್ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲ್ಲ. ಪಾಕಿಸ್ತಾನ ಅಲ್ಲ ಅಜೀಬ್ಸ್ತಾನ ಎಂದು ನೆಟ್ಟಿಗರೊಬ್ಬರು ಟ್ರೋಲ್ ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)