IND vs PAK: ನಿನ್ನೆ (ಫೆ.23) ನಡೆದ ಪಾಕಿಸ್ತಾನ ಮತ್ತು ಭಾರತ ನಡುವಿನ ಚಾಂಪಿಯನ್ಸ್ ಟ್ರೋಫಿ ಹೈವೋಲ್ಟೇಜ್ ಕದನ ರೋಚಕವಾಗದೆ ಹೋದರೂ, ವಿರಾಟ್ ಕೊಹ್ಲಿ ಶತಕದಾಟ ಮೂಲಕ ಏಕಪಕ್ಷೀಯಾಗಿ ಪಂದ್ಯ ಗೆದ್ದು ಬೀಗಿದ್ದು ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರೀ ಸಂತಸ ಉಂಟುಮಾಡಿತು. ಇದೊಂದು ಪಂದ್ಯ ನೋಡಲು ತೀವ್ರ ಕುತೂಹಲ ವ್ಯಕ್ತಪಡಿಸಿದ್ದ ಕ್ರೀಡಾಭಿಮಾನಿಗಳು, ದುಬೈ ಸ್ಟೇಡಿಯಂನಲ್ಲಿ ದುಬಾರಿ ಹಣ ನೀಡಿ, ತಮ್ಮ ಕುರ್ಚಿ ಕಾಯ್ದಿರಿಸಿದ್ದರು. ಅಂತೆಯೇ ಅಂತಿಮವಾಗಿ ಭಾರತ ಜಯಭೇರಿಯಾಗಿ ಹೊರಹೊಮ್ಮಿದ್ದನ್ನು ಕಣ್ತುಂಬಿಕೊಂಡು ಖುಷಿಪಟ್ಟರು.
ನಿರೀಕ್ಷೆಗೂ ಮೀರಿ ಸ್ಟೇಡಿಯಂ ಸೇರಿದ್ದ ಕ್ರಿಕೆಟ್ ಪ್ರೇಮಿಗಳ ಪೈಕಿ ಖ್ಯಾತ ಸೆಲೆಬ್ರಿಟಿಗಳು ಕೂಡ ದುಬೈ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಚಿತ್ರ ತಾರೆಯರು, ಕ್ರಿಕೆಟ್ ದಿಗ್ಗಜರು ಸೇರಿದಂತೆ ಇತರೆ ಕ್ಷೇತ್ರಗಳ ಜನಪ್ರಿಯ ವ್ಯಕ್ತಿಗಳು ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯವನ್ನು ಸ್ಟೇಡಿಯಂನಲ್ಲಿಯೇ ಕುಳಿತು ವೀಕ್ಷಿಸಿದರು. ಈ ಮೂಲಕ ಟೀಮ್ ಇಂಡಿಯಾಗೆ ತಮ್ಮ ಪ್ರೋತ್ಸಾಹ, ಬೆಂಬಲ ನೀಡಿದರು. ಅಸಲಿಗೆ ಯಾರೆಲ್ಲಾ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಾಜರಿದ್ದರು? ಎಂಬ ಮಾಹಿತಿ ಹೀಗಿದೆ ನೋಡಿ.
ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಅವರ ಪತಿ ಆನಂದ್ ಆಹುಜ, ಟಾಲಿವುಡ್ ದಿಗ್ಗಜ ನಟ ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ಹಾಟ್ ಬ್ಯೂಟಿ ಊರ್ವಶಿ ರೌಟೇಲಾ, 'ಪುಷ್ಪ' ಚಿತ್ರದ ನಿರ್ದೇಶಕ ಸುಕುಮಾರ್ ಹಾಗೂ ಅವರ ಪತ್ನಿ ತಬೀತಾ ಹಂಸಿನಿ ಆಗಮಿಸಿದ್ದರು. ಇವರೊಂದಿಗೆ ವಿಶೇಷವಾಗಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ಹಾರ್ದಿಕ್ ಪಾಂಡ್ಯ ಪ್ರೇಯಸಿ ಎನ್ನಲಾದ ಬ್ರಿಟಿಷ್ ಸುಂದರಿ, ಗಾಯಕಿ ಜಾಸ್ಮಿನ್ ವಾಲಿಯಾ ನೋಡುಗರ ಗಮನ ಸೆಳೆದರು. ಇವರೆಲ್ಲರೂ ಸ್ಟ್ಯಾಂಡ್ಸ್ನಲ್ಲಿ ಅಭಿಮಾನಿಗಳ ಚೀರಾಟಕ್ಕೆ ದನಿಗೂಡಿಸಿದ್ದು ವಿಶೇಷ.
ಭಾರತೀಯ ಕ್ರಿಕೆಟಿಗರಾದ ತಿಲಕ್ ವರ್ಮ, ಅಭಿಷೇಕ್ ಶರ್ಮ, ಜಸ್ಪ್ರಿತ್ ಬುಮ್ರಾ, ಶಿಖರ್ ಧವನ್, ಸೂರ್ಯಕುಮಾರ್ ಯಾದವ್ ಮತ್ತು ಸೂರ್ಯ ಅವರ ಪತ್ನಿ ದೇವಿಶಾ ಶೆಟ್ಟಿ ಕ್ರಿಕೆಟ್ ಪ್ರೇಮಿಗಳ ಮಧ್ಯೆ ಕಾಣಿಸಿಕೊಂಡರು,(ಏಜೆನ್ಸೀಸ್).