ಕ್ರೀಡೆ

ಐಪಿಎಲ್​ಗೆ ನಿವೃತ್ತಿ ಹೇಳಿದ ಡ್ವೇನ್ ಬ್ರಾವೋ; ಚೆನ್ನೈ ತಂಡದ ಹೊಸ ಹುದ್ದೆಯಲ್ಲಿ ಮುಂದುವರಿಕೆ!

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಖಾಯಂ ಆಟಗಾರನಾಗಿದ್ದ ಆಲ್​ರೌಂಡರ್ ಡ್ವೇನ್​ ಬ್ರಾವೋ ಇದೀಗ ತನ್ನ ಐಪಿಎಲ್​​ ಆಟಕ್ಕೆ ವಿದಾಯ ಘೋಷಿಸಿದ್ದಾರೆ. ವಿದಾಯದ ನಂತರವೂ ತಂಡದ ಭಾಗವಾಗಿದ್ದು, ಇನ್ನು ಮುಂದೆ ಚೆನ್ನೈ ತಂಡದ ಬೌಲಿಂಗ್ ಕೋಚ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್​ ತಂಡ ತಿಳಿಸಿದೆ.

ಈ ಹಿಂದೆ ತಂಡದ ಬೌಲಿಂಗ್ ಕೋಚ್ ಆಗಿದ್ದ ಲಕ್ಷ್ಮೀಪತಿ ಬಾಲಾಜಿ ಐಪಿಎಲ್​ನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಇದೀಗ ಬಾಲಾಜಿ ಸ್ಥಾನಕ್ಕೆ ಬ್ರಾವೋ ಆಯ್ಕೆ ಮಾಡಲಾಗಿದೆ ಎಂದು ಚೆನ್ನೈ ಪ್ರಾಂಚೈಸಿ ಮೂಲಗಳು ತಿಳಿಸಿವೆ.

ನಾನು ಬೌಲರ್​ಗಳೊಂದಿಗೆ ಸಮಯ ಕಳೆಯಲು ಹೆಚ್ಚು ಇಷ್ಟಪಡುತ್ತೇನೆ. ಹೀಗಾಗಿ ಮುಂದಿನ ಹೊಸ ಪ್ರಯಾಣದ ಬಗ್ಗೆ ಹೆಚ್ಚಿನ ಉತ್ಸಾಹದಿಂದ ಇದ್ದೇನೆ. ಇನ್ನು ಮುಂದೆ ನಾನು ಮಿಡ್-ಆನ್ ಅಥವಾ ಮಿಡ್-ಆಫ್‌ನಲ್ಲಿ ನಿಲ್ಲುವುದಿಲ್ಲ. ಬದಲಾಗಿ ತಂಡದ ಬೌಲರ್​ಗಳ ಜೆತೆಗೆ ಇರಲಿದ್ದೇನೆ ಎಂದು ಡ್ವೇನ್​ ಬ್ರಾವೋ ತಿಳಿಸಿದ್ದಾರೆ.

ವೆಸ್ಟ್​ಇಂಡೀಸ್​ನ ಡ್ವೇನ್ ಬ್ರಾವೋ ಐಪಿಎಲ್​ನಲ್ಲಿ ಈವರೆಗೆ 161 ಪಂದ್ಯಗಳನ್ನು ಆಡಿದ್ದಾರೆ. ಈ ಮೂಲಕ 183 ವಿಕೆಟ್ ಕಬಳಿಸಿದ್ದಾರೆ. ಇದರೊಂದಿಗೆ ಐಪಿಎಲ್​ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದುಕೊಂಡವರಲ್ಲಿ ಬ್ರಾವೋಗೆ ಅಗ್ರಸ್ಥಾನ. ಆಲ್​ರೌಂಡರ್​ ಕೋಟಾದಲ್ಲಿ ತಂಡದ ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡಿರುವ ಬ್ರಾವೋ 130 ಸ್ಟ್ರೈಕ್ ರೇಟ್‌ನಲ್ಲಿ 1560 ರನ್ ಗಳಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​ ತಂಡ ಈವರೆಗೆ ಮೂರು ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ. ಈ ಸಂದರ್ಭದಲ್ಲಿ ಬ್ರಾವೋ ತಂಡದ ಸದಸ್ಯರಾಗಿದ್ದರು. (ಏಜೆನ್ಸೀಸ್)